ಬೆಂಗಳೂರು ಎರಡನೇ ಸುತ್ತಿನ ಸೀಟು ಹಂಚಿಕೆಯ ನಂತರ ಉಳಿದಿರುವ ಒಟ್ಟು 596 ವೈದ್ಯಕೀಯ ಸೀಟುಗಳು ಮಾಪ್ ಅಪ್ ಸುತ್ತಿಗೆ ಲಭ್ಯ ಇದ್ದು, ಅದರ ವಿವರಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಮಂಗಳವಾರ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.
ಈ ಸೀಟುಗಳನ್ನು ಪಡೆಯಲು ಆಸಕ್ತಿಯಿದ್ದಲ್ಲಿ ಅರ್ಹ ಅಭ್ಯರ್ಥಿಗಳು ಮುಂಚಿತವಾಗಿಯೇ ವೈದ್ಯಕೀಯ ಕೋರ್ಸ್ ಶುಲ್ಕ ಠೇವಣಿ ಪಾವತಿಸಿ ಯುಜಿನೀಟ್ -2024ರ ಆನ್‌ಲೈನ್ ಮಾಪ್ ಅಪ್ ಸುತ್ತಿನಲ್ಲಿ ಭಾಗವಹಿಸಬಹುದು.
ಸರ್ಕಾರಿ ಕೋಟಾದ 7, ಖಾಸಗಿ ಕೋಟಾದ 135, ಮ್ಯಾನೇಜ್‌ಮೆಂಟ್ ಕೋಟಾದ 453 ಮತ್ತು ಎನ್‌ಆರ್‌ಐ ಕೋಟಾದ ಒಂದು ಸೀಟು ಮಾಪ್ ಅಪ್ ಸುತ್ತಿಗೆ ಲಭ್ಯ ಇವೆ ಎಂದು ಪ್ರಾಧಿಕಾರ ಮಾಹಿತಿ ನೀಡಿದೆ.
ಆನ್‌ಲೈನ್/ ಚಲನ್ ಡೌನ್‌ಲೋಡ್ ಮಾಡಿಕೊಳ್ಳುವ ಮೂಲಕ ವೈದ್ಯಕೀಯ ಕೋರ್ಸ್ ಶುಲ್ಕ ಠೇವಣಿ ಪಾವತಿಸಲು ಅ.5ರಿಂದ 8ರವರೆಗೆ ಅವಕಾಶವಿರುತ್ತದೆ. ನಂತರ ಅ.7ರಿಂದ 14ರವರೆಗೆ ಆಪ್ಷನ್ ದಾಖಲಿಸಲು ಸಮಯ ನೀಡಲಾಗುತ್ತದೆ.
ಈ ಸುತ್ತಿನಲ್ಲಿ ಸೀಟು ಹಂಚಿಕೆಯಾಗಿ ಅಭ್ಯರ್ಥಿಯು ಕಾಲೇಜಿಗೆ ಪ್ರವೇಶ ಪಡೆಯಲು ವಿಫಲವಾದಲ್ಲಿ ಅಥವಾ ರದ್ದುಗೊಳಿಸಲು ಇಚ್ಚಿಸಿದಲ್ಲಿ ಅಥವಾ ಕಾಲೇಜಿಗೆ ವರದಿ ಮಾಡಿಕೊಳ್ಳದಿದ್ದಲ್ಲಿ ಅಭ್ಯರ್ಥಿಯು ಪಾವತಿಸಿದ್ದ ಶುಲ್ಕ ಠೇವಣಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು. ಅಲ್ಲದೆ, ದಂಡವನ್ನೂ ಪಾವತಿಸಬೇಕಾಗುತ್ತದೆ. ಮುಂದಿನ ವರ್ಷಗಳ ವೈದ್ಯಕೀಯ ಕೌನ್ಸೆಲಿಂಗ್‌ನಲ್ಲಿ ಭಾಗವಹಿಸಲು ಅರ್ಹತೆ ಇರುವುದಿಲ್ಲ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಎಚ್ಚರಿಸಿದ್ದಾರೆ.