Commonwealth Games: ಜಾವೆಲಿನ್ ಥ್ರೋ ಫೈನಲ್ಗೇರಿದ ನೀರಜ್, ರೋಹಿತ್, ಯಶ್ವೀರ್
ಗ್ಲಾಸ್ಗೋ: ಅವಳಿ ಒಲಿಂಪಿಕ್ಸ್ ಪದಕ ವಿಜೇತ ನೀರಜ್ ಚೋಪ್ರಾ (Neeraj Chopra) ಜತೆಗೆ ಇನ್ನಿಬ್ಬರು ಭಾರತೀಯರಾದ ರೋಹಿತ್ ಯಾದವ್ ಮತ್ತು ಯಶ್ವೀರ್ ಸಿಂಗ್ ಕಾಮನ್ವೆಲ್ತ್ ಗೇಮ್ಸ್ನ (Commonwealth Games) ಪುರುಷರ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಪದಕ ಸುತ್ತಿಗೆ ಪ್ರವೇಶ ಪಡೆದಿದ್ದಾರೆ.
ಗುರುವಾರ ನಡೆದ ಅರ್ಹತಾ ಸುತ್ತಿನಲ್ಲಿ ತೀವ್ರ ಚಳಿಯ ವಾತಾವರಣದಲ್ಲಿ ನೀರಜ್ ಚೋಪ್ರಾ ನಿರೀಕ್ಷಿತ ನಿರ್ವಹಣೆ ತೋರದಿದ್ದರೂ, ಗರಿಷ್ಠ 79.61 ಮೀ. ಎಸೆತದೊಂದಿಗೆ 5ನೇ ಸ್ಥಾನಿಯಾಗಿ ಫೈನಲ್ಗೇರಿದರು. ರೋಹಿತ್ ಯಾದವ್ ಗರಿಷ್ಠ 78.37 ಮೀ. ಮತ್ತು ಯಶ್ವೀರ್ ಸಿಂಗ್ ಗರಿಷ್ಠ 78.36 ಮೀ. ಎಸೆತದೊಂದಿಗೆ ಕ್ರಮವಾಗಿ 9 ಮತ್ತು 10ನೇ ಸ್ಥಾನಿಯಾಗಿ ಅಗ್ರ 12 ಸ್ಪರ್ಧಿಗಳ ಫೈನಲ್ಗೆ ಪ್ರವೇಶಿಸಿದರು.
2018ರ ಚಾಂಪಿಯನ್ ನೀರಜ್ ಎ ಗ್ರೂಪ್ನಲ್ಲಿ ಪ್ರತಿ ಸುತ್ತಿನಲ್ಲೂ ಕೊನೆಯದಾಗಿ ಎಸೆದರು. ಮೊದಲ ಯತ್ನದಲ್ಲಿ 76.28 ಮೀ. ಎಸೆದ ಅವರು, 2ನೇ ಯತ್ನದಲ್ಲಿ 79.61 ಮೀ. ಎಸೆದರು. ಫೈನಲ್ ಅರ್ಹತೆ ಖಚಿತವಾಗಿದ್ದರಿಂದ ಅವರು ಕೊನೇ ಎಸೆತವನ್ನು ಎಸೆಯಲಿಲ್ಲ. ಮಳೆಯಿಂದಾಗಿ ತಾಪಮಾನ 18 ಡಿಗ್ರಿ ಸೆಲ್ಸಿಯಸ್ಗೆ ತಗ್ಗಿದ್ದರಿಂದ ಎಲ್ಲ ಎಸೆತಗಾರರು, ಫೈನಲ್ಗೆ ನೇರಪ್ರವೇಶದ ಮಾನದಂಡವಾಗಿದ್ದ 84 ಮೀ. ತಲುಪಲು ಶಕ್ತರಾಗಲಿಲ್ಲ. ನಾಲ್ವರಷ್ಟೇ 80 ಮೀ. ಗಡಿ ದಾಟಿದರು.
ಶ್ರೀಲಂಕಾದ ರುಮೇಶ್ ತರಂಗ ಪಥಿರಗೆ ಸರ್ವಾಧಿಕ 82.84 ಮೀ. ಎಸೆತದೊಂದಿಗೆ ಅಗ್ರಸ್ಥಾನಿಯಾಗಿ ಫೈನಲ್ಗೇರಿದರೆ, ಗ್ರೆನೇಡಾದ ಆಂಡರ್ಸನ್ ಪೀಟರ್ಸ್ (81.29 ಮೀ.) 2ನೇ ಸ್ಥಾನಿಯಾದರು. ದಕ್ಷಿಣ ಆಫ್ರಿಕಾದ ಡೌ ಸ್ಮಿತ್ (80.64 ಮೀ.) ಮತ್ತು ಇಂಗ್ಲೆಂಡ್ನ ಬೆನ್ ಈಸ್ಟ್ (80.38 ಮೀ) 80 ಮೀ. ಗಡಿ ದಾಟಿದ ಇನ್ನಿಬ್ಬರು ಸ್ಪರ್ಧಿಗಳು. ಒಲಿಂಪಿಕ್ಸ್ ಹಾಗೂ ಕಾಮನ್ವೆಲ್ತ್ ಗೇಮ್ಸ್ ಹಾಲಿ ಚಾಂಪಿಯನ್ ಪಾಕಿಸ್ತಾನದ ಅರ್ಷದ್ ನದೀಂ ಗರಿಷ್ಠ 78.63 ಮೀ. ಎಸೆತದೊಂದಿಗೆ 7ನೇ ಸ್ಥಾನಿಯಾಗಿ ಫೈನಲ್ಗೇರಿದರು. 2ನೇ ಎಸೆತದಲ್ಲಿ ಫೌಲ್ ಮಾಡಿದ ಅವರು, 3ನೇ ಎಸೆತದಲ್ಲಿ 75.65 ಮೀ. ಎಸೆಯಲಷ್ಟೇ ಶಕ್ತರಾದರು. ಶುಕ್ರವಾರ ರಾತ್ರಿ ಫೈನಲ್ ನಡೆಯಲಿದೆ.
ನೇರಪ್ರಸಾರ: ಸೋನಿ ಸ್ಪೋರ್ಟ್ಸ್, ಸೋನಿ ಲಿವ್.