ಡೈಮಂಡ್ ಲೀಗ್ನಲ್ಲಿ ನೀರಜ್ ದ್ವೀತಿಯ; 9 ಸೆಂಟಿಮೀಟರ್ನಿಂದ ತಪ್ಪಿದ ಅಗ್ರಸ್ಥಾನ!
ಲೌಸಾನೆ: ಅವಳಿ ಒಲಿಂಪಿಕ್ಸ್ ಪದಕ ವಿಜೇತ ಭಾರತದ ಜಾವೆಲಿನ್ ತಾರೆ ನೀರಜ್ ಚೋಪ್ರಾ (
) ಕಳೆದೊಂದು ವರ್ಷದ ಅವಧಿಯ ತನ್ನ ಶ್ರೇಷ್ಠ ನಿರ್ವಹಣೆ ತೋರಿದ ನಡುವೆಯೂ ಲೌಸಾನೆ ಡೈಮಂಡ್ ಲೀಗ್ನಲ್ಲಿ ಎರಡನೇ ಸ್ಥಾನಕ್ಕೆ ಸಮಾಧಾನ ಕಂಡಿದ್ದಾರೆ. ಶ್ರೀಲಂಕಾದ ರುಮೇಶ್ ಪಥಿರಗೆ ಕೇವಲ 9 ಸೆಂಟಿಮೀಟರ್ ಅಂತರದಿಂದ ನೀರಜ್ರನ್ನು ಹಿಂದಿಕ್ಕಿ ಅಗ್ರಸ್ಥಾನ ಒಲಿಸಿಕೊಂಡರು.
28 ವರ್ಷದ ನೀರಜ್ ಚೋಪ್ರಾ ಶುಕ್ರವಾರ ರಾತ್ರಿ ನಡೆದ ಸ್ಪರ್ಧೆಯ ಎರಡನೇ ಯತ್ನದಲ್ಲಿ ಸರ್ವಾಧಿಕ 88.05 ಮೀ. ದೂರ ಈಟಿ ಎಸೆದರು. 2025ರ ಜೂನ್ನಲ್ಲಿ ಪ್ಯಾರಿಸ್ ಡೈಮಂಡ್ ಲೀಗ್ ಗೆಲುವಿನ ವೇಳೆ 88.16 ಮೀ. ದೂರ ಎಸೆದ ಬಳಿಕ ಇದೇ ಅವರ ಶ್ರೇಷ್ಠ ಎಸೆತವಾಗಿದೆ.
23 ವರ್ಷದ ಪಥಿರಗೆ 88.14 ಮೀ. ಎಸೆತದೊಂದಿಗೆ ಅಗ್ರಸ್ಥಾನ ಅಲಂಕರಿಸಿದರು. ಈ ಮೂಲಕ ಹಾಲಿ ವರ್ಷದ ದೋಹಾ ಡೈಮಂಡ್ ಲೀಗ್ ಮತ್ತು ಗ್ಲಾಸ್ಗೋ ಕಾಮನ್ವೆಲ್ತ್ ಗೇಮ್ಸ್ ಬಳಿಕ ಮತ್ತೊಮ್ಮೆ ನೀರಜ್ರನ್ನು ಹಿಮ್ಮೆಟ್ಟಿಸಿದರು. ಹಾಲಿ ವರ್ಷದ 10 ಸ್ಪರ್ಧೆಗಳಲ್ಲಿ ಪಥಿರಗೆಗೆ ಇದು 9ನೇ ಗೆಲುವಾಗಿದೆ.
ನೀರಜ್ ಮೊದಲ ಎಸೆತದಲ್ಲಿ 83.54 ಮೀ. ಎಸೆದರೆ, 2ನೇ ಯತ್ನದಲ್ಲಿ 88.05 ಮೀ. ಎಸೆತದೊಂದಿಗೆ ಪಥಿರಗೆ ಅವರನ್ನು ಹಿಂದಿಕ್ಕಿ ಅಗ್ರಸ್ಥಾನ್ಕಕೇರಿದ್ದರು. ಆದರೆ 3ನೇ ಯತ್ನದಲ್ಲಿ ಪಥಿರಗೆ ಮತ್ತೆ ನೀರಜ್ರನ್ನು ಹಿಂದಿಕ್ಕಿದರು. ನೀರಜ್ 3ನೇ ಎಸೆತದಲ್ಲಿ 83.72 ಮೀ. ಎಸೆದರೆ, 4ನೇ ಯತ್ನದಲ್ಲಿ ಫೌಲ್ ಮಾಡಿದರು. 5ನೇ ಎಸೆತ ಎಸೆಯಲಿಲ್ಲ. ಅಂತಿಮ ಎಸೆತದಲ್ಲಿ 82.15 ಮೀ. ಎಸೆಯಲಷ್ಟೇ ಶಕ್ತರಾದರು.
ಗ್ರೆನೇಡಾದ ಆಂಡರ್ಸನ್ ಪೀಟರ್ಸ್ 86.69 ಮೀ. ಎಸೆತದೊಂದಿಗೆ 3ನೇ ಸ್ಥಾನ ಗಳಿಸಿದರು. ಹಾಲಿ ವಿಶ್ವ ಚಾಂಪಿಯನ್ ಟ್ರಿನಿಡಾಡ್ನ ಕೇಶೋರ್ನ್ ವಾಲ್ಕಟ್ 83.71 ಮೀ. ಎಸೆತದೊಂದಿಗೆ 4ನೇ ಸ್ಥಾನಕ್ಕೆ ತೃಪ್ತಿಪಟ್ಟರು. ನೀರಜ್ ಈಗ ಡೈಮಂಡ್ ಲೀಗ್ ಅಂಕಪಟ್ಟಿಯಲ್ಲಿ 7ರಿಂದ 5ನೇ ಸ್ಥಾನಕ್ಕೇರಿದ್ದು, ಫೈನಲ್ಸ್ ಅರ್ಹತೆ ಅವಕಾಶ ಹೆಚ್ಚಿಸಿಕೊಂಡಿದ್ದಾರೆ. ಸೆ.4-5ರ ಬ್ರಸೆಲ್ಸ್ ಫೈನಲ್ನಲ್ಲಿ ಅಗ್ರ 6 ಸ್ಪರ್ಧಿಗಳು ಮಾತ್ರ ಭಾಗವಹಿಸಲಿದ್ದಾರೆ. ಆ.27ಕ್ಕೆ ಜ್ಯೂರಿಚ್ನಲ್ಲಿ ಮುಂದಿನ ಡೈಮಂಡ್ ಲೀಗ್ ಕೂಟ ನಡೆಯಲಿದೆ.
*ಪ್ರತಿ ಸ್ಪರ್ಧೆಯಲ್ಲೂ ನಾನು ಹಿಂದಿನ ಲಯಕ್ಕೆ ಮರಳುತ್ತಿರುವ ಭಾಸವಾಗುತ್ತಿದೆ. ಕೇವಲ 9 ಸೆಂಟಿ ಮೀಟರ್ನಿಂದ ಅಗ್ರಸ್ಥಾನ ತಪ್ಪಿದ್ದು ನಿಜಕ್ಕೂ ಅತ್ಯಂತ ನಿಕಟ ಸ್ಪರ್ಧೆ. 88 ಮೀ. ದೂರ ಎಸೆದಂತೆ ನನಗೆ ಅನಿಸಲಿಲ್ಲ. ನಾನು ಕಠಿಣ ಪರಿಶ್ರಮ ಪಟ್ಟೆ ಮತ್ತು ನನ್ನ ತಾಂತ್ರಿಕತೆಯತ್ತ ಗಮನಹರಿಸಿದೆ.