ದೋಹಾ ಡೈಮಂಡ್​ ಲೀಗ್​ನಲ್ಲಿ ನೀರಜ್​ 4ನೇ ಸ್ಥಾನಕ್ಕೆ ತೃಪ್ತಿ; ಕಾಮನ್ವೆಲ್ತ್​ ಗೇಮ್ಸ್​ ಅರ್ಹತೆಯ ಸಮಾಧಾನ 
ನ್ಯೂಸ್

ದೋಹಾ ಡೈಮಂಡ್​ ಲೀಗ್​ನಲ್ಲಿ ನೀರಜ್​ 4ನೇ ಸ್ಥಾನಕ್ಕೆ ತೃಪ್ತಿ; ಕಾಮನ್ವೆಲ್ತ್​ ಗೇಮ್ಸ್​ ಅರ್ಹತೆಯ ಸಮಾಧಾನ

ದೋಹಾ: ಅವಳಿ ಒಲಿಂಪಿಕ್ಸ್​ ಪದಕ ವಿಜೇತ ಭಾರತದ ಜಾವೆಲಿನ್​ ಥ್ರೋ ತಾರೆ ನೀರಜ್​ ಚೋಪ್ರಾ (Neeraj Chopra) ಹಾಲಿ ವರ್ಷದ ಮೊದಲ ಸ್ಪರ್ಧೆಯಲ್ಲಿ ಪೋಡಿಯಂ ಫಿನಿಶ್​ ಕಾಣಲು ವಿಫಲರಾಗಿದ್ದಾರೆ. ಶುಕ್ರವಾರ ರಾತ್ರಿ ನಡೆದ ದೋಹಾ ಡೈಮಂಡ್​ ಲೀಗ್​ (Doha Diamond League) ಸ್ಪರ್ಧೆಯಲ್ಲಿ ನೀರಜ್​ ಸರ್ವಾಧಿಕ 85.69 ಮೀ. ಎಸೆತದೊಂದಿಗೆ 4ನೇ ಸ್ಥಾನಕ್ಕೆ ತೃಪ್ತಿಪಟ್ಟರು. ಆದರೆ ಮುಂಬರುವ ಗ್ಲಾಸ್ಗೋ ಕಾಮನ್ವೆಲ್ತ್​ ಗೇಮ್ಸ್​ಗೆ ಅರ್ಹತೆ ಸಂಪಾದಿಸುವಲ್ಲಿ ಯಶಸ್ವಿಯಾಗಿದ್ದಾರೆ.
28 ವರ್ಷದ ನೀರಜ್​ ಬೆನ್ನುನೋವಿನ ಸಮಸ್ಯೆಯಿಂದ ಚೇತರಿಸಿಕೊಂಡು ಕಳೆದ ವರ್ಷದ ಸೆಪ್ಟೆಂಬರ್​ನಲ್ಲಿ ನಡೆದ ವಿಶ್ವ ಚಾಂಪಿಯನ್​ಷಿಪ್​ ಬಳಿಕ ಮೊದಲ ಬಾರಿ ಸ್ಪರ್ಧೆಗಿಳಿದರು. ಆದರೆ ಕಳೆದ 4 ವರ್ಷಗಳಲ್ಲಿ ಮೊದಲ ಬಾರಿ ಡೈಮಂಡ್​ ಲೀಗ್​ನಲ್ಲಿ ಅಗ್ರ 2ರೊಳಗೆ ಸ್ಥಾನ ಪಡೆಯಲು ವಿಲರಾದರು. ಶ್ರೀಲಂಕಾದ ರಮೇಶ್​ ತರಂಗ ಪಥಿರಗೆ 88.68 ಮೀ. ಎಸೆತದೊಂದಿಗೆ ಅಗ್ರಸ್ಥಾನ ಅಲಂಕರಿಸಿದರು. ಗ್ರೆನೇಡಾದ ಆಂಡರ್​ಸನ್​ ಪೀಟರ್ಸ್​ (86.38 ಮೀ) ದ್ವೀತಿಯ ಮತ್ತು ಅಮೆರಿಕದ ಕರ್ಟಿಸ್​ ಥಾಂಪ್ಸನ್​ (85.99ಮೀ) ತೃತೀಯ ಸ್ಥಾನ ಪಡೆದರು.

ಫೌಲ್​ನೊಂದಿಗೆ ಸ್ಪರ್ಧೆ ಆರಂಭಿಸಿದ ನೀರಜ್​, 2ನೇ ಯತ್ನದಲ್ಲಿ 82.77 ಮೀ. ಎಸೆದರು. ಈ ಮೂಲಕ ಕಾಮನ್ವೆಲ್ತ್​ ಅರ್ಹತೆಗೆ ಭಾರತೀಯ ಅಥ್ಲೆಟಿಕ್ಸ್​ ಒಕ್ಕೂಟ ನಿಗದಿಪಡಿಸಿದ್ದ 82.61 ಮೀ. ಮಾನದಂಡವನ್ನು ದಾಟಿದರು. 3, 4ನೇ ಯತ್ನದಲ್ಲಿ ಕ್ರಮವಾಗಿ 85.69 ಮತ್ತು 83.45 ಮೀ. ಎಸೆದರೆ, 5ನೇ ಯತ್ನದಲ್ಲಿ ಫೌಲ್​ ಮಾಡಿದರು. ನೀರಜ್​ ಕಳೆದ ವರ್ಷದ ದೋಹಾ ಡೈಮಂಡ್​ ಲೀಗ್​ನಲ್ಲಿ ಅಗ್ರಸ್ಥಾನ ಪಡೆದಿದ್ದರು.