ನ್ಯೂಸ್

ಸಾಂಕ್ರಾಮಿಕ ರೋಗಗಳ ತಡೆಗೆ ಅಗತ್ಯ ಕ್ರಮ: ಸಚಿವ ದಿನೇಶ್ ಗುಂಡೂರಾವ್ | Chikungunya 16th year cycle

ಬೆಂಗಳೂರು: ಮಳೆಗಾಲದಲ್ಲಿ ರೋಗಗಳು ಹೆಚ್ಚಿನ ಸಂಖ್ಯೆಯಲ್ಲಿ ಹರಡುತ್ತವೆ. ಸಾಂಕ್ರಾಮಿಕ ರೋಗಗಳ ತಡೆಗೆ ಈಗಿನಿಂದಲೇ ಮುನ್ನೆಚ್ಚರಿಕೆ ಕ್ರಮಕೈಗಳನ್ನು ಕೈಗೊಳ್ಳಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಸೂಚಿಸಿದರು.

ವಿಧಾನಸೌಧ ಸಮಿತಿ ಕೊಠಡಿಯಿಂದ ಜಿಲ್ಲಾಧಿಕಾರಿಗಳು, ಜಿ.ಪಂ. ಸಿಇಒಗಳು ಮತ್ತು ಜಿಲ್ಲಾ ಆರೋಗ್ಯಾಧಿಕಾರಿಗಳ ಜತೆಗೆ ಮಂಗಳವಾರ ವಿಡಿಯೋ ಸಂವಾದ ನಡೆಸಿದ ಅವರು, ಚಿಕೂನ್ ಗುನ್ಯಾ, ಡೆಂಘೆ ರೋಗಗಳನ್ನು ನಿಯಂತ್ರಿಸಲು ಜಿಲ್ಲಾ ಆಡಳಿತ ಹಾಗೂ ಆರೋಗ್ಯ ಇಲಾಖೆ ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು ಎಂದರು.

16 ವರ್ಷಗಳಿಗೊಮ್ಮೆ ಹೆಚ್ಚಳ

ಪ್ರತಿ 16 ವರ್ಷಗಳಿಗೊಮ್ಮೆ ಚಿಕೂನ್ ಗುನ್ಯಾ ಹಾವಳಿ ಹೆಚ್ಚಾಗಿರುತ್ತದೆ. ಈ ಬಾರಿ ಚಿಕೂನ್ ಗುನ್ಯಾ 16ನೇ ವರ್ಷದ ಆವರ್ತನವಾಗಿದೆ. ಪರಿಸ್ಥಿತಿ ಎದುರಿಸಲು ಆರೋಗ್ಯ ಇಲಾಖೆ ಅಧಿಕಾರಿಗಳು ಸಜ್ಜಾಗಬೇಕು. ಚಿಕೂನ್ ಗುನ್ಯಾ ತಡೆಗಟ್ಟಲು ಆಂದೋಲನದ ರೀತಿಯಲ್ಲಿ ಕೆಲಸ ಮಾಡಬೇಕು ಎಂದು ದಿನೇಶ್ ಗುಂಡೂರಾವ್ ಸಲಹೆ ನೀಡಿದರು.

ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷಗುಪ್ತಾ, ಆಯುಕ್ತ ಶಿವಕುಮಾರ್, ಎನ್‌ಎಚ್‌ಎಂ ವ್ಯವಸ್ಥಾಪಕ ನಿರ್ದೇಶಕ ನವೀನ್ ಭಟ್, ವಿಡಿಯೋ ಸಂವಾದದ ಸಭೆಯಲ್ಲಿ ಎಲ್ಲ ಡಿಸಿ, ಜಿ.ಪಂ. ಸಿಇಒ, ಜಿಲ್ಲಾ ಆರೋಗ್ಯಾಧಿಕಾರಿಗಳು ಭಾಗವಹಿಸಿದ್ದರು.