ನ್ಯೂಸ್

ಬುಡಕಟ್ಟು ಸಮುದಾಯಗಳಿಗೆ ಅಗತ್ಯ ಸೌಲಭ್ಯ: ಸಿಎಂ ಸಿದ್ದರಾಮಯ್ಯ ಸೂಚನೆ

ಬೆಂಗಳೂರು: ಅರಣ್ಯ ಹಾಗೂ ಅರಣ್ಯದಂಚಿನಲ್ಲಿ ವಾಸವಿರುವ ಆದಿವಾಸಿಗಳಿಗೆ ಅಗತ್ಯ ಸವಲತ್ತುಗಳನ್ನು ಕಲ್ಪಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಎರಡು ತಿಂಗಳು ಗಡುವು ವಿಧಿಸಿ, ಈ ಸೂಚನೆ ಪಾಲಿಸದಿದ್ದರ ಕ್ರಮಕೈಗೊಳ್ಳುವುದಾಗಿ ಅಧಿಕಾರಿಗಳಿಗೆ ಎಚ್ಚರಿಸಿದ್ದಾರೆ.

ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮೊದಲ ಬಾರಿಗೆ ಸಿಎಂ ಅಧ್ಯಕ್ಷತೆಯಲ್ಲಿ ಅಳಿವಿನಂಚಿನಲ್ಲಿರುವ ಆದಿವಾಸಿ ಹಾಗೂ ಬುಡಕಟ್ಟು ಸಮುದಾಯಗಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚೆಗೆ ಮಂಗಳವಾರ ಸಚಿವರು, ಅಧಿಕಾರಿಗಳ ಜಂಟಿ ಸಭೆ ನಡೆಯಿತು.

ಬುಡಕಟ್ಟು ಸಮುದಾಯಗಳ ಸ್ಥಿತಿಗತಿ ಅವಲೋಕನ, ಸಮಸ್ಯೆಗಳನ್ನು ಪಟ್ಟಿ ಮಾಡಿ ಪರಿಹರಿಸಲು ನಿರ್ದೇಶನ ನೀಡುವುದಕ್ಕೆ ಈ ಚರ್ಚೆ ಸೀಮಿತವಾಗಿಲ್ಲ. ಸಭೆಯಲ್ಲಿ ಕೈಗೊಂಡ ನಿರ್ಣಯಗಳನ್ನು ಜಾರಿ ಮಾಡಲೇಬೇಕು ಎಂದು ತಾಕೀತು ಮಾಡಿದರು.

ಎರಡು ತಿಂಗಳ ನಂತರ ಮತ್ತೆ ಸಭೆ ಕರೆಯುತ್ತೇನೆ ನಿರ್ಣಯಗಳು ಜಾರಿಯಾಗದೇ ಇದ್ದರೆ ಸಹಿಸುವುದಿಲ್ಲ, ಜಿಲ್ಲಾಧಿಕಾರಿಗಳ ವಿರುದ್ಧ ಕ್ರಮ ನಿಶ್ಚಿತವೆಂದು ಸಿಎಂ ಸಿದ್ದರಾಮಯ್ಯ ಖಡಕ್ ಆಗಿ ಎಚ್ಚರಿಸಿದರು.

ಆರೋಗ್ಯ, ಶಿಕ್ಷಣ, ರಸ್ತೆ, ಕುಡಿಯುವ ನೀರು, ವಿದ್ಯುತ್ ಸಂಪರ್ಕ ಸೇರಿ ಅಗತ್ಯ ಸವಲತ್ತು ಕಲ್ಪಿಸುವುದು, ಆದಿವಾಸಿ ಹಾಡಿಗಳ ನಿವಾಸಿಗಳಿಗೆ ಸೂಕ್ತ ಉದ್ಯೋಗ ಒದಗಿಸಬೇಕು ಎಂಬ ಸಮುದಾಯಗಳ ಬೇಡಿಕೆಗಳನ್ನು ಸಭೆ ಪರಾಮರ್ಶಿಸಿತು.

ಹಕ್ಕುಪತ್ರ ವಿತರಣೆ

ಬುಡಕಟ್ಟು ಜನರಿಗೆ ಹಕ್ಕುಪತ್ರ ವಿತರಣೆಗೆ ಅಡ್ಡಿಯಾಗಿರುವ ತಾಂತ್ರಿಕ ತೊಡಕು ನಿವಾರಿಸಿ, ಹಕ್ಕುಪತ್ರ ಹೊಂದಿದವರು ಸರ್ಕಾರದ ಎಲ್ಲ ಸವಲತ್ತುಗಳನ್ನು ಅರ್ಹತೆ ಪಡೆಯುವುದಕ್ಕೆ ಕ್ರಮವಹಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಸೂಚಿಸಿದರು.

ಅರಣ್ಯಹಕ್ಕು ಕಾಯ್ದೆಯಡಿ ಬುಡಕಟ್ಟು ಸಮುದಾಯದ ಅರಣ್ಯವಾಸಿಗಳಿಗೆ 12,222 ಅರ್ಜಿ ಸ್ವೀಕಾರ, 4,856 ಹಕ್ಕುಪತ್ರ ವಿತರಣೆ, 6,363 ಎಕರೆ ಮಂಜೂರು. 6,808 ಅರ್ಜಿಗಳು ತಿರಸ್ಕೃತ.

ಇದೇ ಕಾಯ್ದೆಯಡಿ ಇತರ ಪಾರಂಪರಿಕ ಅರಣ್ಯ ವಾಸಿಗಳಿಗೆ ಹಕ್ಕುಪತ್ರಕ್ಕೆ 1,626 ಅರ್ಜಿಗಳು ಸ್ವೀಕಾರ, 531 ಹಕ್ಕುಪತ್ರ ವಿತರಣೆ, 104 ಎಕರೆ ಜಮೀನು ಮಂಜೂರು, 1,095 ಅರ್ಜಿ ತಿರಸ್ಕೃತ.

ಸಮುದಾಯದ ಹಕ್ಕುಪತ್ರಕ್ಕಾಗಿ 260 ಅರ್ಜಿಗಳು ಸ್ವೀಕಾರ, 160 ಹಕ್ಕುಪತ್ರ ವಿತರಣೆ, 38,118 ಎಕರೆ ಜಮೀನು ಮಂಜೂರು ಮಾಡಲಾಗಿದೆ ಎಂದು ಸಭೆಗೆ ಮಾಹಿತಿ ನೀಡಲಾಯಿತು.