ಶೃಂಗೇರಿ: ಸಿರಿಮನೆ ಜಲಪಾತ ವೀಕ್ಷಿಸಲು ಬರುವ ಪ್ರವಾಸಿಗರಿಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಿ ಸಮಿತಿಗೆ ಬರುವ ಆದಾಯವನ್ನು ಗ್ರಾಮದ ಅಭಿವೃದ್ಧಿಗೆ ಬಳಕೆ ಮಾಡಲಾಗುತ್ತಿದೆ ಎಂದು ಸಿಂದೋಡಿ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಜಯಣ್ಣ ಹೇಳಿದರು.
ಗ್ರಾಮ ಅರಣ್ಯ ಸಮಿತಿಯಿಂದ ಸಮಿತಿ ವ್ಯಾಪ್ತಿಗೆ ಒಳಪಟ್ಟ ಕುಟುಂಬದ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಬುಧವಾರ ಪ್ರೋತ್ಸಾಹ ಧನದ ಚೆಕ್ ವಿತರಿಸಿ ಮಾತನಾಡಿದರು.
ರಾಜ್ಯದ ಆಕರ್ಷಿಣೀಯ ಜಲಪಾತದಲ್ಲಿ ಇದು ಒಂದಾಗಿದೆ. ವರ್ಷವಿಡೀ ಧುಮ್ಮಿಕ್ಕುವ ಜಲಪಾತ ವೀಕ್ಷಿಸಲು ದೇಶದ ವಿವಿಧೆಡೆಯಿಂದ ಜನರು ಆಗಮಿಸುತ್ತಾರೆ. ಶ್ರೀ ಶಾರದಾ ಪೀಠಕ್ಕೆ ಆಗಮಿಸುವ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ. ಜಲಪಾತದವರೆಗೂ ವ್ಯವಸ್ಥಿತ ಡಾಂಬರ್ ರಸ್ತೆ ಇದೆ. ಪ್ರತಿವರ್ಷ ನಡೆಯುವ ಸಮಿತಿ ಸರ್ವ ಸದಸ್ಯರ ಸಭೆಯ ನಿರ್ಧಾರದಂತೆ ಆದಾಯವನ್ನು ಗ್ರಾಮಕ್ಕೆ ಬಳಕೆ ಮಾಡಿಕೊಡಲಾಗುತ್ತದೆ ಎಂದರು.
ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನದ ಚೆಕ್ ನೀಡಲಾಯಿತು. ಸಮಿತಿ ಕಾರ್ಯದರ್ಶಿ ಾರೂಕ್ ಅಬ್ದುಲ್ಲಾ, ಸದಸ್ಯರಾದ ನಯನ, ಪ್ರಜ್ವಲ್, ಪ್ರಸಾದಿ, ಜ್ಞಾನೇಶ್, ಮಲ್ಲಿಕಾ, ಚೈತ್ರಾ, ಭವಾನಿ, ಶಾರದಾ, ಸವಿತಾ ಇದ್ದರು.