ನ್ಯೂಸ್

ಶೈಕ್ಷಣಿಕ ಸುಧಾರಣೆಗೆ ಅಗತ್ಯ ಸಹಕಾರ

ಪ್ರಸಿನ್ ಕೆ.ಆರ್

ಪಿರಿಯಾಪಟ್ಟಣ: ತಾಲೂಕಿನಲ್ಲಿ ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಅಗತ್ಯ ಸಹಕಾರ ನೀಡುವುದಾಗಿ ಸಚಿವ ಕೆ.ವೆಂಕಟೇಶ್ ತಿಳಿಸಿದರು.

ಪಟ್ಟಣದ ಡಿಪಿಬಿಎಸ್ ಸರ್ಕಾರಿ ಜೂನಿಯರ್ ಕಾಲೇಜಿನ ಆವರಣದಲ್ಲಿ ಹೆಚ್ಚುವರಿ ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಭಾನುವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ತಾಲೂಕಿನ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ದಾಖಲಾಗುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದ್ದು, ವಿದ್ಯಾರ್ಥಿಗಳ ಕಲಿಕೆಗೆ ಮೂಲ ಸೌಲಭ್ಯಗಳ ಕೊರತೆಯಾಗದಂತೆ ಶಿಕ್ಷಣ ಇಲಾಖೆ ಅಧಿಕಾರಿಗಳು ಕ್ರಮ ವಹಿಸುವಂತೆ ಸೂಚಿಸಿದರು. ಕಾಲೇಜುಗಳಲ್ಲಿ ಹೆಚ್ಚಿನ ಕೋರ್ಸ್‌ಗಳಿಗೆ ವಿದ್ಯಾರ್ಥಿಗಳು ಮತ್ತು ಪಾಲಕರಿಂದ ಬೇಡಿಕೆ ಬಂದಲ್ಲಿ ಹೆಚ್ಚುವರಿ ಕೋರ್ಸ್ ತೆರೆಯಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಪಟ್ಟಣದ ಡಿಪಿಬಿಎಸ್ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ನೂತನವಾಗಿ ಪಿಸಿಎಂಸಿ ವಿಭಾಗವನ್ನು ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಆರಂಭಿಸಲಾಗಿದ್ದು, ವಿದ್ಯಾರ್ಥಿಗಳು ಉಪಯೋಗವನ್ನು ಪಡೆಯುವಂತೆ ತಿಳಿಸಿದರು.

ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು ಕಾಲೇಜಿನ ಕಾಂಪೌಂಡ್ ಗೋಡೆ ದುರಸ್ತಿ ಹಾಗೂ ಶಿಥಿಲ ಗೊಂಡಿರುವ ಕಾಲೇಜಿನ ಭಾಗಗಳನ್ನು ದುರಸ್ತಿಗೊಳಿಸಿ ಗೋಡೆಗಳಿಗೆ ಬಣ್ಣ ಬಳಿಯಲು ವ್ಯವಸ್ಥೆ ಕಲ್ಪಿಸುವಂತೆ ಸಚಿವರಿಗೆ ಮನವಿ ಸಲ್ಲಿಸಿದರು.

ಕೊಪ್ಪ ಗ್ರಾಮದಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜು ಕಟ್ಟಡದ ನಿರ್ಮಾಣಕ್ಕೆ 27.66 ಲಕ್ಷ ರೂ ಅನುದಾನ ಈಗಾಗಲೇ ಸರ್ಕಾರದಿಂದ ಬಿಡುಗಡೆಯಾಗಿದ್ದು ಜಾಗದ ಕೊರತೆಯಿಂದಾಗಿ ನಿರ್ಮಾಣವಾಗಬೇಕಾಗಿದ್ದ ಕಟ್ಟಡ ಸ್ಥಗಿತಗೊಂಡಿರುವ ಹಿನ್ನೆಲೆ ಮಂಜೂರಾಗಿರುವ ಹಣ ಹಿಂದಕ್ಕೆ ಹೋಗದ ಹಾಗೆ ಪಟ್ಟಣದ ಡಿಪಿಬಿಎಸ್ ಸರ್ಕಾರಿ ಕಾಲೇಜಿನ ಶೈಕ್ಷಣಿಕ ಪ್ರಗತಿ ಮತ್ತು ಅಭಿವೃದ್ಧಿಗಾಗಿ ಹಣವನ್ನು ವರ್ಗಾಯಿಸಿಕೊಡುವಂತೆ ಈಗಾಗಲೇ ಇಲಾಖೆಯ ನಿರ್ದೇಶಕರು ಮತ್ತು ಕಾರ್ಯದರ್ಶಿಯವರಿಗೆ ಮನವಿ ಸಲ್ಲಿಸಲಾಗಿದ್ದು, ನಮ್ಮ ಮನವಿಯನ್ನು ಪುರಸ್ಕರಿಸಲು ಕ್ರಮ ವಹಿಸಬೇಕೆಂದು ಸಚಿವರಲ್ಲಿ ಬೇಡಿಕೆ ಸಲ್ಲಿಸಿದರು. ಮನವಿಯನ್ನು ಸ್ವೀಕರಿಸಿದ ಸಚಿವ ಕೆ.ವೆಂಕಟೇಶ್ ಪರಿಶೀಲನೆ ನಡೆಸುವುದಾಗಿ ಹೇಳಿದರು.

ತಹಸೀಲ್ದಾರ್ ಕುಂಜಿ ಅಹಮದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಹಮತ್ ಜಾನ್ ಬಾಬು, ಪ್ರಾಂಶುಪಾಲ ಶಿವಶಂಕರ್, ನಿವೃತ್ತ ಉಪನ್ಯಾಸಕ ಬಿ.ಎಂ.ಶಿವಸ್ವಾಮಿ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಎಚ್.ಕೆ.ಮಂಜುನಾಥ್, ಟಿ.ಈರಯ್ಯ, ಮಂಜುಳಾ ನಾಗೇಶ್, ಉಪನ್ಯಾಸಕ ಮುರುಳಿ, ಬಸವರಾಜ್, ಸಪ್ನಾ, ಕುಮಾರಿ, ಸ್ವಾಮಿಗೌಡ, ಅನಿತಾ, ಸೈಯದ್ ಮುದಾಫೀರ್, ಚೆಲುವಯ್ಯ, ಪುಟ್ಟರಾಜು ಇತರರು ಇದ್ದರು.