ಬೆಂಗಳೂರು:
ರಾಜ್ಯ ಸರ್ಕಾರ ಚುನಾವಣೆಯಲ್ಲಿ ಅಪಪ್ರಚಾರ ಮಾಡಿದ್ದರೂ ಬಿಜೆಪಿಯ 17, ಜೆಡಿಎಸ್‌ನ ಇಬ್ಬರನ್ನು ಗೆಲ್ಲಿಸಿ ಒಟ್ಟು 19 ಸ್ಥಾನಗಳು ಎನ್‌ಡಿಎ ನೇತೃತ್ವದ ಮೈತ್ರಿಕೂಟಕ್ಕೆ ಲಭಿಸಿರುವುದು ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವಕ್ಕೆ ಸಿಕ್ಕ ಬೆಂಬಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಗ್ಯಾರಂಟಿಗಳ ನಡುವೆ ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ಕೊನೆಗೂ ಡಬಲ್ ಡಿಜಿಟ್ ದಾಟಲು ಆಗಿಲ್ಲ ಎಂದು ವಿಶ್ಲೇಷಿಸಿದರು.
ಈ ಬಾರಿ ತಮಗೆ ಹೆಚ್ಚು ಜನರನ್ನು ತಲುಪಲು ಪೂರಕವಾದ ಎಂಎಸ್‌ಎಂಇ, ಕಾರ್ಮಿಕ ಮತ್ತು ಉದ್ಯೋಗ ಖಾತೆಯನ್ನು ಕೊಟ್ಟಿರುವುದು ಸಂತಸ ತಂದಿದೆ. ಅದಕ್ಕಾಗಿ ಮೋದಿಯವರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ತಮ್ಮನ್ನು ಗೆಲ್ಲಿಸಿದ ಕಾರ್ಯಕರ್ತರು, ಮುಖಂಡರು ಮತ್ತು ಮತದಾರ ಬಾಂಧವರಿಗೆ ಅವರು ಅಭಿನಂದನೆಗಳನ್ನು ಸಲ್ಲಿಸಿದರು.
ದೊಡ್ಡ ಪ್ರಮಾಣದಲ್ಲಿ ಕೈಗಳಿಗೆ ಉದ್ಯೋಗ ಕೊಡುವ ಇಲಾಖೆ ಎಂಎಸ್‌ಎಂಇ. ದೇಶದ ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸುವ ಜವಾಬ್ದಾರಿಯನ್ನು ನನಗೆ ನೀಡಿದ್ದಾರೆ. ಕಿರು ಮತ್ತು ಮಧ್ಯಮ ಕೈಗಾರಿಕೆಗಳಿಗೆ ಆದ್ಯತೆ ನೀಡಿ ಕೆಲಸ ಮಾಡುತ್ತೇನೆ ಎಂದರು.
ಸಂಘಟಿತ- ಅಸಂಘಟಿತ ಕಾರ್ಮಿಕರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ, ಕಟ್ಟಡ ಕಾರ್ಮಿಕರು, ಬೇರೆ ಬೇರೆ ವಲಯದ ಕಾರ್ಮಿಕರಿಗೆ ಅನುಕೂಲ ಮಾಡುವ ಕುರಿತು ಚರ್ಚೆ ನಡೆಯುತ್ತಿದೆ ಎಂದರು.
ಕಾದು ನೋಡೋಣ
ಯಡಿಯೂರಪ್ಪ ಅವರು ಉತ್ತಮವಾದ ರಾಜಕೀಯ ನೀಡಿದವರು. ಯಾವತ್ತೂ ಅವರ ಮೇಲೆ ಇಂಥ ಆರೋಪ ಬಂದಿಲ್ಲ. ಕೋರ್ಟ ಈ ನೆಲದ ಕಾನೂನನ್ನು ಎತ್ತಿ ಹಿಡಿಯಲಿದೆ. ರಾಜ್ಯದ ಕಾಂಗ್ರೆಸ್ ಸರ್ಕಾರ ಎಲ್ಲರ ಮೇಲೆ ಕೇಸು ಹಾಕುವಂಥ ಪ್ರಕರಣವನ್ನೂ ಜನತೆ ಗಮನಿಸುತ್ತಿದ್ದಾರೆ. ಕಾದು ನೋಡೋಣ ಎಂದರು.
ರಕ್ಷಣೆ ಇಲ್ಲದ ಸ್ಥಿತಿ
ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದ ಬಳಿಕ ಯಾರಿಗೂ ರಕ್ಷಣೆ ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ನಿರಂತರವಾಗಿ ಕೊಲೆಗಳು ನಡೆಯುತ್ತಿವೆ. ಸರಕಾರ ಕೊಲೆಗಾರರ ಪರವಾಗಿ ನಿಂತಿರುವುದೇ ಈ ಎಲ್ಲ ಕೊಲೆಗಳಿಗೆ ಕಾರಣ. ಕೊಲೆಗಡುಕರಿಗೆ ಭಯ ಇಲ್ಲ ಎಂಬ ಸ್ಥಿತಿ ಈ ರಾಜ್ಯದಲ್ಲಿ ನಿರ್ಮಾಣವಾಗಿದೆ ಎಂದು ಆಕ್ಷೇಪಿಸಿದರು.
ರಕ್ಷಣೆ ಮಾಡುತ್ತಿರುವುದೇಕೆ?
ನಟ ದರ್ಶನ್ ವಿಚಾರದಲ್ಲಿ ಅವರ ರಕ್ಷಣೆ ಮಾಡುತ್ತಿರುವುದೇಕೆ? ಅವರಿರುವ ಜಾಗಕ್ಕೆ- ಪೊಲೀಸ್ ಠಾಣೆಗೆ ಈ ರೀತಿಯ ರಕ್ಷಣೆ ಒದಗಿಸಿದ್ದು, ಜನಸಾಮಾನ್ಯರಿಗೆ ಒಂದು ಕಾನೂನು, ದೊಡ್ಡವರಿಗೆ ಮತ್ತೊಂದು ಕಾನೂನು, ಕಾಂಗ್ರೆಸ್ ಕಾರ್ಯಕರ್ತರಿಗೆ ಇನ್ನೊಂದು ಕಾನೂನು ಎಂಬ ಸಂದೇಶವನ್ನು ರಾಜ್ಯದಲ್ಲಿ ನೀಡುತ್ತಿದೆ. ಕಾನೂನಿನನ್ವಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.