ನ್ಯೂಸ್

ಪ್ರಧಾನಿ ಮೋದಿ ಜೊತೆ ಎನ್​ಸಿಪಿ ಅಧ್ಯಕ್ಷ ಶರದ್ ಪವಾರ್​ ಮಾತುಕತೆ!

rashmirhebbur

ನವದೆಹಲಿ : ರಾಜ್ಯಸಭಾ ಸದಸ್ಯ ಹಾಗೂ ನಾಷನಲಿಸ್ಟ್​ ಕಾಂಗ್ರೆಸ್ ಪಾರ್ಟಿ(ಎನ್​ಸಿಪಿ) ಅಧ್ಯಕ್ಷ ಶರದ್​ ಪವಾರ್​ ಅವರು ಇಂದು ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸಕ್ಕೆ ಭೇಟಿ ನೀಡಿದರು. ಮೋದಿ ಮತ್ತು ಪವಾರ್​ ನಡುವೆ ಸುಮಾರು 50 ನಿಮಿಷಗಳ ಮಾತುಕತೆ ನಡೆಯಿತು ಎನ್ನಲಾಗಿದ್ದು, ಈ ಸಭೆಯ ಬಗ್ಗೆ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿದೆ.

ಕೆಲವು ಸಮಯದಿಂದ ಪವಾರ್​, ಪ್ರಧಾನಿ ಮೋದಿ ಅವರನ್ನು ಭೇಟಿಯಾಗುವ ಅಪೇಕ್ಷೆ ಹೊಂದಿದ್ದು, ಇಂದು ಅದಕ್ಕೆ ಕಾಲ ಕೂಡಿಬಂದಿತು ಎನ್ನಲಾಗಿದೆ. ಸಂಸತ್ತಿನ ಮಳೆಗಾಲದ ಅಧಿವೇಶನ ಆರಂಭವಾಗುವ ಎರಡು ದಿನಗಳ ಮುನ್ನ ಈ ಭೇಟಿ ನಡೆದಿದೆ.

ಜೊತೆಗೆ ಮಹಾರಾಷ್ಟ್ರದಲ್ಲಿ ಎನ್​ಸಿಪಿ ಮತ್ತು ಶಿವಸೇನೆಯೊಂದಿಗಿನ ನಂಟಿನಲ್ಲಿ ಭಿನ್ನಾಭಿಪ್ರಾಯ ತೋರಿಬಂದಿದೆ ಎಂಬ ಮಾತುಗಳು ಕೇಳಿಬಂದಿವೆ. ಭಾರತದ ರಾಷ್ಟ್ರಪತಿ ಸ್ಥಾನಕ್ಕೆ ಶರದ್​ ಪವಾರ್​ ಅವರು ಅಭ್ಯರ್ಥಿ ಆಗಬಹುದೆಂಬ ಊಹೆಗಳೂ ಇತ್ತೀಚೆಗೆ ಮೂಡಿಬಂದಿದ್ದವು.

ಮಹಾರಾಷ್ಟ್ರ ಸರ್ಕಾರದ ಭಾಗವಾಗಿರುವ ಎನ್​ಸಿಪಿಯ ಮುಖ್ಯಸ್ಥರಾಗಿರುವ ಪವಾರ್, ನೂತನವಾಗಿ ರಚಿಸಲಾಗಿರುವ ಕೇಂದ್ರ ಸಹಕಾರ ಸಚಿವಾಲಯದ ಬಗ್ಗೆ ಕಾಳಜಿ ವ್ಯಕ್ತಪಡಿಸಿದರು. ಹಾಗೂ ರೈತರ ವಿಚಾರಗಳನ್ನು ಪ್ರಧಾನಿಯೊಂದಿಗೆ ಚರ್ಚೆ ಮಾಡಿದರು ಎಂದು ಎನ್​ಸಿಪಿ ಮೂಲಗಳು ಹೇಳಿವೆ. ಸಹಕಾರಿ ಕ್ಷೇತ್ರದಲ್ಲಿ ಕಾನೂನು ರಚಿಸುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಸೇರಿದ್ದು, ಕೇಂದ್ರದಲ್ಲಿ ಸಹಕಾರ ಸಚಿವಾಲಯ ಮಾಡುವುದು ಸಂವಿಧಾನದ ಉಲ್ಲಂಘನೆಯಾದೀತೆಂದು ಪವಾರ್​ ಇತ್ತೀಚೆಗೆ ಮೋದಿಗೆ ಪತ್ರ ಬರೆದಿದ್ದರು ಎನ್ನಲಾಗಿದೆ. (ಏಜೆನ್ಸೀಸ್)