ನವದೆಹಲಿ: ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಶನಲ್ ರಿಸರ್ಚ್ ಅಂಡ್ ಟ್ರೈನಿಂಗ್(NCERT) ಮಂಡಳಿಯೂ ತನ್ನ 12ನೇ ತರಗತಿ ರಾಜ್ಯಶಾಸ್ತ್ರ ಪಠ್ಯದಿಂದ ಪ್ರತ್ಯೇಕ ಖಲಿಸ್ತಾನ್ ಬೇಡಿಕೆ ಕುರಿತ ವಿಷಯವನ್ನು ತೆಗೆದು ಹಾಕಿದೆ.
ಶಿರೋಮಣಿ ಗುರುದ್ವಾರ ಪರಬಂಧಕ್ ಸಮಿತಿ(SGPC) ಪ್ರತ್ಯೇಕ ಖಲಿಸ್ತಾನ್ ಬೇಡಿಕೆ ಕುರಿತು ವಿಷಯಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಹಿನ್ನಲೆ ಕ್ರಮ ಕೈಗೊಳ್ಳಲಾಗಿದೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಸಿಖ್ಖರ ಇತಿಹಾಸದ ಕುರಿತು NCERT ಪಠ್ಯ ಪುಸ್ತಕದಲ್ಲಿ ತಪ್ಪಾಗಿ ನಮೂದಿಸಲಾಗಿದೆ. ಸ್ವಾತಂತ್ರ್ಯ ನಂತರದ ಭಾರತದ ರಾಜಕೀಯ ಪಠ್ಯದಲ್ಲಿ ಆನಂದ್ಪುರ್ ಸಾಹಿಬ್ ನಿರ್ಣಯದ ಕುರಿತು ತಪ್ಪಾಗಿ ಉಲ್ಲೇಖಿಸಲಾಗಿದೆ ಎಂದು SGPC ಆಕ್ಷೇಪಿಸಿತ್ತು.
ಆನಂದ್ಪುರ್ ನಿರ್ಣಯವು ಫೆಡರಲಿಸಂ ಬಲಪಡಿಸುವ ಮನವಿಯಾಗಿತ್ತು. ಆದರೆ, ಇದನ್ನು ಪ್ರತ್ಯೇಕ ಸಿಖ್ ರಾಷ್ಟ್ರದ ಕುರಿತು ಮನವಿ ಎಂದು ಅರ್ಥೈಸಲಾಗಿದೆ. ಭಾರತದಿಂದ ಪ್ರತ್ಯೇಕತೆ ಹಾಗೂ ಖಲಿಸ್ತಾನ್ ರಾಷ್ಟ್ರ ರಚಿಸುವ ಬಗ್ಗೆ ಹಲವು ಪ್ರತ್ಯೇಕವಾದಿಗಳು ವಾದ ಮಂಡಿಸುತ್ತಿದ್ದಾರೆ ಎಂಬ ವಾಕ್ಯವನ್ನು ಪಠ್ಯದಿಂದ ತೆಗೆಯಲಾಗಿದೆ.
ಆನಂದ್ಪುರ್ ನಿರ್ಣಯವು ಫೆಡರಲಿಸಂ ಬಲಪಡಿಸುವ ಅಂಶ ಎಂದು ಪುನಃ ಬರೆಯಲಾಗಿದೆ. ಈ ಕುರಿತು NCERT ವತಿಯಿಂದ ಕೊರಿಜೆಂಡಮ್ ನೀಡಲಾಗಿದ್ದು ಹೊಸ ಶೈಕ್ಷಣಿಕ ಅವಧಿಯ ಪುಸ್ತಕಗಳು ಈಗಾಗಲೇ ಮುದ್ರಿಸಿರುವುದರಿಂದ ಬದಲಾವಣೆಯಾದ ಪ್ರತಿಗಳು ನಿಮಗೆ ಆನ್ಲೈನ್ನಲ್ಲಿ ಲಭ್ಯವಿರುತ್ತದೆ ಎಂದು ಹಿರಿಯ ಅಧಿಕಾರಿ ಒಬ್ಬರು ತಿಳಿಸಿದ್ದಾರೆ.