ಯಾಮಿ ಗೌತಮ್ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ 
ನ್ಯೂಸ್

Nayyi Navelli X Review: 'ನಿರಾಸೆ', 'ಬೋರ್ ಹೊಡೆಯುವ ಸಿನಿಮಾ' ಎಂದ ನೆಟ್ಟಿಗರು; ಯಾಮಿ ಗೌತಮ್ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ

ಯಾಮಿ ಗೌತಮ್ ನಟನೆಯ ‘ನಯ್ಯಿ ನವೆಲ್ಲಿ’ ಚಿತ್ರಕ್ಕೆ ಎಕ್ಸ್‌ನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಯಾಮಿ ನಟನೆಗೆ ಮೆಚ್ಚುಗೆ ಸಿಕ್ಕಿದರೂ, ದುರ್ಬಲ ಕಥೆ ಮತ್ತು ನಿಧಾನಗತಿಯ ನಿರೂಪಣೆಗೆ ನೆಟ್ಟಿಗರು ಬೇಸರ ವ್ಯಕ್ತಪಡಿಸಿದ್ದಾರೆ.

Nayyi Navelli Movie: ನ್ಯಾಷನಲ್ ಅವಾರ್ಡ್ ವಿಜೇತೆ ಯಾಮಿ ಗೌತಮ್ ನಟನೆಯ ‘ನಯ್ಯಿ ನವೆಲ್ಲಿ’ ಸಿನಿಮಾ ಥಿಯೇಟರ್‌ಗೆ ಬಂದಿದೆ. ಫ್ಯಾಂಟಸಿ ಫ್ಯಾಮಿಲಿ ಎಂಟರ್‌ಟೈನರ್ ಅಂತ ಪ್ರಚಾರ ಮಾಡಿದ್ದ ಈ ಸಿನಿಮಾ ಬಗ್ಗೆ ಟ್ರೇಲರ್ ಮತ್ತು ಹಾಡುಗಳಿಂದ ಸ್ವಲ್ಪ ನಿರೀಕ್ಷೆ ಇತ್ತು. ಈಗ ಸಿನಿಮಾ ನೋಡಿದವರು ಎಕ್ಸ್‌ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಆದ್ರೆ, ನಿರ್ದೇಶಕ ಬಾಲಾಜಿ ಮೋಹನ್ ಅವರ ಈ ಸಿನಿಮಾ ಪ್ರೇಕ್ಷಕರನ್ನು ಅಷ್ಟಾಗಿ ಇಂಪ್ರೆಸ್ ಮಾಡಿಲ್ಲ ಅನ್ನೋ ಮಾತು ಕೇಳಿಬರುತ್ತಿದೆ.

ಒಬ್ಬ ನೆಟ್ಟಿಗರು ಸಿನಿಮಾಗೆ 5ರಲ್ಲಿ 2.5 ರೇಟಿಂಗ್ ನೀಡಿ, ಯಾಮಿ ಗೌತಮ್ ಮತ್ತು ಆದಿನಾಥ್ ಕೊಠಾರೆ ತಮ್ಮ ಪಾತ್ರಗಳನ್ನು ಚೆನ್ನಾಗಿ ನಿಭಾಯಿಸಿದ್ದಾರೆ. ಆದರೆ, ಕಾಮಿಡಿ, ಹಾರರ್ ಮತ್ತು ಧಾರ್ಮಿಕ ಹಿನ್ನೆಲೆಯನ್ನು ಸರಿಯಾಗಿ ಬೆರೆಸಲು ಸಿನಿಮಾ ವಿಫಲವಾಗಿದೆ ಎಂದು ಬರೆದಿದ್ದಾರೆ.

ಯಾಮಿ ಗೌತಮ್ ನಟನೆ ಚೆನ್ನಾಗಿದೆ, ಕಥೆ ಇಷ್ಟವಾಗಿಲ್ಲ

ಮತ್ತೊಬ್ಬ ನೆಟ್ಟಿಗರು ಸಿನಿಮಾಗೆ 5ರಲ್ಲಿ 1.5 ರೇಟಿಂಗ್ ನೀಡಿ, ಕಥೆ ಕುತೂಹಲ ಮೂಡಿಸಿದರೂ ನಿರೀಕ್ಷಿತ ಮಟ್ಟದಲ್ಲಿ ಭಯ ಮತ್ತು ನಗು ಎರಡೂ ಸಿಗುವುದಿಲ್ಲ ಎಂದಿದ್ದಾರೆ. ಮೋಹಿನಿ ಪಾತ್ರದಲ್ಲಿ ಯಾಮಿ ಗೌತಮ್ ಗಮನ ಸೆಳೆದರೂ, ದುರ್ಬಲ ನಿರೂಪಣೆ ಮತ್ತು ನಿರ್ದೇಶನದಿಂದ ಸಿನಿಮಾ ನಿರಾಸೆ ಮೂಡಿಸಿದೆ ಎಂದು ಮತ್ತೊಬ್ಬರು ಟೀಕಿಸಿದ್ದಾರೆ. ಕಾಮಿಡಿ ಕೆಲವೆಡೆ ಚೆನ್ನಾಗಿದ್ದರೂ, ಹಾರರ್ ಅಂಶ ಅಷ್ಟಾಗಿ ಪರಿಣಾಮ ಬೀರಿಲ್ಲ. ಹಿನ್ನೆಲೆ ಸಂಗೀತಕ್ಕೆ ಮಾತ್ರ ಮೆಚ್ಚುಗೆ ವ್ಯಕ್ತವಾಗಿದೆ.

ವಿಮರ್ಶಕರಿಂದಲೂ ಸಾಧಾರಣ ಪ್ರತಿಕ್ರಿಯೆ

ದಿ ಫ್ರೀ ಪ್ರೆಸ್ ಜರ್ನಲ್ ಸಿನಿಮಾ ವಿಮರ್ಶೆಯಲ್ಲಿ ನಯ್ಯಿ ನವೆಲ್ಲಿಗೆ 5ರಲ್ಲಿ 2 ಸ್ಟಾರ್ ನೀಡಲಾಗಿದೆ. ಕಥೆ ಹೊಸದಾಗಿದ್ದರೂ, ದುರ್ಬಲ ಚಿತ್ರಕಥೆ ಮತ್ತು ನಿರೂಪಣೆಯಿಂದ ಸಿನಿಮಾ ಸರಾಸರಿಗಿಂತ ಕೆಳಮಟ್ಟದಲ್ಲಿದೆ ಎಂದು ವಿಮರ್ಶೆ ತಿಳಿಸಿದೆ. ದೊಡ್ಡ ಮಟ್ಟದ ಮನರಂಜನೆ ನೀಡಬಹುದಾಗಿದ್ದ ಕೆಲವು ದೃಶ್ಯಗಳು ಕೂಡ ಪರಿಣಾಮಕಾರಿಯಾಗಿ ಮೂಡಿಬಂದಿಲ್ಲ. ಫ್ಯಾಂಟಸಿ ಮತ್ತು ಕುಟುಂಬದ ಕಥೆಯನ್ನು ಒಳಗೊಂಡಿದ್ದರೂ, ಸಿನಿಮಾ ಪ್ರೇಕ್ಷಕರನ್ನು ರಂಜಿಸುವಲ್ಲಿ ಹಿಂದೆ ಬಿದ್ದಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಎಕ್ಸ್‌ನಲ್ಲಿ ‘ನಯ್ಯಿ ನವೆಲ್ಲಿ’ ಚಿತ್ರದ ವಿಮರ್ಶೆ

ಬಾಕ್ಸ್ ಆಫೀಸ್‌ನಲ್ಲಿ ಹೇಗಿದೆ ಹವಾ?

ನಯ್ಯಿ ನವೆಲ್ಲಿ ಸಿನಿಮಾ ಬಿಡುಗಡೆಗೂ ಮುನ್ನ ಹೆಚ್ಚಿನ ಮುಂಗಡ ಟಿಕೆಟ್ ಬುಕ್ಕಿಂಗ್ ದಾಖಲಿಸಿರಲಿಲ್ಲ ಎಂದು ವರದಿಯಾಗಿದೆ. ಹೀಗಾಗಿ, ಮೊದಲ ದಿನದ ಬಾಕ್ಸ್ ಆಫೀಸ್ ಗಳಿಕೆ ಎಷ್ಟಿರಲಿದೆ ಎಂಬ ಕುತೂಹಲ ಮೂಡಿದೆ. ಪ್ರೇಕ್ಷಕರಿಂದ ಸದ್ಯ ವ್ಯಕ್ತವಾಗುತ್ತಿರುವ ನಕಾರಾತ್ಮಕ ಪ್ರತಿಕ್ರಿಯೆಗಳು ಚಿತ್ರದ ಗಳಿಕೆ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತವೆ ಎಂಬುದನ್ನು ಕಾದು ನೋಡಬೇಕಿದೆ.