ನ್ಯೂಸ್

ಕಾನೂನು ಕ್ರಮ ಎದುರಿಸಲು ನಾವು ಸಿದ್ಧರಿದ್ದೇವೆ! ಲೆಟರ್ ಬರೆದು ಧನುಷ್ ವಿರುದ್ಧ ಗುಡುಗಿದ Nayanathara

Webdesk - Savina Naik

Nayanathara: ನಾಯಕ ಧನುಷ್ ವಿರುದ್ಧ ಲೇಡಿ ಸೂಪರ್ ಸ್ಟಾರ್ ನಯನತಾರಾ ಕಿಡಿಕಾರಿದ್ದಾರೆ.  ನಯನತಾರಾ (Nayanathara) ತುಂಬಾನೇ ಬೇಜಾರಾಗಿದ್ದಾರೆ. ನಾಯಕ-ನಿರ್ದೇಶ-ನಿರ್ಮಾಪಕ ಧನುಷ್ (Dhanush) ಬಗ್ಗೇನೆ ಬೇಸರ ವ್ಯಕ್ತಪಡಿಸಿ ಪತ್ರ ಬರೆದಿದ್ದಾರೆ.  ಧನುಷ್ ಮೇಲೆ ನಯನತಾರಾಗೆ ಯಾಕೆ ಇಷ್ಟು ಕೋಪ? ತಿಳಿಯಲು ಈ ಲೇಖನವನ್ನು ಓದಲೇಬೇಕು.

ನೆಟ್‌ಫ್ಲಿಕ್ಸ್ ನಯನತಾರಾ ಜೀವನವನ್ನು ಆಧರಿಸಿ ಸಾಕ್ಷ್ಯಚಿತ್ರವನ್ನು ಮಾಡಿದೆ. ಅದರಲ್ಲಿ ಆಕೆಯ ಸಿನಿಮಾ ಪಯಣ, ಪ್ರೇಮ ಮತ್ತು ಮದುವೆಯ ಎಲ್ಲಾ ವಿವರಗಳಿವೆ. ನಯನತಾರಾ ಜತೆಗಿನ ಸಂಬಂಧದ ಬಗ್ಗೆ ಮಾತನಾಡುವ ಸಹ ನಟರು ಕೂಡ ಇದರಲ್ಲಿ ಸೇರಿದ್ದಾರೆ.

2015ರಲ್ಲಿ ತೆರೆಕಂಡ ‘ನಾನು ರೌಡಿ ದಾನ್’ ( Naanum Rowdy Dhaan) ಸಿನಿಮಾದಲ್ಲಿ ನಯನತಾರಾ ನಾಯಕಿಯಾಗಿ ನಟಿಸಿದ್ದರು. ಈ ಚಿತ್ರವನ್ನು ಅವರ ಪತಿ ವಿಘ್ನೇಶ್ ಶಿವನ್ ನಿರ್ದೇಶಿಸಿದ್ದಾರೆ. ಆದರೆ ಆ ಸಿನಿಮಾದ ನಿರ್ಮಾಪಕರು ನಾಯಕ ಧನುಷ್. ನಯನತಾರಾ ಜೀವನ ಕಥೆಯನ್ನು ಆಧರಿಸಿದ ಸಾಕ್ಷ್ಯಚಿತ್ರದಲ್ಲಿ, 'ನಾನು ರೌಡಿ ದಾನ್' ಚಿತ್ರದ ಕೆಲವು ಫೋಟೋಗಳು, ವೀಡಿಯೊಗಳು ಮತ್ತು ಹಾಡುಗಳನ್ನು ಬಳಸಲು ಯೋಚಿಸಲಾಗಿದೆ. ಇದಕ್ಕಾಗಿ ಅನುಮತಿ ಕೋರಿ ನಯನತಾರಾ ಮತ್ತು ನೆಟ್‌ಫ್ಲಿಕ್ಸ್ ತಂಡ ಧನುಷ್‌ಗೆ ಹಲವು ಬಾರಿ ಪತ್ರ ಬರೆದಿದೆ.

ನೇರವಾಗಿ ಸಂಪರ್ಕಿಸಲಾಗಿದೆ. ಆದರೆ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಇದರಿಂದ ಕುಪಿತಗೊಂಡಿರುವ ನಯನತಾರಾ ಇದೀಗ ಧನುಷ್ ವಿರುದ್ಧ ಬಹಿರಂಗ ಪತ್ರವೊಂದನ್ನು ಬಿಡುಗಡೆ ಮಾಡಿದ್ದಾರೆ.

“ಧನುಷ್, ನೀನು ಮಾಡಿದ್ದು ಸರಿಯಿಲ್ಲ.. ನೆಟ್‌ಫ್ಲಿಕ್ಸ್‌ನಲ್ಲಿ ನನ್ನ ಜೀವನ ಸಾಕ್ಷ್ಯಚಿತ್ರದ ಬಿಡುಗಡೆಯ ಸಮಯ ಹತ್ತಿರವಾಗಿದ್ದರೂ.. ನಾವು ನಿಮ್ಮ ಅನುಮತಿಗಾಗಿ ಕಾಯುತ್ತಿದ್ದೇವೆ. ಅಂತಿಮವಾಗಿ ನಾವು ಭರವಸೆಯನ್ನು ಬಿಡಲು ನಿರ್ಧರಿಸಿದ್ದೇವೆ. ನೀವು ಅನುಮತಿ ನೀಡದ ಕಾರಣ ನಾವು ನನ್ನ ಸಾಕ್ಷ್ಯಚಿತ್ರವನ್ನು ಮರು ಸಂಪಾದಿಸಿದ್ದೇವೆ. ‘ನಾನು ರೌಡಿ ದಾನ್’ ಸಿನಿಮಾದ ಕೆಲವು ಕ್ಲಿಪ್​​ ಬಳಸಲು ನೀವು ಅನುಮತಿ ನೀಡಿಲ್ಲ ಎಂದು ನಯನತಾರಾ ಬಹಿರಂಗ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ನಯನತಾರಾ ಕುರಿತ ಸಾಕ್ಷ್ಯಚಿತ್ರ ನವೆಂಬರ್ 18 ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ. ಸಾಕ್ಷ್ಯಚಿತ್ರದ ಶೀರ್ಷಿಕೆ 'ನಯನತಾರಾ: ಬಿಯಾಂಡ್ ದಿ ಫೇರಿ ಟೇಲ್'. ನವೆಂಬರ್ 18 ರಂದು ನಯನತಾರಾ 40 ನೇ ವರ್ಷಕ್ಕೆ ಕಾಲಿಡುತ್ತಿರುವ ಸಂದರ್ಭದಲ್ಲಿ ಇದು ಬಿಡುಗಡೆಯಾಗುತ್ತಿದೆ.

ಕಾನೂನು ಕ್ರಮ ಎದುರಿಸಲು ಸಿದ್ಧರಿದ್ದೇವೆ

''ನನ್ನ ಜೀವನದಲ್ಲಿ 'ನಾನೂಮ್ ರೌಡಿ ದಾನ್' ಸಿನಿಮಾ ಬಹಳ ಮುಖ್ಯ. ಸಿನಿಮಾ ಎನ್ನುವುದು ನನ್ನಂತಹ ಎಷ್ಟೋ ಜನರ ಉಳಿವಿಗಾಗಿ ನಡೆಸುವ ಹೋರಾಟ ಎಂಬುದು ನಮಗೆಲ್ಲ ಗೊತ್ತೇ ಇದೆ. ಇಂಡಸ್ಟ್ರಿಯೊಂದಿಗೆ ಯಾವುದೇ ಸಂಬಂಧವಿಲ್ಲದೆ ನಾನು ಈ ಮಟ್ಟಕ್ಕೆ ಬರಲು ಸಾಕಷ್ಟು ಹೋರಾಟ ಮಾಡಬೇಕಾಯಿತು. ನನ್ನ ವೃತ್ತಿಜೀವನಕ್ಕೆ, ಅದರಲ್ಲೂ ನನ್ನನ್ನು ಆರಾಧಿಸುವ ನನ್ನ ಅಭಿಮಾನಿಗಳಿಗೆ ನಾನು ಯಾವಾಗಲೂ ಋಣಿಯಾಗಿದ್ದೇನೆ, ”ಎಂದು ಅವರು ಸ್ಪಷ್ಟಪಡಿಸಿದ್ದಾರೆ.

“ಧನುಷ್.. ಇತ್ತೀಚೆಗೆ ಬಿಡುಗಡೆಯಾದ ನನ್ನ ಸಾಕ್ಷ್ಯಚಿತ್ರದ ಟ್ರೇಲರ್‌ನಲ್ಲಿ ಬಳಸಲಾದ 3 ಸೆಕೆಂಡ್ ವೀಡಿಯೊದ ಮೇಲೆ ನೀವು ಲೀಗಲ್ ನೋಟಿಸ್ ಕಳುಹಿಸಿರುವುದು ನನಗೆ ಆಘಾತ ತಂದಿದೆ. ಈ ಕ್ರಿಯೆಯು ನೀವು ಎಂತಹ ವ್ಯಕ್ತಿ ಎಂಬುದನ್ನು ತಿಳಿಸುತ್ತದೆ. ನೀವು ವೇದಿಕೆಯಲ್ಲಿ ಹೇಳುವುದನ್ನು ನೀವು ಅನುಸರಿಸುವುದಿಲ್ಲ ಎಂದು ನನ್ನ ಗಂಡ ಮತ್ತು ನನಗೆ ತಿಳಿದಿದೆ. ಒಬ್ಬ ನಿರ್ಮಾಪಕ ತನ್ನ ಚಿತ್ರಗಳಲ್ಲಿ ಕೆಲಸ ಮಾಡುವ ಕಲಾವಿದರ ವೈಯಕ್ತಿಕ ಜೀವನ ಮತ್ತು ಸ್ವಾತಂತ್ರ್ಯವನ್ನು ನಿಯಂತ್ರಿಸಬಹುದೇ? ಕಾನೂನು ಕ್ರಮ ಎದುರಿಸಲು ನಾವೂ ಸಿದ್ಧರಿದ್ದೇವೆ. ನಾನು ರೌಡಿತಾನ್ ಸಿನಿಮಾದ ಹಾಡುಗಳು, ದೃಶ್ಯಗಳಿಗೆ ಕಾಪಿರೈಟ್ ನೋ ಹೋಲ್ಡ್ ಬ್ಯಾರೆಡ್ ಸರ್ಟಿಫಿಕೇಟ್ ನೀಡದಿರಲು ಕಾರಣಗಳನ್ನು ದಯವಿಟ್ಟು ನ್ಯಾಯಾಲಯಕ್ಕೆ ವಿವರಿಸಿ,'' ಎಂದು ನಯನತಾರಾ ಕೇಳಿದ್ದಾರೆ.