ಕಾಸರಗೋಡು: ಲಾಕ್ಡೌನ್ ಅವಧಿಯಲ್ಲಿ ನಕ್ಸಲರು ಗುಪ್ತ ಕೇಂದ್ರಗಳಲ್ಲಿ ಅಧ್ಯಯನ ತರಗತಿ ನಡೆಸಿರುವ ಮಾಹಿತಿಯನ್ನು ಗುಪ್ತಚರ ವಿಭಾಗದ ಅಧಿಕಾರಿಗಳು ಕಲೆಹಾಕಿದ್ದಾರೆ.
ಕೇರಳ, ತಮಿಳುನಾಡು, ಕರ್ನಾಟಕ ರಾಜ್ಯಗಳು ಗಡಿ ಹಂಚಿಕೊಂಡಿರುವ ಟ್ರೖೆಜಂಕ್ಷನ್ ಪ್ರದೇಶಗಳಲ್ಲಿ ವಿಕ್ರಂ ಗೌಡ, ಸೋಮನ್ ಮತ್ತಿತರ ನಕ್ಸಲ್ ಮುಖಂಡರನ್ನು ಒಳಗೊಂಡ ತಂಡ ತರಗತಿಗಳನ್ನು ಆಯೋಜಿಸಿರುವುದನ್ನು ತಮಿಳುನಾಡು ಮತ್ತು ಕರ್ನಾಟಕ ಇಂಟೆಲಿಜೆನ್ಸ್ ವಿಭಾಗಗಳು ಗುರುತಿಸಿ, ಕೇರಳದ ಜತೆ ಈ ಮಾಹಿತಿ ಹಂಚಿಕೊಂಡಿವೆ.
ಕುಪ್ಪು ದೇವರಾಜ್ ಒಳಗೊಂಡಂತೆ ಹಿರಿಯ ನಕ್ಸಲ್ ಮುಖಂಡರು ಸಾವಿಗೀಡಾದ್ದರಿಂದ ನಕ್ಸಲ್ ಚಟುವಟಿಕೆ ಕ್ಷೀಣಗೊಂಡಿರುವುದನ್ನು ಪರಿಗಣಿಸಿ ಹೊಸ ಸದಸ್ಯರನ್ನು ಆಕರ್ಷಿಸುವ ಮೂಲಕ ಚಟುವಟಿಕೆ ಮತ್ತಷ್ಟು ಬಲಪಡಿಸಲು ತಯಾರಿ ನಡೆಸಲಾಗುತ್ತಿದೆ. ಇದಕ್ಕೆ ಪೂರಕವಾಗಿ ಅರ್ಬನ್ ನಕ್ಸಲ್ ಚಟುವಟಿಕೆಗಳಲ್ಲಿ ರಹಸ್ಯವಾಗಿ ಕಾರ್ಯಾಚರಿಸುತ್ತಿರುವವರು ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆ. ಕೆಲ ರಾಜಕೀಯ ಪಕ್ಷಗಳ ಮೂಲಕವೂ ನಕ್ಸಲ್ ಚಟುವಟಿಕೆ ಗುಪ್ತವಾಗಿ ನಡೆಸುತ್ತಿರುವ ಬಗ್ಗೆ ಮಾಹಿತಿ ಇದೆ ಎನ್ನಲಾಗಿದೆ.