ನ್ಯೂಸ್

ಛತ್ತೀಸ್​ಗಢದಲ್ಲಿ ಎನ್​ಕೌಂಟರ್​ ಗೆ ಒಬ್ಬ ನಕ್ಸಲ್ ಬಲಿ

ಧಮ್ತಾರಿ: ಛತ್ತೀಸ್​ಗಢದ ಧಮ್ತಾರಿ ಜಿಲ್ಲೆಯಲ್ಲಿ ಭಾನುವಾರ ರಾತ್ರಿ ನಡೆದ ಕಾರ್ಯಾಚರಣೆಯಲ್ಲಿ ನಕ್ಸಲ್ ಒಬ್ಬ ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದಾನೆ. ನಕ್ಸಲರ ಇರುವಿಕೆಯ ಮಾಹಿತಿ ಲಭ್ಯವಾದ ಕಾರಣ ಪೊಲೀಸರು ಶೋಧ ಕಾರ್ಯಾಚರಣೆ ಶುರುಮಾಡಿದ್ದರು. ರಾತ್ರಿ ವೇಳೆ ಮುಖಾಮುಖಿ ಸಂಭವಿಸಿದೆ.

ನಗ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಘೋರಾಗಾಂವ್​ ಅರಣ್ಯ ಪ್ರದೇಶದಲ್ಲಿ ಈ ಎನ್​ಕೌಂಟರ್ ನಡೆದಿದೆ. ಇದು ಧಮ್ತಾರಿಯಿಂದ 80 ಕಿ.ಮೀ. ದೂರದಲ್ಲಿದೆ. ಜಿಲ್ಲಾ ಮೀಸಲು ರಕ್ಷಣಾ ಪಡೆ ಪೊಲೀಸರು ಶೋಧ ಕಾರ್ಯ ನಡೆಸಿದ್ದರು. ಗಸ್ತು ಪಡೆ ಅರಣ್ಯದೊಳಭಾಗಕ್ಕೆ ತೆರಳಿದಾಗ ಅಲ್ಲಿದ್ದ ನಕ್ಸಲರು ಗುಂಡಿನ ದಾಳಿ ಶುರುಮಾಡಿದ್ದರು. ಪ್ರತಿಯಾಗಿ ಪೊಲೀಸರು ನಡೆಸಿದ ದಾಳಿಗೆ ಒಬ್ಬ ನಕ್ಸಲ ಬಲಿಯಾಗಿದ್ದಾನೆ. ಸ್ಥಳದಿಂದ ಶಸ್ತ್ರಾಸ್ತ್ರಗಳನ್ನು ವಶಪಡಿಸಲಾಗಿದೆ.

ಮೃತ ನಕ್ಸಲನನ್ನು ರವಿ ಎಂದು ಗುರುತಿಸಲಾಗಿದೆ. ಈತ ಗೋಬ್ರಾ ಎಲ್​ಒಎಸ್​(ಲೋಕಲ್​ ಆರ್ಗನೈಸೇಷನ್ ಸ್ಕ್ವಾಡ್​) ಆಫ್​ ಮಾವೋಯಿಸ್ಟ್​ ಸಂಘಟನೆಯ ಸಕ್ರಿಯ ಸದಸ್ಯ. ಪೊಲೀಸರು ಉಳಿದ ನಕ್ಸಲರಿಗಾಗಿ ಶೋಧಕಾರ್ಯ ಮುಂದುವರಿಸಿದ್ದಾರೆ. (ಏಜೆನ್ಸೀಸ್)