ಮುಂಬೈ: ಒಂದು ಕಾಲದಲ್ಲಿ ಟೀಮ್ ಇಂಡಿಯಾದ ಓಪನಿಂಗ್ ಬ್ಯಾಟ್ಸ್ಮನ್ ಆಗಿ ಮೈದಾನದಲ್ಲಿ ಅಬ್ಬರಿಸುತ್ತಿದ್ದ ನವಜೋತ್ ಸಿಂಗು ಸಿಧು, ಪಸ್ತುತ ತಮ್ಮ ದಿನಗಳನ್ನು ಕುಟುಂಬದವರೊಂದಿಗೆ ಹಾಗೂ ಕೆಲವು ಕಾಮಿಡಿ ಶೋಗಳಲ್ಲಿ ಕಳೆಯುತ್ತಿದ್ದಾರೆ. ಆದರೆ, ತಮ್ಮ ಧರ್ಮಪತ್ನಿ ನವಜೋತ್ ಕೌರ್ ಸಿಧುಗೆ ಸ್ತನ ಕ್ಯಾನ್ಸರ್ ಪತ್ತೆಯಾಗಿ, ಅದು ನಾಲ್ಕನೇ ಹಂತದ ಕ್ಯಾನ್ಸರ್ಗೆ ತಿರುತ್ತಿತ್ತು. ವೈದ್ಯರ ಬಳಿ ಪರಿಶೀಲನೆ ಮಾಡಿಸಿದಾಗ, ಆಕೆ ಬದುಕುವುದು ಅನುಮಾನ. ಬದುಕುಳಿಯುವ ಸಾಧ್ಯತೆ ಶೇ.3ರಷ್ಟು ಮಾತ್ರ ಎಂದು ಹೇಳಿದ್ದರು. ಆದರೆ, ಇಂದು ನನ್ನ ಪತ್ನಿ ಸಾವನ್ನು ಗೆದ್ದು ಬಂದಿರುವುದು ಆಕೆ ಸೇವಿಸಿದ ಕಟ್ಟುನಿಟ್ಟಿನ ಆಹಾರ ಕ್ರಮ ಎಂದು ಭಾವುಕರಾಗಿ ಕೆಲವು ವಿಷಯಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.
ನನ್ನ ಪತ್ನಿ ಸ್ಟೇಜ್ 4 ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಇದು ಬಹಳ ಪರೂಪದ ಮೆಟಾಸ್ಟಾಸಿಸ್ ಎನ್ನಲಾಗಿತ್ತು. ಇದರಿಂದ ಆಕೆಯನ್ನು ಗುಣಮುಖ ಮಾಡಲು ಸ್ತನ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು. ಪಟಿಯಾಲಾದ ರಾಜೀಂದ್ರ ಆಸ್ಪತ್ರೆ ಮತ್ತು ಯಮುನಾನಗರದ ಡಾ.ವರ್ಯಂ ಸಿಂಗ್ ಆಸ್ಪತ್ರೆಯಲ್ಲಿ ಸುದೀರ್ಘ ಚಿಕಿತ್ಸೆ ಪಡೆದಿದ್ದಾರೆ. ಈ ಸವಾಲಿನ ಹಾದಿ ಕೌರ್ಗೆ ಬಹಳ ಕಷ್ಟಕರವಾಗಿತ್ತು. ನೋವಿನ ನಡುವೆಯೇ ಕಿಮೊಥೆರಪಿ ಸೆಷನ್‌ಗಳಿಗೆ ಹೋಗಿದ್ದಾರೆ ಎಂದು ಹೇಳಿದರು.
ಪತ್ನಿಗೆ ಕ್ಯಾನ್ಸರ್ ಇರುವುದು ಗೊತ್ತಾದಾಗ ಇಡೀ ಕುಟುಂಬವು ಭಾರೀ ಸಂಶೋಧನೆಯಲ್ಲಿ ತೊಡಗಿದೆವು. ಭಾರತೀಯ ಮತ್ತು ಯುಎಸ್ ವೈದ್ಯರು ಹಾಗೂ ಆಯುರ್ವೇದದಲ್ಲಿ ಕ್ಯಾನ್ಸರ್ ಕುರಿತು ಬರೆದ ಪುಸ್ತಕಗಳನ್ನು ಓದಿ, ಒಂದಷ್ಟು ವಿಷಯ ಅರಿತುಕೊಂಡೆವು. ಜೀವನಶೈಲಿ ಮತ್ತು ಆಹಾರ ಪದ್ಧತಿಯನ್ನು ಬದಲಾಯಿಸಬೇಕು ಎಂಬ ಸಾಮಾನ್ಯ ಅಂಶ ನಮಗೆ ಸ್ಪಷ್ಟವಾಗಿ ತಿಳಿಯಿತು. ಕ್ಯಾನ್ಸರ್ ಉರಿಯೂತವು ಹಾಲು, ಗೋಧಿಯಂತಹ ಕಾರ್ಬೋಹೈಡ್ರೇಟ್‌ಗಳು, ಸಂಸ್ಕರಿಸಿದ ಮೈದಾ, ಸಕ್ಕರೆ, ಎಣ್ಣೆ, ಹಾಲಿನ ಉತ್ಪನ್ನಗಳು ಮತ್ತು ಗಾಳಿಯಿರುವ ಪಾನೀಯಗಳಿಂದ ಬರುತ್ತದೆ ಎಂದರು.
ಕೌರ್ ಇದನ್ನೆಲ್ಲ ಅರಿತುಕೊಂಡರು. ಇಂತಹ ಆಹಾರದಿಂದ ಆಕೆ ಸಂಪೂರ್ಣವಾಗಿ ದೂರ ಉಳಿದರು. ನಿಂಬೆ, ಬೇವು, ಹಸಿ ಅರಿಶಿನ, ಬೆಳ್ಳುಳ್ಳಿ ಇತ್ಯಾದಿಗಳೊಂದಿಗೆ ಬೆಚ್ಚಗಿನ ನೀರು ಮುಂತಾದ ಪ್ರಾಚೀನ ‘ದೇಸಿ’ ಪರಿಹಾರಗಳನ್ನು ಅವರು ಸೇವಿಸುತ್ತ ಬಂದರು. ಇದು ಅವರ ಆಹಾರ ಪದ್ಧತಿ ಮೇಲೆ ಉತ್ತಮ ಪ್ರಭಾವವೂ ಬೀರಿತು. ಜತೆಗೆ ಈ ಆಹಾರವು ಕ್ಯಾನ್ಸರ್ನ ಜೀವಿತಾವಧಿಯನ್ನು ಕಡಿಮೆ ಮಾಡಲು ಸಹಾಯ ಮಾಡಿತು. ಕೇವಲ 45 ದಿನಗಳಲ್ಲಿ ಪತ್ನಿ ಶಸ್ತ್ರಚಿಕಿತ್ಸೆಗೆ ಒಳಗಾದರು. ಆಗ ಅವರಿಗೆ PET ಸ್ಕ್ಯಾನ್ ಮಾಡಿದ ವೈದ್ಯರಿಗೆ ಕ್ಯಾನ್ಸರ್ ಅಂಶ ಇರುವುದು ಪತ್ತೆಯಾಗಲಿಲ್ಲ. ವೈದ್ಯಕೀಯ ಚಿಕಿತ್ಸೆಯೊಟ್ಟಿಗೆ ಕೌರ್ ಅವರ ಇಚ್ಛಾಶಕ್ತಿ ಮತ್ತು ಜೀವನಶೈಲಿಯಲ್ಲಿನ ಬದಲಾವಣೆಯೇ ಈ ಫಲಿತಾಂಶಕ್ಕೆ ಕಾರಣ ಎಂದು ಸಿಧು ಸಂತಸ ವ್ಯಕ್ತಪಡಿಸಿದರು,(ಏಜೆನ್ಸೀಸ್).