ನ್ಯೂಸ್

1988ರ ಹಲ್ಲೆ ಪ್ರಕರಣ; ನವಜೋತ್​ ಸಿಂಗ್​ ಸಿಧು ಜೈಲಿನಿಂದ ಬಿಡುಗಡೆ

ಪಟಿಯಾಲ: 1988ರ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಕ್ರಿಕೆಟಿಗ, ರಾಜಕಾರಣಿ ನವಜೋತ್​ ಸಿಂಗ್​ ಸಿಧು 10 ತಿಂಗಳ ಸಜೆಯನ್ನು ಮುಗಿಸಿ ಶನಿವಾರ ಪಟಿಯಾಲ ಜೈಲಿನಿಂದ ಬಿಡುಗಡೆಯಾಗಿದ್ದಾರೆ.

ಜೈಲಿನಿಂದ ಬಿಡುಗಡೆಯಾದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಿಧು ದೇಶದ ಸಂವಿಧಾನ ಅಪಾಯದಲ್ಲಿದೆ. ದೇಶದಲ್ಲಿ ಸರ್ವಾಧಿಕಾರತ್ವ ತಲೆದೂರಿದಾಗ ರಾಹುಲ್​ ಗಾಂಧಿ ನೇತೃತ್ವದಲ್ಲಿ ದೊಡ್ಡ ಕ್ರಾಂತಿ ಆಯಿತು.

ಪಂಜಾಬ್​ನಲ್ಲಿ ತನ್ನ ಬದ್ಧ ವೈರಿ ಎಎಪಿ ಆಡಳಿತ ನಡೆಸುತ್ತಿರುವುದನ್ನು ಸಹಿಸಲಾರದೆ ಬಿಜೆಪಿ ರಾಷ್ಟ್ರಪತಿ ಆಳ್ವಿಕೆ ಹೇರಲು ಯತ್ನಿಸುತ್ತಿದೆ. ಈ ಮೂಲಕ ಪಂಜಾಬ್​ ರಾಜ್ಯವನ್ನು ದುರ್ಬಲ ಮಾಡಲು ಯತ್ನಿಸುತ್ತಿದ್ದಾರೆ. ನಾನು ರಾಹುಲ್ ಗಾಂಧಿ,​ ಪ್ರಿಯಾಂಕ ಗಾಂಧಿ, ಕಾಂಗ್ರೆಸ್​ ಕಾರ್ಯಕರ್ತರ ಜೊತೆ ನಿಂತು ಇದನ್ನು ದಿಟ್ಟವಾಗಿ ಎದುರಿಸುತ್ತೇನೆ ಎಂದು ಹೇಳಿದ್ದಾರೆ.

ನಾನು ನನ್ನ ಸಹೋದರ ಭಗವಂತ್​ ಮಾನ್​ ಅವರನ್ನು ಕೇಳಲು ಬಯಸುತ್ತೇನೆ, ನೀವು ಪಂಜಾಬಿನ ಜನರನ್ನು ಸುಳ್ಳು ಭರವಸೆಗಳನ್ನು ನೀಡುವ ಮೂಲಕ ಏಕೆ ಮೂರ್ಖರನ್ನಾಗಿಸಿದ್ದೀರಿ. ಚುನಾವಣೆಗೂ ಮುನ್ನ ನೀವು ಹಾರಿಸಿದ ಹಾಸ್ಯ ಚಟಾಕಿಗಳು ಹಾಗೂ ಭರವಸೆಗಳು ಕೇವಲ ಕಾಗದದ ಮೇಲೆ ಉಳಿದಿದೆ ಎಂದು ಪಂಜಾಬ್​ ಸಿಎಂ ಭಗವಂತ್​ ಮಾನ್ ವಿರುದ್ದ ಹರಿಹಾಯ್ದಿದ್ದಾರೆ.

ಇನ್ನು ಜೈಲಿನಿಂದ ಬಿಡುಗಡೆಯಲ್ಲಿ ವಿಳಂಬವಾಗಿದ್ದರ ಕುರಿತು ಪ್ರತಿಕ್ರಿಯಿಸಿ ನಾನು ಹೊರಗಡೆ ಬರುವ ವೇಳೆಗೆ ಮಾಧ್ಯಮದವರು ಇಲ್ಲಿಂದ ಹೊರಟು ಹೋಗಿರುತ್ತಾರೆ ಎಂದು ನನ್ನ ಬಿಡುಗಡೆಯಲ್ಲಿ ವಿಳಂಬ ಮಾಡಿದ್ದಾರೆ ಎಂದು ಸಿಧು ಬಿಜೆಪಿ ವಿರುದ್ದ ಆರೋಪಿಸಿದ್ದಾರೆ.