ಬೆಂಗಳೂರು: ಉತ್ತರ ಅಮೆರಿಕ ವಿಶ್ವ ಕನ್ನಡ ಸಂಘ (ನಾವಿಕ) ದ 2020-21ನೇ ಸಾಲಿನ ಕಾರ್ಯಕಾರಿ ಸಮಿತಿ ಅಧ್ಯಕ್ಷರಾಗಿ ಹಾಸನದ ಮತ್ತಿಗೋಡಿನ ವಲ್ಲೀಶ್ ಶಾಸ್ತ್ರಿ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಶಿವಕುಮಾರ್, ಆರುಡಿ ರಾಜಗೋಪಾಲ್, ಅಲಮೇಲು ಅಯ್ಯಂಗಾರ್, ಖಜಾಂಚಿಯಾಗಿ ನಾಗರಾಜ ರೆಡ್ಡಿ, ಕಾರ್ಯದರ್ಶಿಯಾಗಿ ಮಂಜುರಾವ್, ಜಂಟಿ ಕಾರ್ಯದರ್ಶಿಗಳಾಗಿ ರಾಮರಾವ್, ಪುಷ್ಪಲತಾ ನವೀನ್, ಪ್ರಾದೇಶಿಕ ನಿರ್ದೇಶಕರಾಗಿ ಶ್ರೀಕಾಂತ್ ಪ್ರಧಾನ್, ಡಾ.ಅಶೋಕ್ ಕಟ್ಟಿಮನೆ, ಅನಿಲ್ ಭಾರದ್ವಾಜ್, ಡಾ.ಜಯಂತಿ ಶ್ರೀನಿವಾಸಯ್ಯ, ಪ್ರಕಾಶ್ ಬಾಣಾವರ, ಬಸವರಾಜ ಬೆಂಕಿ ಅವರನ್ನು ಆಯ್ಕೆ ಮಾಡಲಾಗಿದೆ.
ಅಲ್ಲದೆ, 12 ಮಂದಿಯನ್ನು ಬೋರ್ಡ್ ಆಫ್ ಟ್ರಸ್ಟಿಗಳನ್ನಾಗಿ, ತಲಾ ಐವರನ್ನು ಸಲಹಾ ಸಮಿತಿ ಮತ್ತು ಆರ್ಥಿಕ ಸಮಿತಿ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.
ಸಲಹಾ ಸಮಿತಿ: ಕುಮಾರ್ ಕೆ.ವಿ. ಮುಖ್ಯಸ್ಥರು. ಸದಸ್ಯರು: ಡಾ. ವಾಸು ಚಿಕ್ಕತ್ತೂರ್, ನಟರಾಜ್ ಕೋಟೆ, ವಿಶ್ವನಾಥ್ ಹಂಸೋಗೆ, ಡಾ. ಶ್ರೀಕಾಂತ್ ದೇವಂಗಿ. ಹಣಕಾಸು ಸಮಿತಿ: ಮುಖ್ಯಸ್ಥ: ಡಾ. ಕೇಶವ್ ಬಾಬು. ಸದಸ್ಯರು: ಡಾ. ರೇಣುಕಾ ರಾಮಪ್ಪ, ಸುರೇಶ್ ರಾಮಚಂದ್ರ, ನಾಗರಾಜ್ ರೆಡ್ಡಿ, ವಲ್ಲೀಶ್ ಶಾಸ್ತ್ರಿ.
ವಲ್ಲೀಶ್ ಶಾಸ್ತ್ರಿಯವರು ಮೂಲತಃ ಹಾಸನದ ಮತ್ತಿಗೋಡು ಗ್ರಾಮದವರು. ಬೆಂಗಳೂರಿನಲ್ಲಿ ಕಾಲೇಜು ಅಭ್ಯಾಸ ಮುಗಿಸಿದ್ದಾರೆ. ಬೆಂಗಳೂರು, ಧಾರವಾಡ, ಹರಿಹರ ಅಲ್ಲದೆ ಸೌದಿಅರೇಬಿಯಾ, ದುಬೈ, ಇಟಲಿ, ಇಂಗ್ಲೆಂಡ್, ಫ್ರಾನ್ಸ್, ಸಿಂಗಪೂರದಲ್ಲೂ ಕೆಲಸ ಮಾಡಿದ್ದಾರೆ.
1997ರಿಂದ ಅಮೆರಿಕದಲ್ಲಿ ನೆಲೆಸಿದ್ದಾರೆ. ವಿದೇಶಗಳಲ್ಲಿ ಕೆಲಸ ಮಾಡಿದ್ದರೂ ಕನ್ನಡದ ಪ್ರೇಮವನ್ನು ಹಾಗೇ ಉಳಿಸಿಕೊಂಡಿದ್ದಾರೆ. ನಿರಂತರವಾಗಿ ಕನ್ನಡ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ಕನ್ನಡ ಸಂಘಗಳಲ್ಲಿ ಸಕ್ರಿಯವಾಗಿದ್ದಾರೆ.
ನಾವಿಕ ಸಂಸ್ಥೆಯ ಸಂಸ್ಥಾಪಕರಾಗಿ, ಉಪಾಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಯುಎಸ್ಎದಲ್ಲಿರುವ ಕನ್ನಡ ಸಾಹಿತ್ಯ ರಂಗದ ಉಪಾಧ್ಯಕ್ಷರಾಗಿದ್ದರು.
ಬೆಂಗಳೂರಿನ ಬೆನಕ ತಂಡದಲ್ಲಿ ಪಳಗಿ, ಹಲವು ನಾಟಕಗಳನ್ನು ಬರೆದು ನಿರ್ದೇಶಿಸಿದ ವಲ್ಲೀಶ್ ಶಾಸ್ತ್ರಿ ಅವರು ಕರ್ನಾಟಕ ನಾಟಕ ಅಕಾಡೆಮಿಯಿಂದ ಪುರಸ್ಕೃತರು. ತಮ್ಮ ರಂಗಧ್ವನಿ ಎಂಬ ಒಂದು ಪೂರ್ಣ ತಂಡನ್ನು ಅಮೆರಿಕದಿಂದ ಬೆಂಗಳೂರಿಗೆ ಕರೆದುಕೊಂಡು ಹೋಗಿ, ಬೆಂಗಳೂರು ಮತ್ತು ಮೈಸೂರಿನಲ್ಲಿಯೂ ಪ್ರದರ್ಶನ ನೀಡಿದ್ದಾರೆ. ಒಳ್ಳೆಯ ಸಂಘಟಕರಾಗಿ ಹೆಸರು ಮಾಡಿದ್ದಾರೆ.