ಕಾರವಾರ:ನಗರದಲ್ಲಿ ಅ.3 ರಿಂದ ನವರಾತ್ರಿ ರಂಗೇರಲಿದೆ. ನಗರದ 18 ಕಡೆಗಳಲ್ಲಿ ದಾಂಡಿಯಾ ನೃತ್ಯ ಪ್ರದರ್ಶನ ನಡೆಯಲಿದ್ದು, ಅದಕ್ಕೆ ಅದ್ದೂರಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ವಿವಿಧೆಡೆ ದುರ್ಗಾ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ಪೂಜೆ ಸಲ್ಲಿಸುವ ಪರಿಪಾಠವೂ ಇದ್ದು, ಕಲಾವಿದರು, ದುರ್ಗಾ ಮೂರ್ತಿಗಳಿಗೆ ಅಂತಿಮ ಸ್ಪರ್ಷ ನೀಡುತ್ತಿದ್ದಾರೆ.
ಇಲ್ಲಿಗೆ ಬಂದು ನೆಲೆಸಿದ ಪಶ್ಚಿಮ ಬಂಗಾಳ ಸೇರಿ ಉತ್ತರ ಭಾರತದ ಜನರು ಮಾತ್ರ ಈ ಮೊದಲು ದುರ್ಗಾ ಮೂರ್ತಿ ಪ್ರತಿಷ್ಠಾಪನೆ ಹಾಗೂ ದಾಂಡಿಯಾ ನೃತ್ಯ ಪ್ರದರ್ಶನವನ್ನು ಬಹಿರಂಗವಾಗಿ ಆಯೋಜಿಸುತ್ತಿದ್ದರು. ಆದರೆ, ಈಗ ಸಂಪ್ರದಾಯ ಸ್ಥಳೀಯವಾಗಿ ಸಾಕಷ್ಟು ಪ್ರಸಿದ್ಧವಾಗಿದೆ. ತಾಲೂಕಿನಲ್ಲಿ ಒಟ್ಟಾರೆ 25 ಕ್ಕೂ ಹೆಚ್ಚು ದಾಂಡಿಯಾ ಕಾರ್ಯಕ್ರಮಗಳು ಆಯೋಜನೆಯಾಗುತ್ತಿವೆ. ವರ್ಷದಿಂದ ವರ್ಷಕ್ಕೆ ಈ ಸಂಖ್ಯೆ ಹೆಚ್ಚುತ್ತಿದೆ. ಮಕ್ಕಳು, ಮಹಿಳೆಯರು, ಯುವತಿಯರು, ಯುವಕರಾದಿಯಾಗಿ ಎಲ್ಲರೂ ತಡ ರಾತ್ರಿಯವರೆಗೂ ಉತ್ಸಾಹದಿಂದ ಪಾಲ್ಗೊಂಡು ಸಂಗೀತಕ್ಕೆ ಹೆಜ್ಜೆ ಹಾಕುತ್ತಾರೆ. ಸಮಿತಿಗಳು ವಿವಿಧ ಬಹುಮಾನಗಳನ್ನೂ ಇಡುತ್ತಿವೆ.