ಬೆಂಗಳೂರು: ತುಂಗಭದ್ರಾ ಜಲಾಶಯದಲ್ಲಿ ತುಂಬಿರುವ 33 ಟಿಎಂಸಿ ಹೂಳಿಗೆ ಪರಿಹಾರದ ಪರ್ಯಾಯ ಯೋಜನೆ ನವಲಿ ಸಮತೋಲನ ಜಲಾಶಯದ ನಿರ್ಮಾಣದ ವಿಷಯ ಮತ್ತೆ ಚರ್ಚೆಗೆ ಬಂತು.
ವಿಧಾನಸೌಧನ ಮೆಟ್ಟಿಲು ಮೇಲೆ ಬುಧವಾರ ಏರ್ಪಡಿಸಿದ್ದ ಆಂಧ್ರಪ್ರದೇಶಕ್ಕೆ ಕುಮ್ಕಿ ಆನೆಗಳ ಹಸ್ತಾಂತರ ಕಾರ್ಯಕ್ರಮದ ವೇದಿಕೆಯಲ್ಲೇ ಡಿಸಿಎಂ ಡಿ.ಕೆ.ಶಿವಕುಮಾರ್, ಆಂಧ್ರಪ್ರದೇಶದ ಸಿಎಂ ಭೇಟಿ ಹಾಗೂ ಕಾಲಾಕಾವಕಾಶ ಕೊಡಿಸುವ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ಆಂಧ್ರಪ್ರದೇಶ ಡಿಸಿಎಂ ಪವನ ಕಲ್ಯಾಣ್ ಮುಂದೆ ಪ್ರಸ್ತಾಪಿಸಿದರು.
ಕಾರ್ಯಕ್ರಮದ ಬಳಿಕ ಇದೇ ವಿಚಾರವಾಗಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಪವನ ಕಲ್ಯಾಣ್ ಪ್ರತಿಕ್ರಿಯಿಸಿ, ರೈತರ ಹಿತರಕ್ಷಣೆ, ನೀರಾವರಿ ವಿಷಯದಲ್ಲಿ ಆಂಧ್ರ ಸರ್ಕಾರ ಸದಾ ಒಂದು ಹೆಜ್ಜೆ ಮುಂದಿರುತ್ತದೆ.
ಕರ್ನಾಟಕದ ರೈತರು, ನೀರಾವರಿ ಸಮಸ್ಯೆಯು ಆಂಧ್ರಪ್ರದೇಶದ ಸಹಕಾರದಿಂದ ಬಗೆಹರಿಯಲು ಸಾಧ್ಯವೆಂದಾದರೆ ಖಂಡಿತವಾಗಿ ಸಿಎಂ ಚಂದ್ರಬಾಬುನಾಯ್ಡು ಭೇಟಿ, ಮಾತುಕತೆಗೆ ಕಾಲಾವಕಾಶ ಕೊಡಿಸುವೆ ಎಂದು ಸಕಾರಾತ್ಮಕವಾಗಿ ಸ್ಪಂದಿಸಿದರು.
ಕೊಪ್ಪಳ ಜಿಲ್ಲೆಯ ನವಲಿ ಬಳಿ 30 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯದ ಸಮತೋಲನ ಜಲಾಶಯ ನಿರ್ಮಿಸಲು ರಾಜ್ಯ ಸರ್ಕಾರ ಬಯಸಿದೆ. ಪ್ರವಾಹ ಕಾಲದಲ್ಲಿ ಹೆಚ್ಚುವರಿಯಾಗಿ ಹರಿದು ಹೋಗುವ ನೀರನ್ನೇ ಇದಕ್ಕಾಗಿ ಬಳಸಿಕೊಳ್ಳಲಿದೆ.
ರಾಜ್ಯ ಸರ್ಕಾರದ ಉದ್ದೇಶಿತ ಯೋಜನೆಗೆ ನೆರೆಯ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಅನುಮತಿ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡುಗೆ ಭೇಟಿ, ಚರ್ಚೆಗೆ ಕಾಲಾವಕಾಶ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಈಗಾಗಲೇ ಪತ್ರ ಬರೆದಿದನ್ನು ಸ್ಮರಿಸಬಹುದು.