Online geming 
ದೇಶ

ರಮ್ಮಿ ಕಲ್ಚರ್ ಪ್ರಕರಣ ₹ 442.35 ಕೋಟಿ ಆಸ್ತಿ ಜಪ್ತಿ

ಬೆಂಗಳೂರು: ಆನ್‌ಲೈನ್ ರಮ್ಮಿಆಟದ ಮೂಲಕ ಅಕ್ರಮ ಹಣ ಸಂಗ್ರಹಿಸಿ, ಅದನ್ನು ವಿವಿಧ ಮಾರ್ಗಗಳ ಮೂಲಕ ಹೂಡಿಕೆ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ) ಮಹತ್ವದ ಕ್ರಮ ಕೈಗೊಂಡಿದ್ದು, ಗೇಮ್ಸ್‌ಕ್ರಿಪ್ಟ್ ಟೆಕ್ನಾಲಾಜಿಸ್ ಪ್ರೈ.ಲಿ ಮತ್ತು ರಮ್ಮಿಟೈಮ್ ಟೆಕ್ನಾಲಾಜಿಸ್ ಪ್ರೈ.ಲಿ.ಗೆ ಸೇರಿದ 442. 35 ಕೋಟಿ ರೂ. ಚರ ಮತ್ತು ಸ್ಥಿರಾಸ್ತಿ ಜಪ್ತಿ ಮಾಡಿದೆ.

ಜಪ್ತಿಯಾಗಿರುವ ಆಸ್ತಿಗಳಲ್ಲಿ ಬ್ಯಾಂಕ್‌ನಲ್ಲಿನ ಸ್ಥಿರ ಠೇವಣಿ, ವಾಣಿಜ್ಯ ಮಳಿಗೆಗಳು, ವಿಲ್ಲಾ ಹಾಗೂ ಹಲವು ವಸತಿ ಆಸ್ತಿಗಳು ಸೇರಿವೆ. ಇವು ಕಂಪನಿಯ ಷೇರುದಾರರ ಕುಟುಂಬ ಸದಸ್ಯರು, ಖಾಸಗಿ ಕುಟುಂಬ, ಟ್ರಸ್ಟ್‌ಗಳು ಹಾಗೂ ವಿವಿಧ ಸಂಸ್ಥೆಗಳ ಹೆಸರಿನಲ್ಲಿರುವ ಆಸ್ತಿಗಳಾಗಿವೆ ಎಂದು ಇ.ಡಿ ಅಧಿಕಾರಿಗಳು ತಿಳಿಸಿದ್ದಾರೆ.

3 ಕೋಟಿ ಬಳಕೆದಾರರು:

ತೆಲಂಗಾಣದಲ್ಲಿ ದಾಖಲಾಗಿದ್ದ ವಂಚನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ತನಿಖಾ ಸಂಸ್ಥೆಗಳು ದಾಖಲಿಸಿದ ಹಲವು ಎಫ್‌ಐಆರ್‌ಗಳ ಆಧಾರದ ಮೇಲೆ ಬೆಂಗಳೂರು ವಲಯದ ಇಡಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿ ತನಿಖೆ ಆರಂಭಿಸಿತ್ತು.

ತನಿಖೆಯಲ್ಲಿ ವಿವಿಧ ಮೊಬೈಲ್ ಆ್ಯಪ್‌ಗಳ ಮೂಲಕ ಆನ್‌ಲೈನ್ ರಿಯಲ್ ಮನಿ ಗೇಮ್ಸ್ ನಡೆಸುತ್ತಿರುವುದು ಪತ್ತೆಯಾಗಿದ್ದು, ಇವುಗಳು ದೇಶಾದ್ಯಂತ ಸುಮಾರು 3 ಕೋಟಿ ಬಳಕೆದಾರರು ಹೊಂದಿದ್ದವು.

ತೆಲಂಗಾಣ, ಆಂಧ್ರಪ್ರದೇಶ ಮತ್ತು ತಮಿಳುನಾಡು ಸೇರಿ ಆನ್‌ಲೈನ್ ರಿಯಲ್ ಮನಿ ಗೇಮಿಂಗ್ ನಿಷೇಧಿಸಿರುವ ರಾಜ್ಯಗಳಲ್ಲಿಯೂ ಹೆಚ್ಚಿನ ಸಂಖ್ಯೆಯ ಬಳಕೆದಾರರು ಇದ್ದರು ಎಂಬುದು ತನಿಖೆಯಿಂದ ಬೆಳಕಿಗೆ ಬಂದಿದೆ.

ಬಾಟ್ ಬಳಸಿ ಬಳಕೆದಾರರಿಗೆ ವಂಚನೆ:

ಆನ್‌ಲೈನ್ ಮೂಲಕ ಗೇಮಿಂಗ್ ದಂಧೆ ನಡೆಸುತ್ತಿದ್ದ ಕಂಪನಿಗಳು ಪ್ರತಿಸ್ಪರ್ಧೆಗೆ ಆಟಗಾರರು ಇಲ್ಲದೇ, ಸ್ವಯಂಚಾಲಿತ ಪ್ರೋಗ್ರಾಂ, ಅಲ್ಗಾರಿದಮ್‌ಗಳನ್ನು ಬಳಕೆ ಮಾಡಿಕೊಂಡು ಕೋಟ್ಯಂತರ ಆಟಗಾರರನ್ನು ವಂಚಿಸಿವೆ. ಇದರ ಆನ್‌ಲೈನ್ ಗೇಮ್ಸ್ ಆಟವಾಡುತ್ತಿದ್ದ ಗ್ರಾಹಕರಿಗೆ ಭಾರಿ ಪ್ರಮಾಣದ ನಷ್ಟವನ್ನುಂಟು ಮಾಡಿವೆ.

1,035 ಕೋಟಿ ಮಾರ್ಕೆಟಿಂಗ್‌ಗೆ ಖರ್ಚು

ಜನಸಾಮಾನ್ಯರನ್ನು ಸೆಳೆಯಲು ಮತ್ತು ಆಟದಲ್ಲಿ ಮುಂದುವರಿಯುವಂತೆ ಮಾಡಲು ಕಂಪನಿಗಳು ಅಂದಾಜು 1,035 ಕೋಟಿ ಮೊತ್ತವನ್ನು ಮಾರ್ಕೆಟಿಂಗ್ ಮತ್ತು ಪ್ರಚಾರಕ್ಕಾಗಿ ಖರ್ಚು ಮಾಡಿರುವುದು ಇಡಿ ತನಿಖೆಯಿಂದ ತಿಳಿಸಿದೆ. ಬೋನಸ್, ರೆಫರಲ್ ಇನ್ಸೆಂಟಿವ್, ಉಚಿತ ಟೂರ್ನಮೆಂಟ್ ಪ್ರವೇಶ ಹಾಗೂ ಪ್ರಚಾರಾತ್ಮಕ ಬಹುಮಾನಗಳ ಮೂಲಕ ಹೊಸ ಬಳಕೆದಾರರನ್ನು ಆಕರ್ಷಿಸಲಾಗುತ್ತಿತ್ತು. ಕೆಲ ಸಂದರ್ಭಗಳಲ್ಲಿ ಹಣ ಹಿಂಪಡೆಯುವಿಕೆಗೆ ಶೇ 5ರಿಂದ 10 ವರೆಗೆ ಶುಲ್ಕ ವಿಧಿಸುತ್ತಿದ್ದವು. ಇದಲ್ಲದೆ, ಭಾರಿ ನಷ್ಟ ಅನುಭವಿಸಿ ಆಟದಿಂದ ದೂರವಾಗಿದ್ದವರನ್ನು ಮತ್ತೆ ಆಟಕ್ಕೆ ಕರೆತರಲು ಇನ್‌ಸ್ಟಂಟ್ ಕ್ಯಾಶ್ ಕ್ರೆಡಿಟ್, ಪ್ರಚಾರಾತ್ಮಕ ಆಫರ್, ಪುಶ್ ನೋಟಿಫಿಕೇಷನ್, ಎಸ್‌ಎಂಎಸ್ ಹಾಗೂ ಟೆಲಿಮಾರ್ಕೆಟಿಂಗ್ ಕರೆಗಳನ್ನು ಬಳಸುತ್ತಿರುವ ವಂಚನೆ ಕರಾಳ ಮುಖ ಬಯಲಾಗಿದೆ.

ಒಟ್ಟು 2,843 ಕೋಟಿ ಅಕ್ರಮ ಆಸ್ತಿ

ಈ ಪ್ರಕರಣದಲ್ಲಿ ಈ ವರೆಗೆ ನಡೆದ ಶೋಧ ಕಾರ್ಯಾಚರಣೆ ವೇಳೆ 495 ಕೋಟಿ ಮೌಲ್ಯದ ಚರ ಆಸ್ತಿ ಫ್ರೀಜ್ ಮಾಡಲಾಗಿತ್ತು. 11 ಲಕ್ಷ ನಗದು ಹಾಗೂ ಸುಮಾರು 2.30 ಕೆ.ಜಿ. ತೂಕದ ಚಿನ್ನ, ವಜ್ರಾಭರಣ ವಶಪಡಿಸಿಕೊಳ್ಳಲಾಗಿದೆ. ಇದರ ಜತೆಗೆ ಈ ಹಿಂದೆ ಹೊರಡಿಸಿದ್ದ ಪ್ರತ್ಯೇಕ ಆದೇಶದ ಮೂಲಕ ಅಂದಾಜು 1,906 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಲಾಗಿತ್ತು. ವಂಚನೆ ಪ್ರಕರಣದ ತನಿಖೆಯಲ್ಲಿ ಇದುವರೆಗೆ ಜಪ್ತಿ, ಫ್ರೀಜ್ ಮತ್ತು ವಶಪಡಿಸಿಕೊಂಡಿರುವ ಒಟ್ಟು ಮೌಲ್ಯ 2,843 ಕೋಟಿ ರೂ.ಎಂದು ಇಡಿ ತಿಳಿಸಿದೆ.