Mark Zuckerberg | ಕ್ಷಮೆ ಕೇಳಿ ಇಲ್ಲವೇ ಸೇಫ್ ಹಾರ್ಬರ್ ಕಳೆದುಕೊಳ್ಳಿ!...ಮೆಟಾ ಸಿಇಒ ಜುಕರ್‌ಬರ್ಗ್‌ಗೆ ಸಂಸದೀಯ ಸಮಿತಿ ಖಡಕ್ ಎಚ್ಚರಿಕೆ
ಪ್ರಧಾನಿ ನರೇಂದ್ರ ಮೋದಿ ಅವರು ಜುಲೈ 23 ರಂದು ಪೇಪರ್ ಲೀಕ್ ವಿಚಾರವಾಗಿ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದ ವಿಡಿಯೋವನ್ನು ತಾತ್ಕಾಲಿಕವಾಗಿ ತೆರವುಗೊಳಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ (Mark Zuckerberg) ಮೂರು ದಿನಗಳೊಳಗೆ ಬಹಿರಂಗ ಕ್ಷಮೆಯಾಚಿಸಬೇಕು ಹಾಗೂ ಈ ಲೋಪಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಂಸದೀಯ ಸಮಿತಿ ಅಂತಿಮ ಗಡುವು ನೀಡಿದೆ.
ನಿಗದಿತ ಸಮಯದೊಳಗೆ ಕ್ಷಮೆಯಾಚಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ, ಮಾಹಿತಿ ತಂತ್ರಜ್ಞಾನ (IT) ಕಾಯಿದೆಯಡಿ ಮೆಟಾ ಸಂಸ್ಥೆಗೆ ಲಭ್ಯವಿರುವ ಸೇಫ್ ಹಾರ್ಬರ್ (ನ್ಯಾಯಿಕ ವಿನಾಯಿತಿ) ರಕ್ಷಣೆಯನ್ನು ಹಿಂಪಡೆದು ಕಾನೂನು ಕ್ರಮ ಜರುಗಿಸಬೇಕಾಗುತ್ತದೆ ಎಂದು ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನದ ಸಂಸದೀಯ ಸಮಿತಿಯು ಖಡಕ್ ಎಚ್ಚರಿಕೆ ನೀಡಿದೆ.
ಪ್ರಧಾನಿ ಮೋದಿಯವರ ಇತ್ತೀಚಿನ ಫೇಸ್‌ಬುಕ್ ಪೋಸ್ಟ್‌ನಲ್ಲಿ, ಅವರು ದೇಶದ ಯುವಕರನ್ನು ಉದ್ದೇಶಿಸಿ ಮಾತನಾಡಿ, ಪೇಪರ್ ಲೀಕ್ ವಿಚಾರದ ಕುರಿತು ಹಂಚಿಕೊಂಡಿದ್ದ ಮಾಹಿತಿಯನ್ನು ಕೆಲ ಕಾಲ ನಿರ್ಬಂಧಿಸಲಾಗಿತ್ತು. ಈ ಘಟನೆಯ ನಂತರ ಕೇಂದ್ರ ಸರ್ಕಾರವು ಮೆಟಾದ ಉನ್ನತ ಜಾಗತಿಕ ಕಾರ್ಯನಿರ್ವಾಹಕರನ್ನು ಕರೆಯಿಸಿದ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ. ಮೆಟಾ ಅಧಿಕಾರಿಗಳು ಇಂದು ಮತ್ತು ನಾಳೆ ಸರ್ಕಾರಿ ಅಧಿಕಾರಿಗಳನ್ನು ಭೇಟಿಯಾಗಲಿದ್ದಾರೆ.
ಬಿಜೆಪಿ ಸಂಸದ ನಿಶಿಕಾಂತ್ ದುಬೆ ಹೇಳಿದ್ದೇನು..?
ಪ್ರಧಾನಿ ನರೇಂದ್ರ ಮೋದಿ ವಿರುದ್ಧದ ಎಐ ಜನರೇಟೆಡ್ ಆಕ್ಷೇಪಾರ್ಹ ವಿಷಯ, ಮಕ್ಕಳು ಮತ್ತು ಮಹಿಳೆಯರಿಗೆ ಸಂಬಂಧಿಸಿದ ವಿಷಯಗಳಿಗೆ ಸಂಬಂಧಿಸಿದಂತೆ ತೆಲಂಗಾಣ ಪೊಲೀಸರು ಮೆಟಾ ವಿರುದ್ಧ ದಾಖಲಿಸಿರುವ ಪ್ರಕರಣ ಹಾಗೂ ಹೈದರಾಬಾದ್ ಪೊಲೀಸರು ಗೂಗಲ್ ವಿರುದ್ಧ ಹಣಕಾಸು ವಂಚನೆ ಆ್ಯಪ್‌ಗಳಿಗಾಗಿ ದಾಖಲಿಸಿರುವ ಪ್ರಕರಣಗಳಿಗೆ ಭಾರತ ಸರ್ಕಾರದಿಂದ ಐಟಿ ಕಾಯಿದೆ 79, 79(1) ಮತ್ತು ಐಟಿ ರೂಲ್ 7 ಅಡಿಯಲ್ಲಿ ಸೇಫ್ ಹಾರ್ಬರ್ ರಕ್ಷಣೆ ಸಿಗುವುದಿಲ್ಲ. ಈ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳು ಭಾರತದ ಸಂವಿಧಾನಕ್ಕೆ ಬದ್ಧವಾಗಿರಬೇಕು ಎಂದು ಸಂಸದ ನಿಶಿಕಾಂತ್ ದುಬೆ ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ಆಗಸ್ಟ್ 5 ಮತ್ತು 6 ರಂದು ಮೆಟಾದ ಜಾಗತಿಕ ತಂಡವು ಭಾರತದಲ್ಲಿ ಸರ್ಕಾರಿ ಅಧಿಕಾರಿಗಳನ್ನು ಭೇಟಿಯಾದಾಗ, ಅಲ್ಗಾರಿದಮಿಕ್ ತಾರತಮ್ಯ, ಮಕ್ಕಳ ಲೈಂಗಿಕ ದೌರ್ಜನ್ಯದ ವಿಷಯ ಮತ್ತು ಕಂಟೆಂಟ್ ಮಾಡರೇಶನ್ (ವಿಷಯ ನಿಯಂತ್ರಣ) ಅಭ್ಯಾಸಗಳ ಬಗ್ಗೆ ಕೇಂದ್ರ ಸರ್ಕಾರವು ಕಳವಳ ವ್ಯಕ್ತಪಡಿಸಲಿದೆ.
ಪೇಪರ್ ಲೀಕ್ ವಿರುದ್ಧದ ಕ್ರಮದ ಕುರಿತು ಪ್ರಧಾನಿ ನರೇಂದ್ರ ಮೋದಿ ಜುಲೈ 23 ರಂದು ಹಂಚಿಕೊಂಡಿದ್ದ ಫೇಸ್‌ಬುಕ್ ಪೋಸ್ಟ್ ಅನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿದ ನಂತರ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಮೆಟಾದ ಕಾರ್ಯನಿರ್ವಾಹಕರಿಗೆ ಸಮನ್ಸ್ ನೀಡಿತ್ತು. ಮೆಟಾದ ಗ್ಲೋಬಲ್ ಅಫೇರ್ಸ್ ಚೀಫ್ ಆಫೀಸರ್ ಜೋಯಲ್ ಕಪ್ಲಾನ್ ಈ ಸಭೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.
ಸಿಎಸ್ಎಎಮ್ ನಿರ್ವಹಣೆ, ಪರಿಶೀಲಿಸಿದ ಖಾತೆಗಳಿಗೆ ಸುರಕ್ಷತೆ ಮತ್ತು ಸಿಂಥೆಟಿಕ್ ವಿಷಯಗಳಿಗೆ ಸಂಬಂಧಿಸಿದಂತೆ ಮೆಟಾ ಕೈಗೊಂಡ ಕ್ರಮಗಳ ಬಗ್ಗೆ ಸರ್ಕಾರ ಸ್ಪಷ್ಟನೆ ಕೋರಲಿದೆ ಎಂದು ಕೃಷ್ಣನ್ ತಿಳಿಸಿದ್ದಾರೆ. ಮೆಟಾದಷ್ಟು ದೊಡ್ಡ ಮಟ್ಟದ ತಂತ್ರಜ್ಞಾನ ಕಂಪನಿಯು ಇಂತಹ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಪರಿಹರಿಸಬಲ್ಲ ವ್ಯವಸ್ಥೆಗಳನ್ನು ಹೊಂದಿರಬೇಕು ಎಂದು ಅವರು ಹೇಳಿದರು. ಕೆಲವು ವಿಷಯಗಳು ನಿರೀಕ್ಷಿತ ರೀತಿಯಲ್ಲಿ ಏಕೆ ಕೆಲಸ ಮಾಡುತ್ತಿಲ್ಲ ಮತ್ತು ಅದರಲ್ಲಿರುವ ಸವಾಲುಗಳೇನು ಎಂಬುದನ್ನು ನಾವು ಅವರಿಂದ ತಿಳಿದುಕೊಳ್ಳಲು ಬಯಸುತ್ತೇವೆ. ಅಲ್ಲದೆ, ಸಾಮಾಜಿಕ ಜಾಲತಾಣ ಸಂಸ್ಥೆಗಳು ಭಾರತೀಯ ಕಾನೂನುಗಳನ್ನು ಸ್ಪಷ್ಟವಾಗಿ ಅರ್ಥೈಸಿಕೊಂಡು ಪಾಲಿಸಬೇಕು ಎಂದು ಕೃಷ್ಣನ್ ಅಭಿಪ್ರಾಯಪಟ್ಟಿದ್ದಾರೆ.
ಅಲ್ಗಾರಿದಮಿಕ್ (ಕ್ರಮಾವಳಿ) ತಾರತಮ್ಯದ ಆರೋಪಗಳ ಮೇಲೆ ಸಂಸದೀಯ ಸಮಿತಿ ಮೆಟಾವನ್ನು ಪ್ರಶ್ನಿಸಿದ ನಂತರ ಈ ಸಭೆ ನಡೆಯುತ್ತಿದೆ. ಬಿಜೆಪಿ ಸಂಸದ ನಿಶಿಕಾಂತ್ ದುಬೆ, ಕೆಲವು ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳು ಸರ್ಕಾರ ವಿರೋಧಿ ಮತ್ತು ಪ್ರಜಾಪ್ರಭುತ್ವ ವಿರೋಧಿ ವಿಷಯಗಳನ್ನು ಪ್ರಚೋದಿಸುತ್ತಿವೆ. ಮಹಿಳೆಯರು ಮತ್ತು ಮಕ್ಕಳಿಗೆ ಸಂಬಂಧಿಸಿದ ಕಾನೂನುಬಾಹಿರ ವಿಷಯಗಳನ್ನು ತಡೆಯಲು ವಿಫಲವಾಗಿವೆ ಎಂದು ಆರೋಪಿಸಿದ್ದಾರೆ. ಭಾರತೀಯ ಕಾನೂನುಗಳನ್ನು ಪಾಲಿಸಲು ವಿಫಲವಾಗುವ ಪ್ಲಾಟ್‌ಫಾರ್ಮ್‌ಗಳಿಗೆ ಲಭ್ಯವಿರುವ ಸೇಫ್ ಹಾರ್ಬರ್ ರಕ್ಷಣೆಯನ್ನು ಹಿಂಪಡೆಯಲು ಸಮಿತಿಯು ಸರ್ವಾನುಮತದಿಂದ ಶಿಫಾರಸು ಮಾಡಿದೆ ಎಂದು ಅವರು ಹೇಳಿದರು(ಏಜೆನ್ಸೀಸ್).