ಮೃತ ಖ್ಯಾತ ಅಸ್ಸಾಮಿ ಗಾಯಕ ಜುಬೀನ್ ಗಾರ್ಗ್ 
ದೇಶ

ಜುಬೀನ್ ಗಾರ್ಗ್ ಸಾವು ಪ್ರಕರಣ; ತ್ವರಿತಗತಿಯ ದೈನಂದಿನ ವಿಚಾರಣೆಗೆ ಫಾಸ್ಟ್-ಟ್ರ್ಯಾಕ್ ಕೋರ್ಟ್ ರಚಿಸಿದ ಗುವಾಹಟಿ ಹೈಕೋರ್ಟ್ | fast-track court

ಗುವಾಹಟಿ: ಬಾಲಿವುಡ್ ಮತ್ತು ಖ್ಯಾತ ಅಸ್ಸಾಮಿ ಗಾಯಕ ಜುಬೀನ್ ಗಾರ್ಗ್ ಅವರು ಕಳೆದ ವರ್ಷ ಸೆಪ್ಟೆಂಬರ್​ನಲ್ಲಿ ಸಿಂಗಾಪುರದಲ್ಲಿ ಸಮುದ್ರದಲ್ಲಿ ಸ್ಕೂಬಾ ಡೈವಿಂಗ್ ವೇಳೆ ಅನುಮಾನಸ್ಪದವಾಗಿ ಮೃತಪಟ್ಟ ಪ್ರಕರಣದಕ್ಕೆ ಸಂಬಂಧಪಟ್ಟಂತೆ ತ್ವರಿತವಾಗಿ ದೈನಂದಿನ ವಿಚಾರಣೆ ನಡೆಸಲು ಗುವಾಹಟಿ ಹೈಕೋರ್ಟ್​ ಗುರುವಾರ(ಮಾ. 19) ಫಾಸ್ಟ್​​-ಟ್ರ್ಯಾಕ್ ಕೋರ್ಟ್(fast-track court) ರಚಿಸಿದೆ.
ಈ ಕುರಿತು ಎಕ್ಸ್​ನಲ್ಲಿ ಮಾಹಿತಿ ನೀಡಿರುವ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ, ಪ್ರೀತಿಯ ಜುಬೀನ್ ಗರ್ಗ್ ಕೊಲೆ ಪ್ರಕರಣದಲ್ಲಿ ನ್ಯಾಯಕ್ಕಾಗಿ ನಮ್ಮ ಸಾಮೂಹಿಕ ಹೋರಾಟಕ್ಕೆ ಇಂದು ಮಹತ್ವದ ಮೈಲಿಗಲ್ಲು ಸಿಕ್ಕಿದೆ. ಈ ಪ್ರಕರಣವನ್ನು ತ್ವರಿತಗತಿಯಲ್ಲಿ ದೈನಂದಿನ ವಿಚಾರಣೆ ನಡೆಸಲು ಗುವಾಹಟಿ ಹೈಕೋರ್ಟ್‌ನ ಗೌರವಾನ್ವಿತ ಮುಖ್ಯ ನ್ಯಾಯಾಧೀಶರು, ಬಕ್ಸಾ ಜಿಲ್ಲಾ ನ್ಯಾಯಾಧೀಶರಾದ ಶ್ರೀಮತಿ ಶರ್ಮಿಳಾ ಭುಯಾನ್ ಅವರ ನೇತೃತ್ವದಲ್ಲಿ ವಿಶೇಷ ಫಾಸ್ಟ್-ಟ್ರ್ಯಾಕ್ ಕೋರ್ಟ್ ರಚಿಸಿದ್ದಾರೆ.
ಈ ನಿರ್ಧಾರ ನ್ಯಾಯಾಂಗ ಪ್ರಕ್ರಿಯೆಯನ್ನು ಹೆಚ್ಚು ವೇಗಗೊಳಿಸುತ್ತದೆ ಮತ್ತು ಸಕಾಲಿಕ ನ್ಯಾಯವನ್ನು ಖಚಿತಪಡಿಸಿಕೊಳ್ಳುವ ನಮ್ಮ ಬದ್ಧತೆಯನ್ನು ಬಲಪಡಿಸುತ್ತದೆ. ನಮ್ಮ ವಿನಂತಿಯನ್ನು ಸ್ವೀಕರಿಸಿ ಮತ್ತು ನ್ಯಾಯದ ಉದ್ದೇಶವನ್ನು ಬಲಪಡಿಸುವಲ್ಲಿ ಬೆಂಬಲ ನೀಡಿದ ಹೈಕೋರ್ಟ್​​ನ ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿ ಅಶುತೋಷ್ ಕುಮಾರ್ ಅವರಿಗೆ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಕಳೆದ ವರ್ಷ ಸೆ. 19ರಂದು ಸಿಂಗಾಪುರದಲ್ಲಿ ನಡೆಯುತ್ತಿದ್ದ ನಾಲ್ಕನೇ ಈಶಾನ್ಯ ಭಾರತ ಉತ್ಸವದಲ್ಲಿ ಭಾಗವಹಿಸಲು ತೆರಳಿದ್ದ ಜುಬೀನ್ ಗಾರ್ಗ್, ಸಮುದ್ರದಲ್ಲಿ ಸ್ಕೂಬಾ ಡೈವಿಂಗ್ ವೇಳೆ ಮೃತಪಟ್ಟಿದ್ದರು. ಅವರ ಸಾವಿನ ಬಗ್ಗೆ ಅನುಮಾನ ವ್ಯಕ್ತವಾದ ಹಿನ್ನೆಲೆ ಅಸ್ಸಾಂ ಸರ್ಕಾರ, ಎಸ್​ಐಟಿ ರಚಿಸಿ ತನಿಖೆ ಆದೇಶಿಸಿತ್ತು.
ಪ್ರಕರಣದ ಬಗ್ಗೆ ತನಿಖೆ ನಡೆಸಿದ ಎಸ್​ಐಟಿ, ಏಳು ಆರೋಪಿಗಳನ್ನು ಬಂಧಿಸಿ, ಅವರ ವಿರುದ್ಧ ಸ್ಥಳೀಯ ನ್ಯಾಯಾಲಯದಲ್ಲಿ ಚಾರ್ಜ್​ಶೀಟ್ ಸಲ್ಲಿಸಿದೆ. ಕಳೆದ ತಿಂಗಳು ನಡೆದ ಅಸ್ಸಾಂ ಸಚಿವ ಸಂಪುಟ ಸಭೆಯಲ್ಲಿ ಪ್ರಕರಣದ ವಿಚಾರಣೆಯನ್ನು ಫಾಸ್ಟ್-ಟ್ರ್ಯಾಕ್ ಕೋರ್ಟ್​ ಮೂಲಕ ನಡೆಸಲು ನಿರ್ಣಯ ತೆಗೆದುಕೊಳ್ಳಲಾಗಿತ್ತು (ಏಜೆನ್ಸೀಸ್).