Zomato Delivery ಸಾಂದರ್ಭಿಕ ಚಿತ್ರ
ಚೆನ್ನೈ: ಮೆಟ್ರೋ ನಗರಗಳಲ್ಲಿ ಸಂಚಾರ ದಟ್ಟಣೆ ದಿನದಿಂದ ದಿನಕ್ಕೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸುತ್ತಿದೆ. ಗಂಟೆಗಟ್ಟಲೆ ರಸ್ತೆಯಲ್ಲೇ ಕಾಲ ಕಳೆಯಬೇಕಾದ ಪರಿಸ್ಥಿತಿ ವಾಹನ ಸವಾರರದ್ದಾದರೆ, ಸಮಯಕ್ಕೆ ಸರಿಯಾಗಿ ಗ್ರಾಹಕರಿಗೆ ಆಹಾರ ತಲುಪಿಸಬೇಕಾದ ಡೆಲಿವರಿ ಬಾಯ್‌ಗಳ ಸ್ಥಿತಿ ಮತ್ತಷ್ಟು ಶೋಚನೀಯ. ಇದೀಗ ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ಜಟಿಲಗೊಂಡ ಟ್ರಾಫಿಕ್ ಸಮಸ್ಯೆಗೆ ಝೊಮಾಟೊ (Zomato Delivery ) ಡೆಲಿವರಿ ಏಜೆಂಟ್ ಒಬ್ಬರು ಕಂಡುಕೊಂಡ ವಿಚಿತ್ರ ಹಾಗೂ ಆಕರ್ಷಕ ಪರಿಹಾರ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದ್ದು, ನೆಟ್ಟಿಗರ ಗಮನ ಸೆಳೆಯುತ್ತಿದೆ.
ಇಸಿಆರ್ ರಸ್ತೆಯಲ್ಲಿ ಪ್ರತ್ಯಕ್ಷವಾದ 'ಕುದುರೆ ಸವಾರ'!
ಸಾಮಾನ್ಯವಾಗಿ ಫುಡ್ ಡೆಲಿವರಿ ಸಂಸ್ಥೆಗಳ ಉದ್ಯೋಗಿಗಳು ಬೈಕ್, ಸ್ಕೂಟರ್ ಅಥವಾ ಸೈಕಲ್‌ಗಳಲ್ಲಿ ಬರುವುದನ್ನು ನಾವು ನೋಡಿದ್ದೇವೆ. ಆದರೆ, ಚನ್ನೈನ ಪಲವಕ್ಕಂ ಪ್ರದೇಶದಲ್ಲಿ ಬೆನ್ನಿಗೆ ಝೊಮಾಟೊ ಆಹಾರದ ಬ್ಯಾಗ್ ಏರಿಸಿಕೊಂಡ ಉದ್ಯೋಗಿಯೊಬ್ಬರು ಕುದುರೆಯ ಮೇಲೆ ಸವಾರಿ ಮಾಡುತ್ತಾ ಗ್ರಾಹಕರ ಮನೆಗೆ ಪಾರ್ಸೆಲ್ ತಲುಪಿಸುತ್ತಿದ್ದಾರೆ.
ಆದಾಗ್ಯೂ, ರಸ್ತೆಯಿಡೀ ಕಾರು, ಬಸ್ಗಳು ಟ್ರಾಫಿಕ್ನಲ್ಲಿ ಸಿಲುಕಿಕೊಂಡಿದ್ದರೆ ಈ ಡೆಲಿವರಿ ಬಾಯ್ ಮಾತ್ರ ಯಾವುದೇ ಅಡೆತಡೆಯಿಲ್ಲದೇ ಸಾರಾಗವಾಗಿ ಸಾಗುವುದನ್ನು ವೈರಲ್ ವಿಡಿಯೋದಲ್ಲಿ ಕಾಣಬಹುದಾಗಿದೆ.
ಸ್ಥಳೀಯರೊಬ್ಬರು ಈ ಕುದುರೆ ಸವಾರಿ ಆಯ್ಕೆಯನ್ನು ಪ್ರಶ್ನಿಸಿದಾಗ ಸರಿಯಾದ ಸಮಯದಲ್ಲಿ ಗ್ರಾಹಕರಿಗೆ ಆಹಾರವನ್ನು ತಲುಪಿಸಲು, ಭಾರೀ ಸಂಚಾರ ದಟ್ಟಣೆಯನ್ನು ನಿವಾರಿಸಲು ಮತ್ತು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಕಡಿಮೆ ಮಾಡಲು ಈ ವಿಶಿಷ್ಟ ವಿಧಾನವನ್ನು ಬಳಸಿದ್ದಾರೆಂದು ಹೇಳಿಕೊಂಡಿದ್ದಾರೆ.
ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದಂತೆಯೇ ಅನೇಕ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ. ಒಬ್ಬ ಬಳಕೆದಾರರು ಈ ವಿಧಾನವು ಪರಿಸರ ಸ್ನೇಹಿ ವಿತರಣಾ ವಿಧಾನ ಮತ್ತು "ಟ್ರಾಫಿಕ್ ಜಾಮ್‌ಗೆ ಪರಿಪೂರ್ಣ ಪರಿಹಾರ ಎಂದು ಕರೆದಿದ್ದರೆ, ಇನ್ನೊಬ್ಬ ಬಳಕೆದಾರ ನ್ಯೂ ಅಪ್ಡೇಟ್ ಪೆಟ್ರೋಲ್ ಹಾಗೂ ಹಣ ಉಳಿಸಿ ಎಂದು ಕಾಮೆಂಟ್ ಮಾಡಿದ್ದಾರೆ (ಏಜೆನ್ಸೀಸ್).