ಟಿಸಿಎಸ್ ನಾಸಿಕ್ ಕಿರುಕುಳ ಪ್ರಕರಣ: ತಪ್ಪಿತಸ್ಥರಿಗೆ ದಯೆ ಇಲ್ಲ, ಟಾಟಾ ಸನ್ಸ್ ಅಧ್ಯಕ್ಷ ಚಂದ್ರಶೇಖರನ್ ಎಚ್ಚರಿಕೆ! TCS Nashik Harassment Case
- ಟಿಸಿಎಸ್ ನಾಸಿಕ್ ಕಚೇರಿಯಲ್ಲಿ ನಡೆದ ಲೈಂಗಿಕ ಕಿರುಕುಳ ಪ್ರಕರಣಕ್ಕೆ ತೀವ್ರ ಆಘಾತ ವ್ಯಕ್ತಪಡಿಸಿದ ಟಾಟಾ ಸನ್ಸ್ ಅಧ್ಯಕ್ಷ ಎನ್. ಚಂದ್ರಶೇಖರನ್
- ಮಹಿಳಾ ಉದ್ಯೋಗಿಗಳ ಸುರಕ್ಷತೆ ಮತ್ತು ನೈತಿಕ ಶಿಸ್ತಿನ ವಿಷಯದಲ್ಲಿ ಟಾಟಾ ಸಮೂಹವು ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ
- ಸಂಸ್ಥೆಯ ಸಿಒಒ (COO) ಆರತಿ ಸುಬ್ರಮಣಿಯನ್ ನೇತೃತ್ವದಲ್ಲಿ ಆಂತರಿಕ ತನಿಖೆ ನಡೆಯುತ್ತಿದ್ದು ಆರೋಪಿಗಳ ವಿರುದ್ಧ ಕಠಿಣ ಕ್ರಮ
- ಉದ್ಯೋಗಿಯ ಮೇಲೆ ಹಲ್ಲೆ ನಡೆಸಿದ ವಿಡಿಯೋ ವೈರಲ್ ಆದ ಬೆನ್ನಲ್ಲೇ ಐಟಿ ಉದ್ಯೋಗಿಗಳ ಸಂಘಟನೆಗಳು ಕಾರ್ಮಿಕ ಸಚಿವಾಲಯಕ್ಕೆ ದೂರು
TCS Nashik Harassment Case : ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ಕಂಪನಿಯ ನಾಸಿಕ್ ಕಚೇರಿಯಲ್ಲಿ ನಡೆದಿದೆ ಎನ್ನಲಾದ ಲೈಂಗಿಕ ಕಿರುಕುಳ ಪ್ರಕರಣದ ಬಗ್ಗೆ ಟಾಟಾ ಸನ್ಸ್ ಅಧ್ಯಕ್ಷ ಎನ್. ಚಂದ್ರಶೇಖರನ್ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ.
ಈ ಪ್ರಕರಣವನ್ನು "ಅತ್ಯಂತ ಗಂಭೀರ ಮತ್ತು ಆತಂಕಕಾರಿ" ಎಂದು ಕರೆದಿರುವ ಚಂದ್ರಶೇಖರನ್, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಮಹಿಳಾ ಉದ್ಯೋಗಿಗಳ ಸುರಕ್ಷತೆಯ ವಿಷಯದಲ್ಲಿ ಯಾವುದೇ ರಾಜಿ ಇಲ್ಲ ಎಂದು ಸ್ಪಷ್ಟಪಡಿಸಿರುವ ಅವರು ಇಡೀ ಪ್ರಕರಣವನ್ನು ಸಂಸ್ಥೆಯು ತುರ್ತು ಆದ್ಯತೆಯ ಮೇಲೆ ವಿಚಾರಣೆ ನಡೆಸುತ್ತಿದೆ ಎಂದು ತಿಳಿಸಿದ್ದಾರೆ.
ಆರೋಪಿ ಉದ್ಯೋಗಿಗಳ ವಿರುದ್ಧ ಈಗಾಗಲೇ ಕಠಿಣ ಕ್ರಮ ಕೈಗೊಳ್ಳಲಾಗಿದ್ದು, ತನಿಖೆಗೆ ಕಂಪನಿಯು ಸಂಪೂರ್ಣ ಸಹಕಾರ ನೀಡುತ್ತಿದೆ. ಯಾವುದೇ ರೀತಿಯ ಕಿರುಕುಳ ಅಥವಾ ಅಸಭ್ಯ ವರ್ತನೆಯನ್ನು ಟಾಟಾ ಸಮೂಹವು ಸಹಿಸುವುದಿಲ್ಲ ಎಂದು ಪುನರುಚ್ಚರಿಸಿರುವ ಅವರು, ನೈತಿಕ ಶಿಸ್ತಿನ ವಿಷಯದಲ್ಲಿ ಯಾವುದೇ ರಾಜಿ ಇಲ್ಲ ಎಂದು ದೃಢವಾಗಿ ಹೇಳಿದ್ದಾರೆ.
ಟಾಟಾ ಗ್ರೂಪ್ ತನ್ನ ಉದ್ಯೋಗಿಗಳಿಂದ ಯಾವುದೇ ರೀತಿಯ ದಬ್ಬಾಳಿಕೆ ಅಥವಾ ದುರ್ನಡತೆಯ ಬಗ್ಗೆ ಶೂನ್ಯ ಸಹಿಷ್ಣುತಾ ನೀತಿಯನ್ನು ಕಾಯ್ದುಕೊಂಡಿದೆ. ಈ ಪ್ರಕರಣದ ಸತ್ಯಾಸತ್ಯತೆ ತಿಳಿಯಲು ಸಮಗ್ರ ತನಿಖೆ ನಡೆಸಲಾಗುತ್ತಿದೆ. ಟಿಸಿಎಸ್‌ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (COO) ಆರತಿ ಸುಬ್ರಮಣಿಯನ್ ಅವರ ನೇತೃತ್ವದಲ್ಲಿ ಈ ತನಿಖೆ ನಡೆಯುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದರ ಜೊತೆಗೆ ಇಂತಹ ಘಟನೆಗಳು ಮರುಕಳಿಸದಂತೆ ಅಗತ್ಯ ಸುಧಾರಣಾ ಕ್ರಮಗಳನ್ನು ಜಾರಿಗೆ ತರುವುದಾಗಿ ಚಂದ್ರಶೇಖರನ್ ಅವರು ಭರವಸೆ ನೀಡಿದ್ದಾರೆ.
ಅಂದಹಾಗೆ, ಟಿಸಿಎಸ್‌ನ ನಾಸಿಕ್ ಘಟಕದ ಎಂಟು ಮಹಿಳಾ ಉದ್ಯೋಗಿಗಳು ಹಿರಿಯ ಸಹೋದ್ಯೋಗಿಗಳ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಮಾನಸಿಕ ಕಿರುಕುಳದ ಗಂಭೀರ ಆರೋಪಗಳನ್ನು ಮಾಡಿದ್ದು, ದೂರು ನೀಡಿದರೂ ಮಾನವ ಸಂಪನ್ಮೂಲ (HR) ವಿಭಾಗ ಸರಿಯಾಗಿ ಸ್ಪಂದಿಸದಿರುವುದು ಐಟಿ ಕ್ಷೇತ್ರದಲ್ಲಿ ಆತಂಕ ಮೂಡಿಸಿದೆ. ಸದ್ಯ ಸ್ಥಳೀಯ ಪೊಲೀಸರು ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು (SIT) ರಚಿಸಿದ್ದು, ಒಬ್ಬ ಮಹಿಳಾ ಎಚ್‌ಆರ್ ಮ್ಯಾನೇಜರ್ ಸೇರಿದಂತೆ ಒಟ್ಟು ಏಳು ಮಂದಿಯನ್ನು ಈಗಾಗಲೇ ಬಂಧಿಸಿದ್ದಾರೆ.
ವರದಿಗಳ ಪ್ರಕಾರ, ಕೆಲಸದ ಕಾರ್ಯಕ್ಷಮತೆಯ ನೆಪದಲ್ಲಿ ಉದ್ಯೋಗಿಯ ಮೇಲೆ ಹಲ್ಲೆ ನಡೆಸಿರುವುದು ಮತ್ತು ಅವಮಾನಿಸಿರುವುದು ದೊಡ್ಡ ಮಟ್ಟದ ಆಕ್ರೋಶಕ್ಕೆ ಕಾರಣವಾಗಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ, ಐಟಿ ಉದ್ಯೋಗಿಗಳ ಹಿತರಕ್ಷಣಾ ಸಂಘಗಳು (NITES ನಂತಹವು) ಇದನ್ನು ತೀವ್ರವಾಗಿ ಖಂಡಿಸಿ ಕಾರ್ಮಿಕ ಸಚಿವಾಲಯಕ್ಕೆ ದೂರು ನೀಡಿದವು. ಇದಕ್ಕೆ ಪ್ರತಿಕ್ರಿಯಿಸಿದ ಟಿಎಸಿಎಸ್ ಸಂಸ್ಥೆಯು, ತನ್ನ ನೀತಿ ಸಂಹಿತೆಯ ಉಲ್ಲಂಘನೆಯನ್ನು ಗಂಭೀರವಾಗಿ ಪರಿಗಣಿಸಿ ಘಟನೆಯಲ್ಲಿ ಭಾಗಿಯಾದ ಸಂಬಂಧಿತ ಉದ್ಯೋಗಿಗಳನ್ನು ತಕ್ಷಣವೇ ಕೆಲಸದಿಂದ ಅಮಾನತುಗೊಳಿಸಿ ತನಿಖೆಗೆ ಆದೇಶಿಸಿದೆ, (ಏಜೆನ್ಸೀಸ್).