ನವದೆಹಲಿ: ( Yuzvendra Chahal ) ಯುಜ್ವೇಂದ್ರ ಚಾಹಲ್ ಮತ್ತು ಇವರ ಮಾಜಿ ಪತ್ನಿ ಧನಶ್ರೀ ವರ್ಮಾ ರಿಯಾಲಿಟಿ ಶೋವೊಂದರಲ್ಲಿ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿಯೊಂದು ಹಬ್ಬಿತ್ತು. ಈ ಬಗ್ಗೆ ಚಾಹಲ್ ಈಗ ಅಧಿಕೃತವಾಗಿ ಸ್ಪಷ್ಟನೆ ನೀಡಿದ್ದಾರೆ.
ಕಲರ್ಸ್ ಟಿವಿ ಮತ್ತು ಜಿಯೋ ಹಾಟ್‌ಸ್ಟಾರ್‌ನಲ್ಲಿ ಪ್ರಸಾರವಾಗಲಿರುವ ಹೊಸ ರಿಯಾಲಿಟಿ ಶೋ ದಿ 50' ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸೆಲೆಬ್ರಿಟಿಗಳು ಭಾಗವಹಿಸಲಿದ್ದಾರೆ. ಚಹಲ್ ಮತ್ತು ಧನಶ್ರೀ ಸ್ಪರ್ಧಿಗಳಾಗಿ ಭಾಗವಹಿಸಲಿದ್ದಾರೆ ಮತ್ತು ಅಲ್ಲಿ ಇಬ್ಬರೂ ಮತ್ತೆ ಒಂದಾಗಲಿದ್ದಾರೆ ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದವು.
ಕಾರ್ಯಕ್ರಮದ ನಿರ್ಮಾಪಕರು ಇನ್ನೂ ಅಧಿಕೃತ ಪಟ್ಟಿಯನ್ನು ಘೋಷಿಸಿಲ್ಲವಾದರೂ, ಈ ಇಬ್ಬರೂ ಭಾಗವಹಿಸಲಿದ್ದಾರೆ ಎನ್ನುವ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹಬ್ಬಿದೆ. ಈ ಕಾರ್ಯಕ್ರಮವು ಫೆಬ್ರವರಿ 1 ರಿಂದ ರಾತ್ರಿ 9 ಗಂಟೆಗೆ ಜಿಯೋ ಹಾಟ್‌ಸ್ಟಾರ್‌ನಲ್ಲಿ ಮತ್ತು ನಂತರ ರಾತ್ರಿ 10:30ಕ್ಕೆ ಕಲರ್ಸ್ ಚಾನೆಲ್‌ನಲ್ಲಿ ಪ್ರಸಾರವಾಗಲಿದೆ.
ಈ ವರದಿಗಳನ್ನು ಚಾಹಲ್ ಕಟುವಾಗಿ ನಿರಾಕರಿಸಿದ್ದಾರೆ. ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಬರೆದುಕೊಂಡಿರುವ ಅವರು, "ನಾನು ಯಾವುದೇ ರಿಯಾಲಿಟಿ ಶೋನಲ್ಲಿ ಭಾಗವಹಿಸುತ್ತಿಲ್ಲ. ಈ ಬಗ್ಗೆ ಹರಡುತ್ತಿರುವ ಸುದ್ದಿಗಳು ಕೇವಲ ಊಹಾಪೋಹ ಮತ್ತು ಸತ್ಯಕ್ಕೆ ದೂರವಾದವು ಎಂದು ಸ್ಪಷ್ಟಪಡಿಸಿದ್ದಾರೆ.
ಯಾವುದೇ ಅಧಿಕೃತ ಮಾಹಿತಿ ಇಲ್ಲದೆ ಇಂತಹ ಸುಳ್ಳು ಸುದ್ದಿಗಳನ್ನು ಹರಡದಂತೆ ಅವರು ಮಾಧ್ಯಮಗಳು ಮತ್ತು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.
2020ರ ಲಾಕ್‌ಡೌನ್ ಸಮಯದಲ್ಲಿ ಚಾಹಲ್ ಮತ್ತು ಧನಶ್ರೀ ಅವರ ಪರಿಚಯ ಪ್ರಾರಂಭವಾಯಿತು. ಅದೇ ವರ್ಷ ಡಿಸೆಂಬರ್‌ನಲ್ಲಿ ಇಬ್ಬರೂ ವಿವಾಹವಾದರು. 2024 ರಲ್ಲಿ, ಅವರ ನಡುವೆ ಭಿನ್ನಾಭಿಪ್ರಾಯಗಳು ಉಂಟಾಗಲು ಪ್ರಾರಂಭಿಸಿದವು. ಅಂತಿಮವಾಗಿ, ಮಾರ್ಚ್ 2025 ರಲ್ಲಿ, ದಂಪತಿ ಕಾನೂನುಬದ್ಧವಾಗಿ ವಿಚ್ಛೇದನ ಪಡೆದು ಬೇರ್ಪಟ್ಟರು. ಅಂದಿನಿಂದ, ಇಬ್ಬರೂ ಯಾವುದೇ ವೇದಿಕೆಯಲ್ಲಿ ಒಟ್ಟಿಗೆ ಕಾಣಿಸಿಕೊಂಡಿಲ್ಲ.
ಧನಶ್ರೀ ಜೊತೆಗಿನ ಸಂಬಂಧ ಮುರಿದುಬಿದ್ದ ನಂತರ, ಆರ್ ಜೆ ಮಹ್ವಾಶ್ ಜೊತೆ ಚಾಹಲ್ ಹೆಸರು ಸುದ್ದಿಯಲ್ಲಿದೆ. ಐಪಿಎಲ್ ಪಂದ್ಯಗಳ ಸಮಯದಲ್ಲಿ ಮಹ್ವಾಶ್ ಕ್ರೀಡಾಂಗಣಕ್ಕೆ ಬಂದು ಚಾಹಲ್ ತಂಡವನ್ನು ಹುರಿದುಂಬಿಸುತ್ತಿರುವುದು ಕಂಡುಬಂದಿದೆ, ಇದು ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳಿಗೆ ಕಾರಣವಾಗಿದೆ.
'ದಿ 50' ಶೋ ಇದು ಫ್ರೆಂಚ್ ಶೋ 'ಲೆಸ್ ಸಿಂಕ್ವಾಂಟೆ' ಮಾದರಿಯ ಹೊಸ ಗೇಮ್ ಶೋ ಆಗಿದ್ದು, ಫೆಬ್ರವರಿ 1, 2026 ರಿಂದ ಆರಂಭವಾಗಲಿದೆ. ಈ ಶೋನಲ್ಲಿ 50 ಸೆಲೆಬ್ರಿಟಿಗಳು ಭಾಗವಹಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಚಹಲ್ ಅವರ ಹೆಸರನ್ನು ಇದರಲ್ಲಿ ಸೇರಿಸಲಾಗಿತ್ತು, ಆದರೆ ಈಗ ಅದು ಸುಳ್ಳೆಂದು ಸಾಬೀತಾಗಿದೆ.