Y. Khemchand Singh | ಮಣಿಪುರದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ವೈ. ಖೇಮಚಂದ್ ಸಿಂಗ್ 
ದೇಶ

ಶಾಂತಿ ಮರುಸ್ಥಾಪನೆಯ ಗುರಿಯೊಂದಿಗೆ ಅಧಿಕಾರಕ್ಕೇರಿದ ಖೇಮಚಂದ್ ಸಿಂಗ್...ಮಣಿಪುರದಲ್ಲಿ ಹೊಸ ರಾಜಕೀಯ ಯುಗ ಆರಂಭ! | Y. Khemchand Singh

ಪ್ರಮುಖ ಮುಖ್ಯಾಂಶಗಳು

  • ಮಣಿಪುರದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ವೈ. ಖೇಮಚಂದ್ ಸಿಂಗ್
  • ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ರದ್ದು
  • ಖೇಮಚಂದ್ ಸಿಂಗ್ ಆಯ್ಕೆಗೆ ಕಾರಣಗಳೇನು?
ಇಂಫಾಲ್‌: ಮಣಿಪುರದಲ್ಲಿ ಸುಮಾರು ಒಂದು ವರ್ಷದ ಬಳಿಕ ರಾಷ್ಟ್ರಪತಿ ಆಳ್ವಿಕೆ ಅಂತ್ಯಗೊಂಡಿದ್ದು, ಬಿಜೆಪಿಯ ಹಿರಿಯ ನಾಯಕ ವೈ. ಖೇಮಚಂದ್ ಸಿಂಗ್ (Y. Khemchand Singh) ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಇಂಫಾಲ್‌ನ ಲೋಕ ಭವನದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ರಾಜ್ಯಪಾಲ ಅಜಯ್ ಕುಮಾರ್ ಭಲ್ಲಾ ನೇತೃತ್ವದಲ್ಲಿ, ಸಿಎಂ ವೈ. ಖೇಮಚಂದ್ ಸಿಂಗ್, ಉಪಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಕುಕಿ ಸಮುದಾಯದ ನಾಯಕಿ ನೆಮ್ಚಾ ಕಿಪ್ಗೆನ್ ಮತ್ತು ಎನ್‌ಪಿಎಫ್ ನಾಯಕ ಲೋಸಿ ದಿಖೋ ಪ್ರಮಾಣ ವಚನ ಸ್ವೀಕರಿಸಿದರು.
ನವದೆಹಲಿಯಲ್ಲಿ ನಿನ್ನೆ ಸಿಂಗ್​​ರನ್ನು ಬಿಜೆಪಿಯ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆ ಮಾಡಲಾಗಿತ್ತು. ಸಭೆಯಲ್ಲಿ ಪಕ್ಷದ ಕೇಂದ್ರ ವೀಕ್ಷಕ ತರುಣ್ ಚುಗ್, ಈಶಾನ್ಯ ಉಸ್ತುವಾರಿ ಸಂಬಿತ್ ಪಾತ್ರ ಮತ್ತು ಬಿಜೆಪಿ ರಾಜ್ಯ ಅಧ್ಯಕ್ಷೆ ಎ ಶಾರದಾ ದೇವಿ ಸೇರಿದಂತೆ 35 ಜನ ಭಾಗವಹಿಸಿದ್ದರು. ಇದಕ್ಕೂ ಮುನ್ನ ಸಿಂಗ್ ರಾಜ್ಯಪಾಲ ಭಲ್ಲಾರನ್ನು ಭೇಟಿಯಾಗಿ ಸರ್ಕಾರ ರಚಿಸಲು ಹಕ್ಕು ಮಂಡಿಸಿದರು.  
ಹೊಸದಾಗಿ ಆಯ್ಕೆಯಾದ ಶಾಸಕಾಂಗ ಪಕ್ಷದ ನಾಯಕ ಖೇಮಚಂದ್ ಸಿಂಗ್ ಮತ್ತು ಬಿಜೆಪಿ ವೀಕ್ಷಕ ತರುಣ್ ಚುಗ್ ಸಮ್ಮುಖದಲ್ಲಿ ನಾವು ರಾಜ್ಯಪಾಲರನ್ನು ಭೇಟಿಯಾದೆವು. ರಾಜ್ಯದಲ್ಲಿ ಜನಪ್ರಿಯ ಸರ್ಕಾರ ರಚಿಸಲು ಎನ್‌ಡಿಎ ಹಕ್ಕು ಮಂಡಿಸಿತು ಎಂದು ರಾಜ್ಯ ಬಿಜೆಪಿ ಮುಖ್ಯಸ್ಥೆ ಎ ಶಾರದಾ ದೇವಿ ಹೇಳಿದರು.

ಸಿಎಂ ಖೇಮಚಂದ್ ಸಿಂಗ್ ಎಕ್ಸ್​ ಪೋಸ್ಟ್

ನಾನು ನವದೆಹಲಿಯಿಂದ ಆಗಮಿಸಿದ ಬಳಿಕ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್ ಮತ್ತು ಬಿಜೆಪಿ ಈಶಾನ್ಯ ಸಂಯೋಜಕ ಸಂಬಿತ್ ಪಾತ್ರ ಸಮ್ಮುಖದಲ್ಲಿ ಇಂದು ಗೌರವಾನ್ವಿತ ರಾಜ್ಯಪಾಲ ಅಜಯ್ ಕುಮಾರ್ ಭಲ್ಲಾ ಜಿ ಅವರ ಮುಂದೆ ಹೊಸ ಸರ್ಕಾರ ರಚನೆಗೆ ಹಕ್ಕು ಮಂಡಿಸಲು ಸಂತೋಷವಾಗಿದೆ ಎಂದು ಬರೆದುಕೊಂಡಿದ್ದಾರೆ.

ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ರದ್ದು

ಮಣಿಪುರದಲ್ಲಿ ಕಳೆದ ಒಂದು ವರ್ಷದಿಂದ ಜಾರಿಯಲ್ಲಿದ್ದ ರಾಷ್ಟ್ರಪತಿ ಆಳ್ವಿಕೆಯನ್ನು ಇಂದು (ಫೆಬ್ರವರಿ 4) ಅಧಿಕೃತವಾಗಿ ಹಿಂಪಡೆಯಲಾಯಿತು. ಮೈತೇಯಿ ಮತ್ತು ಕುಕಿ ಸಮುದಾಯಗಳ ನಡುವಿನ ತೀವ್ರ ಜನಾಂಗೀಯ ಹಿಂಸಾಚಾರದ ಹಿನ್ನೆಲೆಯಲ್ಲಿ ಅಂದಿನ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ರಾಜೀನಾಮೆ ನೀಡಿದ ಬಳಿಕ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿತ್ತು. ಇದೀಗ ಪರಿಸ್ಥಿತಿ ಸುಧಾರಿಸುತ್ತಿರುವ ಹಿನ್ನೆಲೆಯಲ್ಲಿ ಮತ್ತೆ ಚುನಾಯಿತ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ.
ಸಂವಿಧಾನದ 356 ನೇ ವಿಧಿಯ ಷರತ್ತಿನ (2) ರ ಮೂಲಕ ನೀಡಲಾದ ಅಧಿಕಾರವನ್ನು ಚಲಾಯಿಸಿ, ಭಾರತದ ರಾಷ್ಟ್ರಪತಿಗಳಾದ ನಾನು, ದ್ರೌಪದಿ ಮುರ್ಮು, ಫೆಬ್ರವರಿ 13, 2025 ರಂದು ಮಣಿಪುರ ರಾಜ್ಯಕ್ಕೆ ಸಂಬಂಧಿಸಿದಂತೆ ನಾನು ಹೊರಡಿಸಿದ ಘೋಷಣೆಯನ್ನು ಫೆಬ್ರವರಿ 4, 2026 ರಿಂದ ಜಾರಿಗೆ ಬರುವಂತೆ ರದ್ದುಗೊಳಿಸುತ್ತಿದ್ದೇನೆ ಎಂದು ರಾಷ್ಟ್ರಪತಿಗಳು ಹೊರಡಿಸಿದ ಘೋಷಣೆಯಲ್ಲಿ ತಿಳಿಸಲಾಗಿದೆ.

ಖೇಮಚಂದ್ ಸಿಂಗ್ ಆಯ್ಕೆಗೆ ಕಾರಣಗಳೇನು?

ಖೇಮಚಂದ್ ಸಿಂಗ್​ರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಿರುವುದರ ಹಿಂದೆ ಅನೇಕ ರಾಜಕೀಯ ಕಾರಣಗಳಿವೆ. ಖೇಮಚಂದ್ ಸಿಂಗ್ ಕಳೆದ ಡಿಸೆಂಬರ್‌ನಲ್ಲಿ ಕುಕಿ ಸಂಘಟನೆಗಳ ನೆಲೆಗಳಿಗೆ ಭೇಟಿ ನೀಡಿ ಶಾಂತಿಯ ಮಾತುಕತೆ ನಡೆಸಿದ್ದರು. ಈ ಮೂಲಕ ಅವರು ಎರಡೂ ಸಮುದಾಯಗಳ ನಡುವೆ ವಿಶ್ವಾಸಾರ್ಹತೆ ಗಳಿಸಿದ್ದಾರೆ.
ಖೇಮಚಂದ್ ಸಿಂಗ್​​ಗೆ ಸಂಘ ಪರಿವಾರದ ಪೂರ್ಣ ಬೆಂಬಲವಿದೆ ಎನ್ನಲಾಗಿದ್ದು, ಸಭಾಪತಿಯಾಗಿ ಅವರು ತೋರಿದ ನಿಷ್ಪಕ್ಷಪಾತ ಧೋರಣೆ ಮತ್ತು ಸಚಿವರಾಗಿ ಅವರ ಕಾರ್ಯವೈಖರಿ ಹೈಕಮಾಂಡ್​ ನಾಯಕರ ಗಮನಕ್ಕೆ ಬಂದಿದೆ. ಹೀಗಾಗಿ ಅವರೇ ಸೂಕ್ತ ಎಂದು ಭಾವಿಸಿ ವರಿಷ್ಟರು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನುವುದು ಮೂಲಗಳ ಮಾಹಿತಿ.

 ಮುಂದಿರುವ ಸವಾಲುಗಳು 

  1. ಶಾಂತಿ ಮರುಸ್ಥಾಪನೆ- ಸುಮಾರು 260ಕ್ಕೂ ಹೆಚ್ಚು ಜನರ ಬಲಿ ಪಡೆದ ಮತ್ತು ಸಾವಿರಾರು ಜನರನ್ನು ನಿರಾಶ್ರಿತರನ್ನಾಗಿ ಮಾಡಿದ ಜನಾಂಗೀಯ ಸಂಘರ್ಷವನ್ನು ಸಂಪೂರ್ಣವಾಗಿ ಹತೋಟಿಗೆ ತರುವುದು ನೂತನ ಮುಖ್ಯಮಂತ್ರಿಗಳ ಮೊದಲ ಆದ್ಯತೆಯಾಗಿದೆ. 
  2.  ನಂಬಿಕೆಯ ಮರುಸ್ಥಾಪನೆ- ಮೈತೇಯಿ ಮತ್ತು ಕುಕಿ ಸಮುದಾಯಗಳ ನಡುವೆ ಮೂಡಿರುವ ದೊಡ್ಡ ಕಂದಕವನ್ನು ಸರಿಪಡಿಸುವುದು ಇಂದಿನ ಅಗತ್ಯವಾಗಿದೆ. 
  3.  ಅಭಿವೃದ್ಧಿ ಮತ್ತು ಆಡಳಿತ- ಒಂದು ವರ್ಷದ ರಾಷ್ಟ್ರಪತಿ ಆಳ್ವಿಕೆಯ ಬಳಿಕ ರಾಜ್ಯದಲ್ಲಿ ಮೂಲಸೌಕರ್ಯ ಮತ್ತು ಆರ್ಥಿಕ ಚಟುವಟಿಕೆಗಳಿಗೆ ಚೇತರಿಕೆ ನೀಡುವುದು ಹೊಸ ಮುಖ್ಯಮಂತ್ರಿಗಳ ಮುಂದಿರುವ ದೊಡ್ಡ ಸವಾಲು(ಏಜೆನ್ಸೀಸ್​).