ಹೋಮ್​​ ಟೂರ್​ನಲ್ಲಿ ಲಕ್ಷುರಿ ಜೀವನ ಪ್ರದರ್ಶಿಸಿದ ಯೂಟ್ಯೂಬರ್​ಗೆ ಬಿಗ್​ ಶಾಕ್​: ಮಧ್ಯರಾತ್ರಿ ಮನೆಗೆ ನುಗ್ಗಿದ ಆಗಂತುಕರು! YouTuber  
ದೇಶ

ಹೋಮ್​​ ಟೂರ್​ನಲ್ಲಿ ಲಕ್ಷುರಿ ಜೀವನ ಪ್ರದರ್ಶಿಸಿದ ಯೂಟ್ಯೂಬರ್​ಗೆ ಬಿಗ್​ ಶಾಕ್​: ಮಧ್ಯರಾತ್ರಿ ಮನೆಗೆ ನುಗ್ಗಿದ ಆಗಂತುಕರು! YouTuber

ಪ್ರಮುಖ ಮುಖ್ಯಾಂಶಗಳು

  • ಐಷಾರಾಮಿ ಜೀವನಶೈಲಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಅತಿಯಾಗಿ ಪ್ರದರ್ಶಿಸಿದ ಮಹಿಳೆಗೆ ಶಾಕ್​
  • ಮಧ್ಯಪ್ರದೇಶದ ಯೂಟ್ಯೂಬರ್ ರಚನಾ ಗುರ್ಜರ್ ಅವರ ಮನೆಗೆ ಮಧ್ಯರಾತ್ರಿ ನುಗ್ಗಿದ ಅಪರಿಚಿತ ಕಳ್ಳರು
  • ಮನೆಯಲ್ಲಿದ್ದ ಚಿನ್ನ ಮತ್ತು ಬೆಳ್ಳಿ ಆಭರಣಗಳು, ನಗದು ಹಾಗೂ ಒಂದು ಕಾರ್ಟನ್ ಎನರ್ಜಿ ಡ್ರಿಂಕ್ಸ್ ದೋಚಿ ಪರಾರಿ
  • ಕಳುವಾಗಿರುವ ಒಟ್ಟು ವಸ್ತುಗಳ ಮೌಲ್ಯ ಸುಮಾರು 8 ಲಕ್ಷದಿಂದ 10 ಲಕ್ಷ ರೂಪಾಯಿಗಳಷ್ಟಿರಬಹುದೆಂದು ಅಂದಾಜು
ಭೋಪಾಲ್​: ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯಲ್ಲಿ ಯೂಟ್ಯೂಬರ್ ( YouTuber ) ಆಗಿರುವ ಗೃಹಿಣಿಯೊಬ್ಬರು ತಮ್ಮ ಬಳಿಯಿದ್ದ ಚಿನ್ನಾಭರಣ, ನಗದು ಹಾಗೂ ಐಷಾರಾಮಿ ಜೀವನಶೈಲಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಅತಿಯಾಗಿ ಪ್ರದರ್ಶಿಸಿದ್ದು, ಅವರ ಈ ಡಿಜಿಟಲ್ ಹುಚ್ಚಾಟವೇ ಇದೀಗ ಅವರ ನಿಜ ಜೀವನಕ್ಕೆ ಸಂಚಕಾರ ತಂದಿಟ್ಟಿದೆ.
ಹೌದು, ಶನಿವಾರದ ಮುಂಜಾನೆ ಮೋಹನಿ ಗ್ರಾಮದಲ್ಲಿರುವ ಯೂಟ್ಯೂಬರ್ ರಚನಾ ಗುರ್ಜರ್ ಅವರ ಮನೆಗೆ ನುಗ್ಗಿದ ಅಪರಿಚಿತ ಕಳ್ಳರು, ರಚನಾ ಮತ್ತು ಅವರ ಕುಟುಂಬಸ್ಥರನ್ನು ರೂಮಿನೊಳಗೆ ಲಾಕ್ ಮಾಡಿ, ಮನೆಯಲ್ಲಿದ್ದ ಚಿನ್ನ ಮತ್ತು ಬೆಳ್ಳಿ ಆಭರಣಗಳು, ನಗದು ಹಾಗೂ ಒಂದು ಕಾರ್ಟನ್ ಎನರ್ಜಿ ಡ್ರಿಂಕ್ಸ್ ಅನ್ನು ದೋಚಿ ಪರಾರಿಯಾಗಿದ್ದಾರೆ. ಸದ್ಯ ಕಳುವಾಗಿರುವ ಒಟ್ಟು ವಸ್ತುಗಳ ಮೌಲ್ಯ ಸುಮಾರು 8 ಲಕ್ಷದಿಂದ 10 ಲಕ್ಷ ರೂಪಾಯಿಗಳಷ್ಟಿರಬಹುದು ಎಂದು ಅಂದಾಜಿಸಲಾಗಿದೆ.
ಈ ಘಟನೆ ಬೆನ್ನಲ್ಲೇ ರಚನಾ ಗುರ್ಜರ್ ಅವರು ನರ್ವರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ರಚನಾ, ತಡರಾತ್ರಿ 2 ಗಂಟೆಯ ಸುಮಾರಿಗೆ ಕುಟುಂಬಸ್ಥರೆಲ್ಲರೂ ಮಲಗಿದ್ದಾಗ ಮನೆಗೆ ನುಗ್ಗಿದ ಕಳ್ಳರು, ನಮ್ಮನ್ನು ಕೋಣೆಯೊಳಗೆ ಲಾಕ್ ಮಾಡಿ ಈ ಕೃತ್ಯ ಎಸಗಿದ್ದಾರೆ. ಸುಮಾರು 8 ರಿಂದ 10 ಲಕ್ಷ ರೂಪಾಯಿ ಮೌಲ್ಯದ ಚಿನ್ನ, ಬೆಳ್ಳಿ ಆಭರಣಗಳು, ನಗದು ಹಾಗೂ ಎನರ್ಜಿ ಡ್ರಿಂಕ್ಸ್ ಬಾಕ್ಸ್ ಅನ್ನು ಕದ್ದೊಯ್ದಿದ್ದಾರೆ ಎಂದು ತಿಳಿಸಿದ್ದಾರೆ. ಅಷ್ಟೇ ಅಲ್ಲದೆ, ತಮ್ಮ ಮುಖಗಳು ರೆಕಾರ್ಡ್ ಆಗಬಾರದು ಎಂಬ ಉದ್ದೇಶದಿಂದ ಕಳ್ಳರು ಬಹುಶಃ ಲಾಟಿಯೊಂದನ್ನು ಬಳಸಿ ಮನೆಯಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳ ಆ್ಯಂಗಲ್‌ಗಳನ್ನು ಕೂಡ ಬದಲಾಯಿಸಿದ್ದರು ಎಂದು ರಚನಾ ಹೇಳಿದ್ದಾರೆ.
ಮುಂಜಾನೆ 4 ಗಂಟೆಯ ಸುಮಾರಿಗೆ ಎಚ್ಚರಗೊಂಡು ರೂಮಿನ ಬಾಗಿಲು ಹೊರಗಿನಿಂದ ಲಾಕ್ ಆಗಿರುವುದನ್ನು ಗಮನಿಸಿದ ಕುಟುಂಬಸ್ಥರಿಗೆ ಕಳ್ಳತನ ನಡೆದಿರುವ ವಿಷಯ ಅರಿವಾಗಿದೆ. ತಕ್ಷಣವೇ ಅವರು ತಮ್ಮ ಸಂಬಂಧಿಕರಿಗೆ ಕರೆ ಮಾಡಿದ್ದು, ಸ್ಥಳಕ್ಕೆ ಧಾವಿಸಿ ಬಂದ ಸಂಬಂಧಿಕರು ಬಾಗಿಲು ತೆರೆದು ಅವರನ್ನು ಹೊರಗೆ ಕರೆತಂದಿದ್ದಾರೆ. ಇನ್ನು ಈ ದರೋಡೆ ಪ್ರಕರಣವನ್ನು ಖಚಿತಪಡಿಸಿರುವ ಶಿವಪುರಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ್ ಮುಲೆ ಅವರು, ಈಗಾಗಲೇ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಲು ಪೊಲೀಸರ ವಿಶೇಷ ತಂಡಗಳು ಕಾರ್ಯಾಚರಣೆ ನಡೆಸುತ್ತಿವೆ ಎಂದು ತಿಳಿಸಿದ್ದಾರೆ.
ಪೊಲೀಸ್ ತನಿಖಾಧಿಕಾರಿಗಳು ಪ್ರಸ್ತುತ ಮನೆಯಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ಮಾಸ್ಕ್ ಧರಿಸಿದ ಕಳ್ಳನೊಬ್ಬ ತನ್ನ ಗುರುತು ಸಿಗಬಾರದೆಂಬ ಉದ್ದೇಶದಿಂದ ಲಾಟಿಯ ಮೂಲಕ ಕ್ಯಾಮೆರಾ ಆ್ಯಂಗಲ್ ಬದಲಾಯಿಸುತ್ತಿರುವುದು ಒಂದು ಕ್ಲಿಪ್‌ನಲ್ಲಿ ಪತ್ತೆಯಾಗಿದೆ. ಆರೋಪಿಗಳು ಅದೇ ಗ್ರಾಮದವರು ಅಥವಾ ಸುತ್ತಮುತ್ತಲಿನ ಪ್ರದೇಶದವರೇ ಆಗಿರಬಹುದು ಹಾಗೂ ಈ ಕುಟುಂಬದ ದಿನಚರಿ ಮತ್ತು ಮನೆಯ ಬಗ್ಗೆ ಅವರಿಗೆ ಮೊದಲೇ ಸಂಪೂರ್ಣ ಮಾಹಿತಿ ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಇನ್ನೂ ಈ ಕೃತ್ಯದಲ್ಲಿ ಸಾಮಾಜಿಕ ಜಾಲತಾಣಗಳ ಪಾತ್ರದ ಕುರಿತು ತೀವ್ರ ತನಿಖೆ ನಡೆಯುತ್ತಿದ್ದು, ಒಂದು ಲಕ್ಷಕ್ಕೂ ಅಧಿಕ ಫಾಲೋವರ್ಸ್ ಹೊಂದಿರುವ ರಚನಾ ಗುರ್ಜರ್ ಅವರು ಇತ್ತೀಚೆಗೆ ತಮ್ಮ ಐಷಾರಾಮಿ ಜೀವನಶೈಲಿ, ಚಿನ್ನಾಭರಣ ಹಾಗೂ ನಗದನ್ನು ಪ್ರದರ್ಶಿಸುವ ವಿಡಿಯೋಗಳನ್ನು ಪೋಸ್ಟ್ ಮಾಡಿದ್ದರು. ಅದರಲ್ಲಿ ಒಂದು ವಿಡಿಯೋದಲ್ಲಿ ಮನೆಯ ಪ್ರವೇಶ ದ್ವಾರದಿಂದ ಹಿಡಿದು ಒಳಗಿನ ಕೋಣೆಗಳವರೆಗೆ ಸಂಪೂರ್ಣ ವಿವರಗಳಿದ್ದರೆ, ಮತ್ತೊಂದು ವಿಡಿಯೋದಲ್ಲಿ ಬೆಲೆಬಾಳುವ ಆಭರಣ ಹಾಗೂ ನಗದನ್ನು ಮೇಜಿನ ಮೇಲಿಟ್ಟು ಚಿತ್ರೀಕರಿಸಲಾಗಿತ್ತು.
ಕಳ್ಳರು ಈ ವಿಡಿಯೋಗಳನ್ನು ಸೂಕ್ಷ್ಮವಾಗಿ ಗಮನಿಸಿಯೇ ದರೋಡೆಗೆ ಸ್ಕೆಚ್ ಹಾಕಿದ್ದಾರೆ ಎಂದು ಪೊಲೀಸ್ ಮೂಲಗಳು ಬಲವಾಗಿ ನಂಬಿವೆ. ಏಕೆಂದರೆ, ಈ ವಿಡಿಯೋಗಳು ಕಳ್ಳರಿಗೆ ಮನೆಯ ವಿನ್ಯಾಸ, ಬೆಲೆಬಾಳುವ ವಸ್ತುಗಳು ಎಲ್ಲಿದ್ದವು ಮತ್ತು ಅಲ್ಲಿನ ಭದ್ರತಾ ವ್ಯವಸ್ಥೆ ಹೇಗಿದೆ ಎಂಬ ಸಂಪೂರ್ಣ ರೋಡ್‌ಮ್ಯಾಪ್ ನೀಡಿದಂತಾಗಿದೆ. ಸದ್ಯಕ್ಕೆ ಸಿಸಿಟಿವಿಯಲ್ಲಿ ರೆಕಾರ್ಡ್​ ಆಗಿರುವ ಮುಖವಾಡ ಧರಿಸಿದ ವ್ಯಕ್ತಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಅಂದಹಾಗೆ, ಜಾಲತಾಣಗಳಲ್ಲಿ ತಮ್ಮ ಆಸ್ತಿಪಾಸ್ತಿ ಮತ್ತು ಮನೆಯ ಒಳಗಿನ ದೃಶ್ಯಗಳನ್ನು ಅತಿಯಾಗಿ ಪ್ರದರ್ಶಿಸುವ ಮುನ್ನ ಎಚ್ಚರದಿಂದಿರಬೇಕು ಎಂಬ ಗಂಭೀರ ಸಂದೇಶವನ್ನು ಈ ಒಂದು ಘಟನೆ ಸಾರಿದೆ, (ಏಜೆನ್ಸೀಸ್​).