- ಖ್ಯಾತ ಯೂಟ್ಯೂಬರ್ ಅರುಣ್ ಪನ್ವಾರ್(ArunPanwar) ಅವರ ವಿವಾಹದ ವಿಡಿಯೋವೊಂದು ವೈರಲ್
- ಸುಮಾರು 71 ಲಕ್ಷ ನಗದು ಮತ್ತು 21 ತೊಲ ಚಿನ್ನವನ್ನು ಉಡುಗೊರೆಯಾಗಿ ಸ್ವೀಕರಿಸುತ್ತಿರುವ ವಿಡಿಯೋ ವೈರಲ್
- "ವರದಕ್ಷಿಣೆ ಅಲ್ಲ, ಇದು ದಾನ" ಎಂದ ಯೂಟ್ಯೂಬರ್!
ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಮಿಲಿಯನ್ ಗಟ್ಟಲೆ ಅಭಿಮಾನಿಗಳನ್ನು ಹೊಂದಿರುವ ಪ್ರಭಾವಿ ವ್ಯಕ್ತಿಗಳು ಮಾಡುವ ಕೆಲಸಗಳು ಸಮಾಜದ ಮೇಲೆ ದೊಡ್ಡ ಪರಿಣಾಮ ಬೀರುತ್ತವೆ. ಆದರೆ, ಖ್ಯಾತ ಯೂಟ್ಯೂಬರ್ ಅರುಣ್ ಪನ್ವಾರ್(ArunPanwar) ಅವರ ವಿವಾಹದ ವಿಡಿಯೋವೊಂದು ಈಗ ವರದಕ್ಷಿಣೆ ಪದ್ಧತಿಯ ಕುರಿತು ಹೊಸ ವಿವಾದವನ್ನು ಮೈಮೇಲೆ ಎಳೆದುಕೊಂಡಿದೆ.
ಸುಮಾರು 71 ಲಕ್ಷ ನಗದು ಮತ್ತು 21 ತೊಲ ಚಿನ್ನವನ್ನು ಉಡುಗೊರೆಯಾಗಿ ಸ್ವೀಕರಿಸುತ್ತಿರುವ ವಿಡಿಯೋ ವೈರಲ್ ಆಗಿದ್ದು, ಇದು 'ವರದಕ್ಷಿಣೆ'ಯ ಮುಖವಾಡವೇ ಎಂಬ ಪ್ರಶ್ನೆ ಮೂಡಿದೆ.
ಹೌದು, ಕಾರು ಮತ್ತು ಟ್ರಕ್‌ಗಳ ವಿಮರ್ಶೆಗೆ ಹೆಸರಾದ ಅರುಣ್ ಪನ್ವಾರ್ (2.4 ಮಿಲಿಯನ್ ಚಂದಾದಾರರು) ಅವರ ವಿವಾಹವು 2025 ರ ಕೊನೆಯಲ್ಲಿ ನಡೆದಿತ್ತು. ಆದರೆ, ಇತ್ತೀಚೆಗೆ ಈ ವಿವಾಹದ ತುಣುಕುಗಳು ಇನ್‌ಸ್ಟಾಗ್ರಾಮ್ ಮತ್ತು ಎಕ್ಸ್ (ಟ್ವಿಟ್ಟರ್) ನಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ ಅರುಣ್ ಪನ್ವಾರ್ ಕುಟುಂಬದವರು ಕಂತೆ ಕಂತೆ ನೋಟುಗಳನ್ನು ಮತ್ತು ಭಾರಿ ಪ್ರಮಾಣದ ಚಿನ್ನಾಭರಣಗಳನ್ನು ಸ್ವೀಕರಿಸುತ್ತಿರುವುದನ್ನು ಕಾಣಬಹುದು.
"ವರದಕ್ಷಿಣೆ ಅಲ್ಲ, ಇದು ದಾನ" ಎಂದ ಯೂಟ್ಯೂಬರ್!
ವಿಡಿಯೋದಾದ್ಯಂತ ಈ ಹಣ ಮತ್ತು ಒಡವೆಗಳನ್ನು "ದಾನ" ಅಥವಾ "ಉಡುಗೊರೆ" ಎಂದು ಪದೇ ಪದೇ ಸಂಬೋಧಿಸಲಾಗಿದೆ. ವರದಕ್ಷಿಣೆ (Dahej) ಎಂಬ ಪದದ ಬದಲಿಗೆ 'ದಾನ' ಎಂಬ ಪದವನ್ನು ಬಳಸಿರುವುದು ನೆಟ್ಟಿಗರನ್ನು ಕೆರಳಿಸಿದೆ. "ಹೆಸರು ಬದಲಿಸಿದ ಮಾತ್ರಕ್ಕೆ ಅದು ವರದಕ್ಷಿಣೆ ಅಲ್ಲದ ಪದ್ಧತಿ ಆಗುತ್ತದೆಯೇ?" ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಅರ್ಚಕರು ಮಂತ್ರ ಘೋಷಗಳ ನಡುವೆ ಈ ಹಣದ ಮೊತ್ತವನ್ನು ಘೋಷಿಸುತ್ತಿರುವುದು ವಿಡಿಯೋದಲ್ಲಿದೆ.
ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ!
ಅರುಣ್ ಪನ್ವಾರ್ ತಿಂಗಳಿಗೆ ಸುಮಾರು 20 ರಿಂದ 25 ಲಕ್ಷದವರೆಗೆ ಸಂಪಾದಿಸುತ್ತಾರೆ ಎಂದು ವರದಿಗಳಾಗಿವೆ. ಇಷ್ಟು ಶ್ರೀಮಂತ ಹಿನ್ನೆಲೆಯುಳ್ಳ ವ್ಯಕ್ತಿ ಇಷ್ಟು ದೊಡ್ಡ ಮೊತ್ತದ ಹಣವನ್ನು ಸಾರ್ವಜನಿಕವಾಗಿ ಪ್ರದರ್ಶಿಸುತ್ತಾ ಸ್ವೀಕರಿಸುವುದು ತಪ್ಪು ಮಾದರಿಯಾಗಿದೆ ಎಂಬ ಟೀಕೆಗಳು ವ್ಯಕ್ತವಾಗಿವೆ. ಕೆಲವರು ಇದು ಅವರ ವೈಯಕ್ತಿಕ ವಿಷಯ ಮತ್ತು ಅವರ ಸಂಪ್ರದಾಯ ಎಂದು ಸಮರ್ಥಿಸಿಕೊಂಡರೆ, ಬಹುತೇಕರು ಇದು ಸಮಾಜದಲ್ಲಿ ವರದಕ್ಷಿಣೆ ಪದ್ಧತಿಯನ್ನು ಮತ್ತಷ್ಟು ಪ್ರೋತ್ಸಾಹಿಸಿದಂತಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಇನ್‌ಸ್ಟಾಗ್ರಾಮ್ ಪೋಸ್ಟ್: @Indiawire ಎಂಬ ಹ್ಯಾಂಡಲ್ ಈ ವಿಡಿಯೋ ಹಂಚಿಕೊಂಡು, "ವರದಕ್ಷಿಣೆ ಅಲ್ಲವಂತೆ, ಇದು ದಾನವಂತೆ!" ಎಂದು ವ್ಯಂಗ್ಯವಾಡಿದೆ.ಈ ವಿವಾದದ ಕುರಿತು ಅರುಣ್ ಪನ್ವಾರ್ ಈವರೆಗೆ ಯಾವುದೇ ಅಧಿಕೃತ ಸ್ಪಷ್ಟನೆ ನೀಡಿಲ್ಲ. ಆದರೆ, ಅವರ ಅಭಿಮಾನಿ ಬಳಗ ಮಾತ್ರ ಈ ಕುರಿತು ಎರಡು ಭಾಗಗಳಾಗಿ ವಿಭಜನೆಯಾಗಿದೆ,(ಏಜೆನ್ಸೀಸ್).