ರೈಲ್ವೆ ಬೆಡ್‌ಶೀಟ್ ಹೊದ್ದು ರಸ್ತೆಗಿಳಿದ ಯುವಕರು
- ವೆಸ್ಟರ್ನ್ ರೈಲ್ವೆ ಎಂದು ಮುದ್ರಿಸಿದ ಬೆಡ್‌ಶೀಟ್‌ಗಳನ್ನು ಹೊದ್ದ ಯುವಕರು
- ಅಂಗಡಿಯೊಂದರ ಬಳಿ ಯುವಕರು ನಿಂತಿರುವ ವಿಡಿಯೋ ವೈರಲ್ ಆಗಿದೆ
- ರೈಲ್ವೆ ಆಸ್ತಿ ದುರ್ಬಳಕೆ ಮಾಡಿದವರ ವಿರುದ್ಧ ನೆಟ್ಟಿಗರ ಅಸಮಾಧಾನ
Youth wearing railway bed sheets: ರೈಲಿನಲ್ಲಿ ಪ್ರಯಾಣಿಸುವಾಗ ಪ್ರಯಾಣಿಕರಿಗೆ ನೀಡುವ ಬೆಡ್‌ಶೀಟ್‌ಗಳ ವಿಚಾರ ಆಗಾಗ್ಗೆ ಚರ್ಚೆಯಾಗುತ್ತಲೇ ಇರುತ್ತೆ. ಇದೀಗ ಇದೇ ಚಾದರಗಳನ್ನು ಹೊದ್ದು ಮೂವರು ಯುವಕರು ರಸ್ತೆ ಬದಿಯಲ್ಲಿ ಕಾಣಿಸಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ಮೂವರು ಯುವಕರು ಬಿಳಿ ಬಣ್ಣದ ಚಾದರಗಳನ್ನು ಮೈಮೇಲೆ ಹೊದ್ದು ರಸ್ತೆ ಪಕ್ಕದ ಅಂಗಡಿಯೊಂದರ ಬಳಿ ನಿಂತಿರುವುದು ಕಾಣಿಸುತ್ತೆ. ಈ ಚಾದರಗಳ ಮೇಲೆ ನೀಲಿ ಬಣ್ಣದಲ್ಲಿ ‘ಪಶ್ಚಿಮ ರೈಲ್ವೆ’ ಎಂದು ಪ್ರಿಂಟ್ ಮಾಡಿದ್ದು ಸ್ಪಷ್ಟವಾಗಿ ಕಾಣಿಸುತ್ತೆ.
ಇನ್ನು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ನೆಟ್ಟಿಗರು ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ. ರೈಲ್ವೆ ಪ್ರಯಾಣಿಕರ ಬಳಕೆಗೆ ನೀಡುವ ಬೆಡ್‌ಶೀಟ್‌ಗಳು ಸಾರ್ವಜನಿಕರ ಕೈಗೆ ಹೇಗೆ ಬಂದವು? ಇವುಗಳನ್ನು ರೈಲಿನಿಂದ ತೆಗೆದುಕೊಂಡು ಬಂದಿದ್ದಾರೆಯೇ? ಅಥವಾ ಬೇರೆ ಮೂಲದಿಂದ ಬಂದಿವೆಯೇ ಎಂಬ ಚರ್ಚೆ ಶುರುವಾಗಿದೆ.
ಕಳವು ಆರೋಪಕ್ಕೆ ಸಾಕ್ಷ್ಯವಿಲ್ಲ
ಈ ವಿಡಿಯೋ ವೈರಲ್ ಆಗಿದ್ದರೂ, ಯುವಕರು ರೈಲ್ವೆ ಬೆಡ್‌ಶೀಟ್‌ಗಳನ್ನು ಕದ್ದಿದ್ದಾರೆ ಎಂಬುದನ್ನು ಖಚಿತಪಡಿಸುವ ಯಾವುದೇ ಅಧಿಕೃತ ಮಾಹಿತಿ ಸದ್ಯಕ್ಕೆ ಸಿಕ್ಕಿಲ್ಲ. ಅಲ್ಲದೆ ಯಾವ ಸ್ಥಳದಲ್ಲಿ ವಿಡಿಯೋ ಮಾಡಲಾಗಿದೆ ಮತ್ತು ಆ ಯುವಕರು ಯಾರು ಎಂಬ ಬಗ್ಗೆಯೂ ಸ್ಪಷ್ಟತೆ ಇಲ್ಲ.
ಭಾರತೀಯ ರೈಲ್ವೆಯ ಎಸಿ ಕೋಚ್‌ಗಳಲ್ಲಿ ಪ್ರಯಾಣಿಕರಿಗೆ ನೀಡಲಾಗುವ ಬೆಡ್‌ಶೀಟ್, ಬ್ಲಾಂಕೆಟ್, ಟವೆಲ್ ಸೇರಿದಂತೆ ವಿವಿಧ ವಸ್ತುಗಳು ಕಳವಾಗುವ ಬಗ್ಗೆ ಈ ಹಿಂದೆಯೂ ವರದಿಗಳಾಗಿದ್ದವು. ಆರ್‌ಟಿಐ ಆಧಾರಿತ ವರದಿಗಳಲ್ಲೂ ಇಂತಹ ವಸ್ತುಗಳ ನಷ್ಟದ ಬಗ್ಗೆ ಮಾಹಿತಿ ಬಹಿರಂಗವಾಗಿತ್ತು. ಇದೀಗ ರೈಲ್ವೆ ಎಂದು ಸ್ಪಷ್ಟವಾಗಿ ಮುದ್ರಿಸಿರುವ ಬೆಡ್‌ಶೀಟ್‌ಗಳನ್ನು ಹೊದ್ದು ಯುವಕರು ಸಾರ್ವಜನಿಕವಾಗಿ ಕಾಣಿಸಿಕೊಂಡಿರುವ ವಿಡಿಯೋ ಮತ್ತೆ ರೈಲ್ವೆ ಆಸ್ತಿಯ ಸುರಕ್ಷತೆ, ದುರ್ಬಳಕೆಯ ಬಗ್ಗೆ ಚರ್ಚೆ ಹುಟ್ಟುಹಾಕಿದೆ.