DUSU Elections | ಎಬಿವಿಪಿ ಜಯಭೇರಿಯ ಬಳಿಕ ಬಿಜೆಪಿ ನಾಯಕರ ಹರ್ಷೋದ್ಗಾರ!
ನವದೆಹಲಿ: ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತು (ABVP) ದೆಹಲಿ ವಿಶ್ವವಿದ್ಯಾಲಯ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ (DUSU Elections) ಅಧ್ಯಕ್ಷ, ಕಾರ್ಯದರ್ಶಿ ಮತ್ತು ಜಂಟಿ ಕಾರ್ಯದರ್ಶಿ ಸೇರಿದಂತೆ ಮೂರು ಸ್ಥಾನಗಳನ್ನು ಗೆದ್ದುಕೊಂಡ ನಂತರ ಬಿಜೆಪಿ ಈ ವಿಜಯವನ್ನು ಕೊಂಡಾಡಿದೆ.
ರಾಷ್ಟ್ರೀಯ ವಿದ್ಯಾರ್ಥಿ ಸಂಘ (NSUI) ಒಂದೇ ಒಂದು ಸ್ಥಾನವನ್ನೂ ಸಹ ಗೆಲ್ಲಲು ವಿಫಲವಾಗಿದ್ದು, ಈ ವಿಷಯವಾಗಿ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಕಿರಣ್ ರಿಜಿಜು, ಈ ಗೆಲುವನ್ನು ತುಂಬಾ ಮುಖ್ಯವಾದ ಮತ್ತು ಆಳವಾದ ಸಾಂಕೇತಿಕ ಎಂದು ಬಣ್ಣಿಸುವುದರ ಜೊತೆಗೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಎಬಿವಿಪಿಗೆ ಅಭಿನಂದನೆ ಸಲ್ಲಿಸಿದ ಅವರು, ಕಾಂಗ್ರೆಸ್‌ನ ನಿರೂಪಣೆಗಳು ದಯನೀಯವಾಗಿ ಸೋತಿವೆ ಎಂದು ಕುಟುಕಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ರಿಜಿಜು, ರಾಹುಲ್ ನೇತೃತ್ವದ ಚಾತ್ರೋ ಕೀ ಗೂಂಜ್ ಅಭಿಯಾನವನ್ನು ಯುವಕರು ತಿರಸ್ಕರಿಸಿದ್ದು, ವಿದ್ಯಾರ್ಥಿಗಳು ಸ್ಪಷ್ಟವಾಗಿ ತಮ್ಮ ಅಭಿಪ್ರಾಯವನ್ನು ಮತದ ಮೂಲಕ ವ್ಯಕ್ತಪಡಿಸಿದ್ದಾರೆ. ಒಂದು ರೀತಿಯಲ್ಲಿ, ಡಿಎಎಸ್‌ಯು ಚುನಾವಣೆಯು ಯುವಕರ ಧ್ವನಿಯನ್ನು ಪ್ರತಿಬಿಂಬಿಸುವ ಜನಾಭಿಪ್ರಾಯ ಸಂಗ್ರಹದಂತೆ ಕಾರ್ಯನಿರ್ವಹಿಸುತ್ತದೆ ಎಂದು ತಿಳಿಸಿದರು.
ಬಿಜೆಪಿಯ ದೆಹಲಿ ಘಟಕದ ಮುಖ್ಯಸ್ಥ ಹರ್ಷ್ ಮಲ್ಹೋತ್ರಾ ಅವರು ಎಬಿವಿಪಿಯ ವಿಜಯವನ್ನು ಐತಿಹಾಸಿಕ ಸಾಧನೆ ಎಂದು ಕರೆದಿದ್ದು, ವಿಜೇತ ಅಭ್ಯರ್ಥಿಗಳಿಗೆ ತಮ್ಮ ಶುಭ ಹಾರೈಕೆಗಳನ್ನು ತಿಳಿಸಿದ್ದಾರೆ. ಚುನಾವಣೆಯಲ್ಲಿ ಎನ್‌ಎಸ್‌ಯುಐನ ಪ್ರದರ್ಶನದ ಕುರಿತು ಕಾಂಗ್ರೆಸ್ ಅನ್ನು ತರಾಟೆಗೆ ತೆಗೆದುಕೊಂಡ ಅವರು, ತುಕ್ಡೆ-ತುಕ್ಡೆ ಗ್ಯಾಂಗ್ನ ನೆಗೆಟಿವ್ ರಾಜಕೀಯವನ್ನು ಯುವಕರು ತಿರಸ್ಕರಿಸಿದ್ದಾರೆ ಎಂದರು. ಈ ಗೆಲುವು ರಾಷ್ಟ್ರೀಯವಾದಿ ಸಿದ್ಧಾಂತದ ವಿಜಯವಾಗಿದ್ದು, 2047ರ ವೇಳೆಗೆ ವಿಕಸಿತ ಭಾರತದ ಪ್ರಧಾನ ಮಂತ್ರಿಯವರ ದೃಷ್ಟಿಕೋನದ ಗೆಲುವು, ದೆಹಲಿಯ ವಿದ್ಯಾರ್ಥಿಗಳು ತಾವು ರಾಷ್ಟ್ರೀಯತೆಯೊಂದಿಗೆ ಮತ್ತು ಯುವ ಹಾಗೂ ಅಭಿವೃದ್ಧಿ ಹೊಂದಿದ ಭಾರತವನ್ನು ಗುರಿಯಾಗಿಟ್ಟುಕೊಂಡ ಪ್ರಧಾನಿ ನರೇಂದ್ರ ಮೋದಿ ಅವರ ನೀತಿಗಳೊಂದಿಗೆ ನಿಲ್ಲುತ್ತೇವೆ ಎಂಬುದನ್ನು ಸಾಬೀತುಪಡಿಸಿದ್ದಾರೆ ಎಂದು ತಿಳಿಸಿದರು.
ಬಿಜೆಪಿ ಹಿರಿಯ ನಾಯಕ ವೀರೇಂದ್ರ ಸಚ್‌ದೇವ್ ಕೂಡ ಎಬಿವಿಪಿಯ ವಿಜಯವನ್ನು ಶ್ಲಾಘಿಸಿದ್ದು, ಇದು ಭಾರತದ ಯುವಕರು ನಿಜವಾಗಿ ಏನು ಯೋಚಿಸುತ್ತಾರೆ ಎಂಬುದನ್ನು ತೋರಿಸುತ್ತದೆ. ಯುವಕರು ಗೊಂದಲಕ್ಕೊಳಗಾಗಿಲ್ಲ ಮತ್ತು ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಭಾರತದ ಭವಿಷ್ಯವು ಸುರಕ್ಷಿತ ಕೈಯಲ್ಲಿದೆ ಎಂದು ಅವರಿಗೆ ತಿಳಿದಿದೆ, ಅವರು ಜೂಟ್ ಕಿ ಗೂಂಜ್ ಹೆಚ್ಚು ಕಾಲ ಉಳಿಯುವುದಿಲ್ಲ ಎಂಬುದನ್ನು ಅರಿತುಕೊಂಡಿದ್ದಾರೆ. ರಾಹುಲ್ ಗಾಂಧಿ ಜೀ, ನೀವು ಕಾರ್ಯಕ್ರಮಗಳಿಗೆ ಹಾಜರಾಗುವುದನ್ನು ಮುಂದುವರಿಸಬಹುದು, ಆದರೆ ಅಂತಿಮವಾಗಿ ಭಾರತದ ಯುವಕರು ಪ್ರಧಾನಿ ಮೋದಿಯವರೊಂದಿಗೆ ದೃಢವಾಗಿ ನಿಲ್ಲುತ್ತಾರೆ ಎಂದು ಸಚ್‌ದೇವ್ ತಮ್ಮ ವಿಡಿಯೋ ಸಂದೇಶದಲ್ಲಿ ತಿಳಿಸಿದರು.
ಡಿಎಎಸ್‌ಯು ಚುನಾವಣೆಯಲ್ಲಿ ಎಬಿವಿಪಿಯು ನಾಲ್ಕು ಕೇಂದ್ರ ಸಮಿತಿ ಸ್ಥಾನಗಳಲ್ಲಿ ಮೂರನ್ನು ಗೆದ್ದುಕೊಂಡ ನಂತರ ಅದರ ಬೆಂಬಲಿತರು ಸಂಭ್ರಮಾಚರಣೆಯಲ್ಲಿ ತೊಡಗಿರುವುದು ಕಂಡುಬಂದಿದೆ. ಎಬಿವಿಪಿಯ ಯಶ್ ದಬಾಸ್ ಅವರು ಎನ್‌ಎಸ್‌ಯುಐನ ವಿಜಯ್ ಶಂಕರ್ ಮೀನಾ ಅವರನ್ನು 2,053 ಮತಗಳ ಅಂತರದಿಂದ ಸೋಲಿಸಿ ಮುಂದಿನ ಅಧ್ಯಕ್ಷರಾದರು. ಕಾರ್ಯದರ್ಶಿ ಹುದ್ದೆಗಾಗಿ, ಎಬಿವಿಪಿಯ ರಿಯಾ ಛೌಧರಿ ಅವರು ಎನ್‌ಎಸ್‌ಯುಐನ ನಮ್ರತಾ ಚೌಧರಿ ಅವರನ್ನು ಸೋಲಿಸಿದರು. ಮತ್ತೊಂದೆಡೆ, ಎಬಿವಿಪಿಯ ಲಕ್ಷ್ಯ ರಾಜ್ ಸಿಂಗ್ ಅವರು ಜಂಟಿ ಕಾರ್ಯದರ್ಶಿ ಸ್ಥಾನವನ್ನು ಪಡೆದರು. ಉಪಾಧ್ಯಕ್ಷ ಸ್ಥಾನವನ್ನು ಸ್ವತಂತ್ರ ಅಭ್ಯರ್ಥಿ ದೀಪಾಂಶು ಶೋಕೀನ್ ಗೆದ್ದುಕೊಂಡಿದ್ದಾರೆ(ಏಜೆನ್ಸೀಸ್).