Youth Day in the Army | ಸೇನೆಯಲ್ಲಿ ಯುವಪರ್ವ 
ದೇಶ

ಸೇನೆಯಲ್ಲಿ ಯುವಪರ್ವ

ಕಾರ್ಗಿಲ್​ ವಿಜಯ ದಿನಕ್ಕೆ 27ನೇ ವರ್ಷದ ಸಂಭ್ರಮ. ಭಾರತೀಯ ಸೇನೆಯ ಶೌರ್ಯ, ಸಾಹಸಗಾಥೆ ಎಂದೆಂದಿಗೂ ಪ್ರೇರಣಾದಾಯಿ. ಭಾರತದ ವೀರಯೋಧರ ತ್ಯಾಗ ಮತ್ತು ಬಲಿದಾನವನ್ನು ಸ್ಮರಿಸುವ ಜತೆಗೆ ಪಾಕಿಸ್ತಾನದ ವಿರುದ್ಧ ಭಾರತ ವಿಜಯ ಸಾಧಿಸಿದ ಸಂಭ್ರಮವನ್ನು ಆಚರಿಸುವ ಕ್ಷಣವೂ ಹೌದು. ರಾಷ್ಟ್ರಭಕ್ತಿ, ಭಾವೈಕ್ಯತೆಯನ್ನು ಜಾಗೃತಗೊಳಿಸಿದ ಕಾರ್ಗಿಲ್​ ಯುದ್ಧ "ದೇಶ ಮೊದಲು' ಎಂಬ ಉದಾತ್ತ ಭಾವಕ್ಕೆ ಜೀವತುಂಬಿತು. ಮಾತ್ರವಲ್ಲ, ಯುವ ಮನಸ್ಸುಗಳಲ್ಲಿ ರಾಷ್ಟ್ರಭಕ್ತಿಯನ್ನು ಜಾಗೃತಗೊಳಿಸಿ, ಸೇನೆಗೆ ಸೇರುವ ಹುಮ್ಮಸ್ಸನ್ನೂ ಹೆಚ್ಚಿಸಿದೆ. ಇದಕ್ಕೆ ಪೂರಕವಾಗಿ ಅಗ್ನಿಪಥ ಯೋಜನೆಯು ತರುಣರಿಗೆ ವರದಾನವಾಗಿ ಪರಿಣಮಿಸಿದೆ. 18ರಿಂದ 22 ವರ್ಷ ವಯಸ್ಸಿನವರು ಸೇನೆಗೆ ಸೇರುವ ಪ್ರಮಾಣ ಹೆಚ್ಚಿರುವ ಜತೆಗೆ, ರಾಷ್ಟ್ರಕ್ಕಾಗಿ ಕೆಲಸ ಮಾಡಬೇಕು ಎಂಬ ಇಚ್ಛಾಶಕ್ತಿಯೂ ಜಾಗೃತಗೊಂಡಿದೆ. ಸೇನೆಗೆ ಸೇರಿರುವ ಮತ್ತು ಸೇರಲು ತಯಾರಿ ನಡೆಸುತ್ತಿರುವ ಎಷ್ಟೋ ಯುವಕರಿಗೆ ಕಾರ್ಗಿಲ್​ ಹೀರೋಗಳೇ ಸ್ಫೂರ್ತಿಯಾಗಿರುವುದು ವಿಶೇಷ.
ಕಾರ್ಗಿಲ್​ ಸಮರದಿಂದ ಅಗ್ನಿಪಥದವರೆಗಿನದ್ದು ಸ್ಫೂರ್ತಿಯ ಪಯಣ. ಹೌದು,
1999ರ ಕಾರ್ಗಿಲ್​ ಯುದ್ಧವು ಭಾರತೀಯ ಸಶಸ್ತ್ರ ಪಡೆಗಳ ಯುವ ಸೈನಿಕರ ಮತ್ತು ಅಧಿಕಾರಿಗಳ ಅದ್ಭುತ ನಾಯಕತ್ವ ಹಾಗೂ ಶೌರ್ಯವನ್ನು ಜಗತ್ತಿಗೆ ತೋರಿಸಿಕೊಟ್ಟಿತು. ಈ ಕಾರ್ಯಾಚರಣೆಯಲ್ಲಿ ಯುವ ಯೋಧರು ಜೀವತ್ಯಾಗ ಮಾಡಿದ್ದನ್ನು ಗಮನಿಸಿದ ಭಾರತ ಸರ್ಕಾರ, ಭವಿಷ್ಯದಲ್ಲಿ ಇಂತಹ ಬಿಕ್ಕಟ್ಟುಗಳನ್ನು ತಡೆಯಲು ಮತ್ತು ಅಗತ್ಯ ಸುಧಾರಣೆಗಳನ್ನು ಶಿಫಾರಸು ಮಾಡಲು "ಕಾರ್ಗಿಲ್​ ಪರಾಮರ್ಶೆ ಸಮಿತಿ' (ಕೆಆರ್​ಸಿ)ಯನ್ನು ರಚಿಸಿತು. ಈ ಸಮಿತಿಯ ಪ್ರಮುಖ ಶಿಫಾರಸುಗಳಲ್ಲಿ ಸಶಸ್ತ್ರ ಪಡೆಗಳ ವಯಸ್ಸಿನ ಪ್ರಮಾಣವನ್ನು ಕಡಿಮೆ ಮಾಡುವುದು ಒಂದಾಗಿತ್ತು. ಈ ಹಿಂದೆ 1989ರಲ್ಲೇ ಅರುಣ್​ ಸಿಂಗ್​ ಸಮಿತಿ ಕೂಡ ಇದೇ ರೀತಿಯ ಪ್ರಸ್ತಾವನೆಯನ್ನು ಮುಂದಿಟ್ಟಿತ್ತು.
ಮಿಲಿಟರಿ ಪಡೆಗಳನ್ನು ಹೆಚ್ಚು ಯುವಮಯಗೊಳಿಸುವ ಈ ಆಶಯಕ್ಕೆ ನಂತರದ ದಿನಗಳಲ್ಲಿ ಬಂದ ಸಂಸದೀಯ ರಕ್ಷಣಾ ಸ್ಥಾಯಿ ಸಮಿತಿ (2006) ಮತ್ತು ಶೇಖಟಕರ್​ ಸಮಿತಿ (2017) ಗಳ ಶಿಫಾರಸುಗಳಿಂದ ಇನ್ನಷ್ಟು ವೇಗ ಸಿಕ್ಕಿತು. ಅಮೆರಿಕ ಮತ್ತು ಫ್ರಾನ್ಸ್​ನಂತಹ ಜಗತ್ತಿನ ಅತ್ಯಂತ ಸುಧಾರಿತ ಸೇನೆಗಳು ಸಹ ತಮ್ಮ ಸಕ್ರಿಯ ಸೇವೆಯಲ್ಲಿರುವ ಬಹುತೇಕ ಸೈನಿಕರನ್ನು 30 ವರ್ಷಕ್ಕಿಂತ ಕಡಿಮೆ ವಯಸ್ಸಿನವರನ್ನಾಗಿ ಕಾಯ್ದುಕೊಂಡಿವೆ ಎಂಬುದು ಗಮನಾರ್ಹ.
ರಕ್ಷಣಾ ಬಜೆಟ್​
2013-14: 2.53 ಲಕ್ಷ ಕೋಟಿ ರೂ.
2026-27: 7.85 ಲಕ್ಷ ಕೋಟಿ ರೂ.

ಭಾರತದ ರಕ್ಷಣಾ ಕೈಗಾರಿಕೆ

ಉತ್ಪಾದನೆ
2014-15: 46,429 ಕೋಟಿ ರೂ.
2025-26: 1.78 ಲಕ್ಷ ಕೋಟಿ ರೂ.
ರಫ್ತು
2013-14: 6.86 ಕೋಟಿ ರೂ.
2025-26: 38,424 ಕೋಟಿ ರೂ.
ತಜ್ಞರು ಶಿಫಾರಸುಗಳನ್ನು ಅನುಷ್ಠಾನಗೊಳಿಸಲು 2022ರ ಜೂನ್​ 14ರಂದು ಅಗ್ನಿಪಥ ಯೋಜನೆಯನ್ನು ಜಾರಿಗೆ ತರಲಾಯಿತು. ಈ ಯೋಜನೆಯಡಿ ಯುವಕರನ್ನು ನಾಲ್ಕು ವರ್ಷಗಳ ಅವಧಿಗೆ ಭಾರತೀಯ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಲು ನೇಮಕ ಮಾಡಿಕೊಳ್ಳಲಾಗುತ್ತದೆ. ಮಿಲಿಟರಿಗೆ ಹೊಸ ಚೈತನ್ಯ, ಉತ್ಸಾಹ ತುಂಬುವುದು ಮತ್ತು ಹೊಸ ತಲೆಮಾರಿನ ಯುವಕರನ್ನು ಸೇರ್ಪಡೆಗೊಳಿಸುವ ಮೂಲಕ ಸೇನೆಯನ್ನು ಹೆಚ್ಚು ತಾಂತ್ರಿಕವಾಗಿ ಸಮರ್ಥಗೊಳಿಸುವುದು ಈ ಯೋಜನೆಯ ಮುಖ್ಯ ಉದ್ದೇಶ.

ಸಶಸ್ತ್ರ ಪಡೆಗಳ ಆಧುನೀಕರಣದತ್ತ ದಿಟ್ಟ ಹೆಜ್ಜೆ: ಅಗ್ನಿಪಥ ಯೋಜನೆಯು ಭಾರತೀಯ ಸೇನೆಯನ್ನು ಆಧುನಿಕಗೊಳಿಸುವ ಬೃಹತ್​ ಯೋಜನೆಯ ಒಂದು ಭಾಗವಾಗಿದೆ. ಅರುಣ್​ ಸಿಂಗ್​ ಸಮಿತಿಯಿಂದ ಹಿಡಿದು ಕಾರ್ಗಿಲ್​ ಪರಾಮರ್ಶೆ ಸಮಿತಿಯವರೆಗೆ ಪ್ರತಿಯೊಂದು ಸಮಿತಿಯೂ ಚುರುಕಾದ ಮತ್ತು ಯುವಪಡೆಗಳ ಅಗತ್ಯವನ್ನು ಪುನರುಚ್ಚರಿಸುತ್ತಲೇ ಬಂದಿವೆ. ಇಂದಿನ ಸಮಕಾಲೀನ ಕಾರ್ಯತಂತ್ರ ಹಾಗೂ ಕಾರ್ಯಾಚರಣೆಯ ಅಗತ್ಯಗಳಿಗೆ ತಕ್ಕಂತೆ ಸಶಸ್ತ್ರ ಪಡೆಗಳನ್ನು ಸಜ್ಜುಗೊಳಿಸಲು ಸರ್ಕಾರಕ್ಕಿರುವ ಬದ್ಧತೆಯನ್ನು ಈ ಯೋಜನೆ ತೋರಿಸುತ್ತದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಉಲ್ಲೇಖಿಸಿದಂತೆ, ಅಗ್ನಿಪಥ ಯೋಜನೆಯು ಕಾರ್ಗಿಲ್​ ಯುದ್ಧದ ಅನುಭವಗಳಿಂದ ಕಲಿತ ಪಾಠಗಳು ಮತ್ತು ಸೇನಾ ಸುಧಾರಣೆಗಾಗಿ ಬಂದ ಶಿಫಾರಸುಗಳಿಗೆ ಸಿಕ್ಕ ನೇರ ಉತ್ತರವಾಗಿದೆ. ಇದು ಭಾರತೀಯ ಸೇನೆಯು ಭವಿಷ್ಯದ ಸವಾಲುಗಳನ್ನು ಎದುರಿಸಲು ಸದಾ ಸಿದ್ಧವಾಗಿರಲು ನೆರವಾಗುವ ಪ್ರಮುಖ ಹೆಜ್ಜೆಯಾಗಿದೆ.
ಕಾರ್ಗಿಲ್​ ಯುದ್ಧದ ಬಳಿಕ ಕಳೆದ 27 ವರ್ಷಗಳಲ್ಲಿ ಸೇನಾ ಮೂಲಸೌಕರ್ಯಗಳನ್ನು ಹೆಚ್ಚಿಸಲಾಗಿದೆ. ಸಾರಿಗೆ, ಬೇಹುಗಾರಿಕೆ ಮಾಹಿತಿ, ಗಡಿ ರಕ್ಷಣೆ ಮತ್ತು ಸೇನೆಯ ಆಧುನೀಕರಣದ ನಿಟ್ಟಿನಲ್ಲಿ ಮಹತ್ವದ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಅದರ ಫಲಿತಾಂಶ ಕಾರ್ಗಿಲ್​ ಮತ್ತು ದ್ರಾಸ್​ ಪ್ರದೇಶದಲ್ಲಿ ಕಂಡುಬರುತ್ತಿದೆ. ಸೇನಾಪಡೆಗಳನ್ನು ಮತ್ತಷ್ಟು ಬಲಪಡಿಸಲು 2019ರಲ್ಲಿ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ (ಸಿಡಿಎಸ್​) ಹುದ್ದೆಯನ್ನು ಸೃಷ್ಟಿಸಲಾಗಿದೆ. ಸೇನಾ ಕಾರ್ಯತಂತ್ರವನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಲು ಇದು ಸಹಕಾರಿಯಾಗಿದೆ. ರಾಷ್ಟ್ರೀಯ ಸುರಕ್ಷತಾ ನೀತಿಯನ್ನೂ ಪುನರ್​ವಿಮರ್ಶಿಸಲಾಗಿದ್ದು, ಪಾರಂಪರಿಕ ಮತ್ತು ಆಕಸ್ಮಿಕ ಅಪಾಯಗಳನ್ನು ತಡೆಯುವ ನಿಟ್ಟಿನಲ್ಲಿ ಕಾರ್ಯತಂತ್ರ ಹೆಣೆಯಲಾಗಿದೆ. ಸೇನಾ ಗಸ್ತು ಪ್ರದೇಶದಲ್ಲಿ ಸೈನಿಕರಿಗೆ ಮೂಲಸೌಕರ್ಯ ಸಿಗುವಂತೆ ವ್ಯವಸ್ಥೆ ಮಾಡಲಾಗಿದೆ. ಅವಶ್ಯವಿದ್ದಲ್ಲಿ ರಸ್ತೆ, ಸುರಂಗ, ಹೆದ್ದಾರಿ ನಿರ್ಮಾಣ ಕಾರ್ಯಗಳು ಹಿಂದೆಂದಿಗಿಂತ ವೇಗವಾಗಿ ನಡೆಯುತ್ತಿವೆ.

ಅಭಿವೃದ್ಧಿ ಮಂಡಳಿ

ಲಡಾಖ್​ನ ಗುಡ್ಡಗಾಡು ಪ್ರದೇಶ ಅಭಿವೃದ್ಧಿ ಸ್ವಾಯತ್ತ ಮಂಡಳಿಯು (ಎಲ್​ಎಎಚ್​ಡಿಸಿ - ಕಾರ್ಗಿಲ್​) ಕಾರ್ಗಿಲ್​ ಜಿಲ್ಲೆಯಲ್ಲಿ 2003ರ ಜುಲೈನಲ್ಲಿ ಕಾರ್ಯಾರಂಭ ಮಾಡಿದೆ. ಈ ಮಂಡಳಿಯು 30 ಕೌನ್ಸಿಲರ್​ಗಳನ್ನು ಹೊಂದಿದ್ದು, ಅದರಲ್ಲಿ 26 ಕೌನ್ಸಿಲರ್​ಗಳನ್ನು ಚುನಾಯಿಸಲಾಗುತ್ತದೆ ಮತ್ತು ಉಳಿದ ನಾಲ್ವರನ್ನು ನಾಮನಿರ್ದೇಶನ ಮಾಡಲಾಗುತ್ತದೆ. ಕಾರ್ಗಿಲ್​ ಜಿಲ್ಲೆ ಒಂಬತ್ತು ಆಡಳಿತಾತ್ಮಕ ಬ್ಲಾಕ್​ಗಳನ್ನು ಒಳಗೊಂಡಿದೆ.
ಅನುದಾನ ಹೆಚ್ಚಳ: ಕಳೆದ ಐದು ವರ್ಷಗಳಲ್ಲಿ ಕೇಂದ್ರ ಸರ್ಕಾರ ಲಡಾಖ್​ ಬಜೆಟ್​ನ್ನು 1,100 ಕೋಟಿ ರೂ.ಗಳಿಂದ 6,000 ಕೋಟಿ ರೂ.ಗಳಿಗೆ ಹೆಚ್ಚಿಸಿದೆ. ಈ ಹಣವನ್ನು ಲಡಾಖ್​ ಜನರ ಅಭಿವೃದ್ಧಿಗೆ ಮತ್ತು ಇಲ್ಲಿನ ಸೌಲಭ್ಯಗಳನ್ನು ಹೆಚ್ಚಿಸಲು ಬಳಸಲಾಗುತ್ತಿದೆ. ರಸ್ತೆಗಳು, ನೀರು, ಶಿಕ್ಷಣ, ವಿದ್ಯುತ್​ ಸರಬರಾಜು ಮತ್ತು ಉದ್ಯೋಗದ ವಿಷಯದಲ್ಲಿ ಲಡಾಖ್​ ಬದಲಾಗುತ್ತಿದೆ. ಕಾರ್ಗಿಲ್​ ಸೇರಿದಂತೆ ಲಡಾಖ್​ ಪ್ರದೇಶವನ್ನು 4ಜಿ ನೆಟ್​ವರ್ಕ್​ನೊಂದಿಗೆ ಸಂಪರ್ಕಿಸುವ ಕೆಲಸವೂ ನಡೆಯುತ್ತಿದೆ. ಕೆಲ ವರ್ಷಗಳಲ್ಲಿ ಈ ಪ್ರದೇಶದಲ್ಲಿ ಪ್ರವಾಸೋದ್ಯಮ ಆಮೂಲಾಗ್ರವಾಗಿ ಬದಲಾವಣೆ ಕಂಡಿದೆ. ಹಿಮಾವೃತ್ತ ಪರ್ವತಗಳು, ಹಸಿರಿನ ಪರಿಸರ, ಪುರಾತನ ಮಠ ಮತ್ತು ಮಂದಿರಗಳು, ಮಸೀದಿಗಳು, ಬೌದ್ಧ ವಿಹಾರಗಳನ್ನು ನೋಡಲು ದೇಶ ಹಾಗೂ ವಿದೇಶದ ಜನರು ಕಾರ್ಗಿಲ್​ ಮತ್ತು ಲೇಹ್​ ಜಿಲ್ಲೆಗಳಿಗೆ ಭೇಟಿ ನೀಡುತ್ತಾರೆ. ವರ್ಷದಿಂದ ವರ್ಷಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದ್ದು, ಅದಕ್ಕೆ ತಕ್ಕದಾಗಿ ಮೂಲಸೌಕರ್ಯಗಳೂ ವಿಕಾಸಗೊಂಡಿವೆ. ಮಾತ್ರವಲ್ಲ, ಇದರಿಂದ ಸ್ಥಳೀಯ ಆರ್ಥಿಕತೆಗೆ ಬಲ ಬಂದಿದೆ.

ಜೋಜಿಲಾ ಸುರಂಗ ಮಾರ್ಗದ ಮಹತ್ವ

ಕಣಿವೆ ರಾಜ್ಯದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳು ಜಾರಿಯಲ್ಲಿದ್ದು, ಈ ಪೈಕಿ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್​ ನಡುವೆ ಸರ್ವಋತು ಸಂಪರ್ಕ ಕಲ್ಪಿಸುವಲ್ಲಿ ಮಹತ್ವದ ಪಾತ್ರ ವಹಿಸಲಿರುವ, 13.153 ಕಿ.ಮೀ. ಉದ್ದದ ಜೋಜಿಲಾ ಸುರಂಗ ಮಾರ್ಗ ಯೋಜನೆ ಪೂರ್ಣಗೊಂಡಿದೆ. ಸುರಂಗದ ಒಳಗೆ ಬಾಕಿ ಕೆಲಸಗಳು ಮುಗಿದ ತರುವಾಯ ಬಳಕೆಗೆ ಮುಕ್ತವಾಗಲಿದ್ದು, ನಂತರದಲ್ಲಿ ಲಡಾಖ್​ಗೆ ಸದಾ ಕಾಲ ಸಂಚಾರ ಸಾಧ್ಯವಾಗಲಿದೆ. ಸೋನಾಮಾರ್ಗ್​ದಿಂದ ಮುಂದೆ ಈ ರಸ್ತೆ ಮಾರ್ಗ ದುರ್ಗಮ ಪ್ರದೇಶಗಳಿಂದ ಕೂಡಿದ್ದು, ಹಿಮಪಾತ ಹಾಗೂ ಹಿಮಕುಸಿತದಿಂದ ವರ್ಷಕ್ಕೆ ಸುಮಾರು ಆರು ತಿಂಗಳ ಕಾಲ ರಸ್ತೆ ಮುಚ್ಚಬೇಕಾದ ಪರಿಸ್ಥಿತಿ ಇದೆ. ಸಮುದ್ರ ಮಟ್ಟದಿಂದ 11,578 ಅಡಿ ಎತ್ತರದಲ್ಲಿರುವ ಜೋಜಿಲಾ ಪ್ರದೇಶದಲ್ಲಿ ಈ ಸುರಂಗ ಮಾರ್ಗವಿದ್ದು, ಇದರಿಂದ ಪ್ರವಾಸೋದ್ಯಮ, ವ್ಯಾಪಾರ, ಅಗತ್ಯ ಸೇವೆಗಳು ಮತ್ತು ಗಡಿ ಪ್ರದೇಶಗಳ ಸಂಪರ್ಕ ವ್ಯವಸ್ಥೆಗೆ ಉತ್ತೇಜನ ಸಿಗಲಿದೆ. ದೇಶದ ಭದ್ರತೆ ಮತ್ತು ಸೇನಾ ಲಾಜಿಸ್ಟಿಕ್ಸ್​ ದೃಷ್ಟಿಯಿಂದಲೂ ಈ ಮಾರ್ಗ ಮುಖ್ಯವಾಗಿದೆ.

1999ರ ಕಾರ್ಗಿಲ್​ ಯುದ್ಧ ಸಾಗಿದ್ದು ಹೀಗೆ

ಮೇ 3 : ಪಾಕಿಸ್ತಾನಿಯರು ಅಕ್ರಮವಾಗಿ ಕಾರ್ಗಿಲ್​ ಪ್ರವೇಶಿಸಿದ ಮಾಹಿತಿ ಸ್ಥಳೀಯ ಕುರಿಗಾಹಿಗಳಿಂದ ತಿಳಿದುಬಂತು.
ಮೇ 5 : ಭಾರತೀಯ ಸೇನೆಯ ಗಸ್ತುದಳವನ್ನು ಕಳುಹಿಸಲಾಯಿತು. ಆದರೆ ಪಾಕ್​ ಸೇನೆ ಐವರು ಭಾರತೀಯ ಸೈನಿಕರನ್ನು ಸೆರೆಹಿಡಿದು ಹಿಂಸಿಸಿ ಸಾಯಿಸಿತು.
ಮೇ 27 : ಮಿಗ್-21, ಮಿಗ್-27 ಎಂಬ ಎರಡು ಯುದ್ಧವಿಮಾನಗಳನ್ನು ವಾಯುಪಡೆ ಕಳೆದುಕೊಂಡಿತು, ಫ್ಲೈಟ್ ಲೆಫ್ಟಿನೆಂಟ್​ ನಚಿಕೇತ್​ ಅವರನ್ನು ಯುದ್ಧಕೈದಿಯನ್ನಾಗಿ ಹಿಡಿಯಲಾಯಿತು.
ಮೇ 28 : ಭಾರತೀಯ ವಾಯುಪಡೆಯ ಎಂಐ-17 ವಿಮಾನವನ್ನು ಹೊಡೆದುರುಳಿಸಲಾಯಿತು, ನಾಲ್ವರು ಸಿಬ್ಬಂದಿ ಮೃತರಾದರು.
ಜೂನ್​ 1 : ಪಾಕಿಸ್ತಾನ ದಾಳಿಯ ತೀವ್ರತೆ ಹೆಚ್ಚಿಸಿತು.
ಜೂನ್​ 5 : ಮೂವರು ಪಾಕಿಸ್ತಾನಿ ಸೈನಿಕರಿಂದ ವಶಪಡಿಸಿಕೊಳ್ಳಲಾದ ದಾಖಲೆಗಳನ್ನು ಭಾರತೀಯ ಸೇನೆ ಬಿಡುಗಡೆ ಮಾಡಿತು.
ಜೂನ್​ 6 : ಕಾರ್ಗಿಲ್​ನಲ್ಲಿ ಪಾಕ್​ ಸೈನಿಕರ ವಿರುದ್ಧ ದಾಳಿ ಆರಂಭ.
ಜೂನ್​ 9 : ಬಟಾಲಿಕ್​ ವಲಯದಲ್ಲಿನ 2 ಪ್ರಮುಖ ಸೇನಾಠಾಣೆಗಳನ್ನು ಭಾರತೀಯ ಸೇನೆ ಮರುವಶಪಡಿಸಿಕೊಂಡಿತು.
ಜೂನ್​ 13 : ಭಾರತೀಯ ಸೇನೆಯು ದ್ರಾಸ್​ನಲ್ಲಿನ ಟೊಲೊಲೊಂಗ್​ನ್ನು ವಶಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಯಿತು.
ಜೂನ್​ 15 : ಕಾರ್ಗಿಲ್​ನಿಂದ ಹಿಂದೆ ಸರಿಯುವಂತೆ ಅಮೆರಿಕದ ಅಂದಿನ ಅಧ್ಯಕ್ಷ ಬಿಲ್​ ಕ್ಲಿಂಟನ್​ರಿಂದ ಪಾಕ್​ ಪ್ರಧಾನಿ ನವಾಜ್​ ಷರೀಫ್​ಗೆ ಸೂಚನೆ.
ಜೂನ್​ 29 : ಟೈಗರ್​ ಹಿಲ್​ ಸಮೀಪದ ಪಾಯಿಂಟ್​ 5060 ಮತ್ತು ಪಾಯಿಂಟ್​ 5,100 ಎಂಬ ಎರಡು ಪ್ರಮುಖ ಸಿಪಾಯಿ ನೆಲೆಗಳನ್ನು ಭಾರತೀಯ ಸೇನೆ ವಶಕ್ಕೆ ತೆಗೆದುಕೊಂಡಿತು.
ಜುಲೈ 4 : ಟೈಗರ್​ ಹಿಲ್​ನ್ನು ಮರುವಶಪಡಿಸಿಕೊಂಡ ಭಾರತೀಯ ಸೇನೆ.
ಜುಲೈ 5 : ಭಾರತೀಯ ಸೇನೆ ದ್ರಾಸ್​ನ್ನು ತನ್ನ ಹತೋಟಿಗೆ ತೆಗೆದುಕೊಂಡಿತು. ಕ್ಲಿಂಟನ್​ ಜತೆಗಿನ ಸಭೆಯ ನಂತರ ಷರೀಫ್​, ಕಾರ್ಗಿಲ್​ನಿಂದ ಪಾಕ್​ ಸೇನೆ ವಾಪಸಾತಿಯ ಬಗ್ಗೆ ಘೋಷಿಸಿದರು.
ಜುಲೈ 7 : ಜುಬಾರ್​ ಹೈಟ್ಸ್​ ಶಿಖರ ಮರುವಶ.
ಜುಲೈ 11 : ಪಾಕಿಸ್ತಾನವು ಸೇನಾ ವಾಪಸಾತಿ ಪ್ರಕ್ರಿಯೆ ಆರಂಭಿಸಿತು ಹಾಗೂ ಬಟಾಲಿಕ್​ನಲ್ಲಿನ ಪ್ರಮುಖ ಶಿಖರಗಳನ್ನು ಭಾರತ ಮರುವಶಪಡಿಸಿಕೊಂಡಿತು.
ಜುಲೈ 14 : "ಆಪರೇಷನ್​ ವಿಜಯ' ಕಾರ್ಯಾಚರಣೆ ಯಶಸ್ವಿ ಎಂದು ಭಾರತದ ಅಂದಿನ ಪ್ರಧಾನಿ ಅಟಲ್​ ಬಿಹಾರಿ ವಾಜಪೇಯಿ ಅವರಿಂದ ಘೋಷಣೆ.
ಜುಲೈ 26 : ಕಾರ್ಗಿಲ್​ ಯುದ್ಧ ಅಧಿಕೃತವಾಗಿ ಕೊನೆಗೊಂಡಿತು. ಒಳನುಗ್ಗಿದ ಪಾಕಿಸ್ತಾನಿಯರನ್ನು ಸಂಪೂರ್ಣವಾಗಿ ಹೊರದಬ್ಬಲಾಗಿದೆ ಎಂದು ಭಾರತೀಯ ಸೇನೆ ಘೋಷಿಸಿತು.