ದೆಹಲಿಯ ರಾಮ್‌ಲೀಲಾ ಮೈದಾನದಲ್ಲಿ ನಡೆದ ರ್ಯಾಲಿಗೆ ಗೈರು: ಶಿಸ್ತು ಉಲ್ಲಂಘನೆ ಆರೋಪದಡಿ 202 ಯುವ ಕಾಂಗ್ರೆಸ್ ನಾಯಕರನ್ನು ಅಮಾನತುಗೊಳಿಸಿದ ಕಾಂಗ್ರೆಸ್ ಹೈಕಮಾಂಡ್. 
ದೇಶ

ರಾಹುಲ್​ ರ‍್ಯಾಲಿಗೆ ಯುವಪಡೆ ಗೈರು: 7 ರಾಜ್ಯಗಳ 202 ಯೂಥ್​ ಐಕಾನ್​ಗಳಿಗೆ ಕಾಂಗ್ರೆಸ್ ಗೇಟ್‌ಪಾಸ್! Rahul Gandhi

ನವದೆಹಲಿ: ರಾಹುಲ್ ಗಾಂಧಿ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಮಹತ್ವದ ರ‍್ಯಾಲಿಗೆ ಕೈಕೊಟ್ಟ ಯೂತ್ ಕಾಂಗ್ರೆಸ್ ಮುಖಂಡರಿಗೆ ಹೈಕಮಾಂಡ್ ಮರ್ಮಾಘಾತ ನೀಡಿದೆ. ದೆಹಲಿಯಲ್ಲಿ ನಡೆದ 'ವೋಟ್ ಬಚಾವೋ, ದೇಶ್ ಬಚಾವೋ' ಬೃಹತ್ ಸಮಾವೇಶಕ್ಕೆ ಗೈರುಹಾಜರಾದ ಕಾರಣಕ್ಕೆ, 7 ರಾಜ್ಯಗಳ 202 ಪ್ರಮುಖ ಯುವ ಕಾಂಗ್ರೆಸ್ ಪದಾಧಿಕಾರಿಗಳನ್ನು ಪಕ್ಷದಿಂದ ಅಮಾನತುಗೊಳಿಸಲಾಗಿದೆ. ಈ ಬೆಳವಣಿಗೆ ಈಗ ರಾಷ್ಟ್ರ ರಾಜಕಾರಣದಲ್ಲಿ ಭಾರಿ ಸದ್ದು ಮಾಡುತ್ತಿದ್ದು, ಬಿಜೆಪಿ ಇದನ್ನು ಮುಂದಿಟ್ಟುಕೊಂಡು ರಾಹುಲ್ ಗಾಂಧಿ ವಿರುದ್ಧ ವ್ಯಂಗ್ಯವಾಡಲು ಶುರುಮಾಡಿದೆ.

ರ‍್ಯಾಲಿಗೆ ಬಾರದವರಿಗೆ ಹೈಕಮಾಂಡ್ ಶಾಕ್!

ನವೆಂಬರ್ 1 ರಂದು ದೆಹಲಿಯ ರಾಮ್‌ಲೀಲಾ ಮೈದಾನದಲ್ಲಿ ಇಂಡಿಯಾ ಒಕ್ಕೂಟದ ವತಿಯಿಂದ 'ವೋಟ್ ಚೋರಿ ವಿರೋಧಿ' ಸಮಾವೇಶ ಆಯೋಜಿಸಲಾಗಿತ್ತು. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಈ ಸಮಾವೇಶದ ಸಾರಥ್ಯ ವಹಿಸಿದ್ದರು. ಆದರೆ, ಪಕ್ಷದ ಪ್ರಮುಖ ಯುವ ಮುಖಂಡರೇ ಈ ಸಮಾವೇಶದಿಂದ ದೂರ ಉಳಿದಿರುವುದು ಹೈಕಮಾಂಡ್‌ನ ಕೆಂಗಣ್ಣಿಗೆ ಗುರಿಯಾಗಿದೆ.

ಸಮಾವೇಶಕ್ಕೆ ಬಾರದೆ ಉಡಾಫೆ ತೋರಿದ ನಾಯಕರಿಗೆ ಮೊದಲು ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿತ್ತು. ಆದರೆ ಅವರಿಂದ ಬಂದ ಸಮಜಾಯಿಷಿ ತೃಪ್ತಿಕರವಾಗಿಲ್ಲದ ಕಾರಣ, ರಾಷ್ಟ್ರೀಯ ನಾಯಕತ್ವದ ಕಟ್ಟುನಿಟ್ಟಿನ ಆದೇಶದ ಮೇರೆಗೆ ಸಾಮೂಹಿಕ ಅಮಾನತು ಅಸ್ತ್ರ ಪ್ರಯೋಗಿಸಲಾಗಿದೆ.

ಯಾವ್ಯಾವ ರಾಜ್ಯಗಳಲ್ಲಿ ಎಷ್ಟೆಷ್ಟು ಮಂದಿಗೆ ಗೇಟ್‌ಪಾಸ್?

ಅಮಾನತುಗೊಂಡವರ ಪಟ್ಟಿಯಲ್ಲಿ ಯೂತ್ ಕಾಂಗ್ರೆಸ್‌ನ ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಮತ್ತು ಕಾರ್ಯದರ್ಶಿಗಳಂತಹ ಪ್ರಮುಖ ಹುದ್ದೆಯಲ್ಲಿದ್ದವರೇ ಹೆಚ್ಚಾಗಿದ್ದಾರೆ.

ಮಧ್ಯಪ್ರದೇಶ: 60 ಪದಾಧಿಕಾರಿಗಳು

ಗುಜರಾತ್: 49 ಪದಾಧಿಕಾರಿಗಳು

ಜಾರ್ಖಂಡ್: 32 ಪದಾಧಿಕಾರಿಗಳು

ಪಶ್ಚಿಮ ಬಂಗಾಳ: 26 ಪದಾಧಿಕಾರಿಗಳು

ತೆಲಂಗಾಣ: 14 ಪದಾಧಿಕಾರಿಗಳು

ಉತ್ತರ ಪ್ರದೇಶ: 11 ಪದಾಧಿಕಾರಿಗಳು

ಹರಿಯಾಣ: 10 ಪದಾಧಿಕಾರಿಗಳು

ಮಧ್ಯಪ್ರದೇಶ ಯೂತ್ ಕಾಂಗ್ರೆಸ್ ಈ ಕುರಿತು 'ಟ್ವಿಟರ್​ನಲ್ಲಿ ಮಾಹಿತಿ ಹಂಚಿಕೊಂಡಿದ್ದು, "ಸಾಂಸ್ಥಿಕ ಶಿಸ್ತು ಉಲ್ಲಂಘನೆಯನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ರಾಷ್ಟ್ರೀಯ ನಾಯಕತ್ವದ ಆದೇಶದಂತೆ ಶಿಸ್ತು ಕ್ರಮ ಕೈಗೊಳ್ಳಲಾಗಿದೆ" ಎಂದು ಬರೆದುಕೊಂಡಿದೆ. ಅಷ್ಟೇ ಅಲ್ಲದೆ, ಮುಂದಿನ ದಿನಗಳಲ್ಲಿ ಇನ್ನುಳಿದ ರಾಜ್ಯಗಳ ಮೇಲೂ ಈ ಅಮಾನತು ಕತ್ತರಿ ಬೀಳುವ ಸಾಧ್ಯತೆಯಿದೆ ಎನ್ನಲಾಗಿದೆ.

ಸ್ವಪಕ್ಷೀಯರೇ ರಾಹುಲ್ ನಾಯಕತ್ವ ತಿರಸ್ಕರಿಸಿದ್ದಾರೆ: ಬಿಜೆಪಿ ವಾಗ್ದಾಳಿ

ಇತ್ತ ಕಾಂಗ್ರೆಸ್ ಒಳ ಜಗಳ ಬೀದಿಗೆ ಬರುತ್ತಿದ್ದಂತೆ, ಆಡಳಿತರೂಢ ಬಿಜೆಪಿ ಇದನ್ನು ರಾಜಕೀಯ ಅಸ್ತ್ರವನ್ನಾಗಿ ಮಾಡಿಕೊಂಡಿದೆ. ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ವಕ್ತಾರ ಸಿ.ಆರ್. ಕೇಶವನ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.

"ಸ್ವತಃ ನಿಮ್ಮದೇ ಪಕ್ಷದ ಯುವ ನಾಯಕರು ನಿಮ್ಮನ್ನು ಅಸಮರ್ಥ ಎಂದು ಭಾವಿಸಿ, ನಿಮ್ಮ ವಿಫಲ ರ‍್ಯಾಲಿಯನ್ನು ಬಹಿಷ್ಕರಿಸಿದ್ದಾರೆ. ನೂರಾರು ಜನರನ್ನು ಅಮಾನತು ಮಾಡುವ ಮೂಲಕ ವಾಸ್ತವದಿಂದ ಜನರ ಗಮನ ಬೇರೆಡೆ ಸೆಳೆಯಲು ರಾಹುಲ್ ಗಾಂಧಿ ಹತಾಶ ಪ್ರಯತ್ನ ಮಾಡುತ್ತಿದ್ದಾರೆ" ಎಂದು ಕೇಶವನ್ ಕಿಡಿಕಾರಿದ್ದಾರೆ.

ಮುಂದುವರಿದು ಮಾತನಾಡಿದ ಅವರು, "ಕಾಂಗ್ರೆಸ್‌ನ 'ನಕಲಿ ಸಂಸತ್ತು' ಮತ್ತು 'ನಕಲಿ ಚುನಾವಣೆಗಳ' ನಾಟಕ ಈಗ ಹಾಸ್ಯಾಸ್ಪದವಾಗಿದೆ. ಸಂಸತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಲು ನಿಂತಾಗಲೆಲ್ಲಾ ವಿದೇಶಕ್ಕೆ ಹಾರುವ ಹೇಡಿತನ ಬಿಟ್ಟು, ನಿಜವಾದ ಚರ್ಚೆಗೆ ಧೈರ್ಯ ತೋರಲಿ" ಎಂದು ಸವಾಲು ಹಾಕಿದ್ದಾರೆ, (ಏಜೆನ್ಸೀಸ್​).