Uday Bhanu Chib | ಯೂತ್​ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಉದಯ್ ಭಾನು ಚಿಬ್​ 
ದೇಶ

ಎಐ ಶೃಂಗಸಭೆಯ ಅರಬೆತ್ತಲೆ ಪ್ರತಿಭಟನೆಗೆ ಯೂತ್ ಕಾಂಗ್ರೆಸ್ ಅಧ್ಯಕ್ಷನೇ ಮಾಸ್ಟರ್ ಮೈಂಡ್: ಖಾಕಿ ತನಿಖೆಯಲ್ಲಿ ಬಯಲಾಯ್ತು ಸ್ಫೋಟಕ ಸತ್ಯ! | Uday Bhanu Chib

ದೆಹಲಿ: ಇತ್ತೀಚೆಗೆ ಮುಕ್ತಾಯಗೊಂಡ ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆಗಳನ್ನು ಕೂಗಿ, ಅರಬೆತ್ತಲೆ ಪ್ರತಿಭಟನೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಮಂಗಳವಾರ ಭಾರತೀಯ ಯೂತ್​ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಉದಯ್ ಭಾನು (Uday Bhanu Chib) ಚಿಬ್​ರನ್ನು ಬಂಧಿಸಿದ್ದಾರೆ. ಇದು ಒಟ್ಟು ಎಂಟನೇ ಬಂಧನವಾಗಿದೆ.
ಸುಮಾರು 20 ಗಂಟೆಗಳ ಕಾಲ ವಿಚಾರಣೆ ನಡೆಸಿದ ಬಳಿಕ ಯುವ ಕಾಂಗ್ರೆಸ್ ಅಧ್ಯಕ್ಷರನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ, ಉದಯ್​ ಬಾನು ತನಿಖೆಗೆ ಸಹಕರಿಸುತ್ತಿಲ್ಲ ಎನ್ನುವುದು ಪೊಲೀಸರ ಆರೋಪವಾಗಿದೆ.
ಕ್ರಿಮಿನಲ್ ಪಿತೂರಿ, ಸಾರ್ವಜನಿಕ ಸೇವಕರಿಗೆ ಸ್ವಯಂಪ್ರೇರಣೆಯಿಂದ ಹಾನಿ ಉಂಟುಮಾಡುವುದು, ಕರ್ತವ್ಯದಲ್ಲಿರುವ ಸಾರ್ವಜನಿಕ ಸೇವಕರಿಗೆ ಅಡ್ಡಿಪಡಿಸುವುದು ಮತ್ತು ಉದ್ದೇಶಪೂರ್ವಕ ಅವಿಧೇಯತೆಯ ಆರೋಪದ ಮೇಲೆ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಉದಯ್ ಭಾನುರನ್ನು ಸುದೀರ್ಘವಾಗಿ ವಿಚಾರಣೆ ನಡೆಸುವ ಅವಶ್ಯಕತೆ ಇರುವುದರಿಂದ ಕಸ್ಟಡಿಗೆ ತೆಗೆದುಕೊಳ್ಳಬೇಕಾಗಿದೆ ಎಂದು ಪೊಲೀಸ್ ಮೂಲಗಳು ಇಂಡಿಯಾ ಟುಡೇ ಟಿವಿಗೆ ತಿಳಿಸಿವೆ. ಶೃಂಗಸಭೆಯಲ್ಲಿ ಜಾಗತಿಕ ಗಣ್ಯರ ಮುಂದೆ ಭಾರತದ ಇಮೇಜ್‌ಗೆ ಉದ್ದೇಶಪೂರ್ವಕವಾಗಿ ಕಳಂಕ ತರುವ ಆಯಾಮದ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.
ದೆಹಲಿ ಪೊಲೀಸರು ಇಂದು ಬೆಳಿಗ್ಗೆ 10 ಗಂಟೆಗೆ ಯುವ ಕಾಂಗ್ರೆಸ್ ಅಧ್ಯಕ್ಷರನ್ನು ಪಟಿಯಾಲ ಹೌಸ್ ನ್ಯಾಯಾಲಯದ ಮುಂದೆ ಹಾಜರುಪಡಿಸಿ ನಾಲ್ಕು ದಿನಗಳ ಪೊಲೀಸ್ ಕಸ್ಟಡಿಗೆ ಪಡೆದಿದ್ದು, ಈ ಘಟನೆ ಮಾಸ್ಟರ್​ ಮೈಂಡ್​ ಇವರೇ ಎನ್ನುವುದು ಪೊಲೀಸರ ಗಮನಕ್ಕೆ ಬಂದಿದ್ದು, ದೇಶಾದ್ಯಂತದ ಅನೇಕರು ಕೃತ್ಯದಲ್ಲಿ ಭಾಗಿಯಾಗಿದ್ದಾರೆ, ಅವರನ್ನೆಲ್ಲಾ ತನಿಖೆಗಾಗಿ ಬೇರೆ ಕಡೆಗಳಿಗೆ ಕರೆದೊಯ್ಯಬೇಕಾಗಿದೆ ಎಂದು ಅಧಿಕಾರಿಗಳು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಯುವ ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷರು ಪ್ರತಿಭಟನಾ ಸ್ಥಳದಲ್ಲಿ ಇರಲಿಲ್ಲ ಅಥವಾ ಪ್ರತಿಭಟನೆಗೆ ಸಂಬಂಧಿಸಿದ ಯಾವುದೇ ಸೂಚನೆಗಳನ್ನು ನೀಡಿಲ್ಲ ಎಂದು ಉದಯ್ ಭಾನು ಪರ ವಕೀಲರು ವಾದಿಸಿದ್ದಾರೆ.
ಉದಯ್​ ಯಾರೊಂದಿಗೂ ಸಂವಹನ ನಡೆಸುತ್ತಿರಲಿಲ್ಲ ಮತ್ತು ಯಾವುದೇ ಸೂಚನೆಗಳನ್ನು ನೀಡುತ್ತಿರಲಿಲ್ಲ ಎಂದು ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಅಕ್ರಮ ಬಂಧನ ಎಂದ ಕಾಂಗ್ರೆಸ್​ ನಾಯಕ

ಈ ಬಂಧನದ ಕುರಿತಾಗಿ ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್​ನ ಹಿರಿಯ ನಾಯಕ ಭೂಪೇಶ್ ಬಘೇಲ್, ಉದಯ್ ಭಾನು ಚಿಬ್ ಮತ್ತು ಇತರ ಯುವ ಸದಸ್ಯರ ಬಂಧನವನ್ನು ಅಕ್ರಮ ಎಂದು ಕರೆದರು.
ಈ ಬೆಳವಣಿಗೆಯನ್ನು ನಾನು ಬಲವಾಗಿ ಖಂಡಿಸುತ್ತೇನೆ, ಪ್ರಜಾಪ್ರಭುತ್ವದಲ್ಲಿ ಪ್ರಶ್ನೆಗಳನ್ನು ಎತ್ತುವುದು ಮತ್ತು ಕಳವಳಗಳನ್ನು ಶಾಂತಿಯುತವಾಗಿ ವ್ಯಕ್ತಪಡಿಸುವುದು ಅಪರಾಧವಲ್ಲ, ಮೂಲಭೂತ ಹಕ್ಕು ಎಂದು ಹೇಳಿದರು.

ಘಟನೆಯ ಹಿನ್ನೆಲೆ

ಫೆಬ್ರವರಿ 20, 2026ರಂದು (ಶುಕ್ರವಾರ) ದೆಹಲಿಯ ಭಾರತ್ ಮಂಟಪದಲ್ಲಿ ಅಂತರಾಷ್ಟ್ರೀಯ ಮಟ್ಟದ ಕೃತಕ ಬುದ್ಧಿಮತ್ತೆ (AI) ಶೃಂಗಸಭೆ' ನಡೆಯುತ್ತಿತ್ತು. ಈ ವೇಳೆ ಯುವ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ, ತಮ್ಮ ಶರ್ಟ್‌ಗಳನ್ನು ಬಿಚ್ಚಿ ಅರೆಬೆತ್ತಲೆಯಾಗಿ ಪ್ರತಿಭಟನೆ ನಡೆಸಿದರು(ಏಜೆನ್ಸೀಸ್​​).