ಚೆನ್ನೈ: ಬಿಜೆಪಿಯಿಂದ ಹೊರನಡೆದಿರುವ ಕೆ. ಅಣ್ಣಾಮಲೈ (Annamalai) ಅವರು, ದೆಹಲಿ ಪೊಲೀಸರು ಕಾಕ್ರೋಚ್ ಜನತಾ ಪಾರ್ಟಿ ನಾಯಕರು ಮತ್ತು ಕಾರ್ಯಕರ್ತರ ವಿರುದ್ಧ ತೆಗೆದುಕೊಂಡಿರುವ ದಮನಕಾರಿ ಕ್ರಮದ ಕುರಿತಾಗಿ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಅಣ್ಣಾಮಲೈ, ಪ್ರತಿಭಟನಾಕಾರರನ್ನು ವಿದೇಶಿ ಏಜೆಂಟ್ ಎನ್ನುವ ರೀತಿಯಲ್ಲಿ ಬಿಂಬಿಸುವ ಬದಲು, ಅವರು ಎತ್ತಿರುವ ಪ್ರಮುಖ ಪ್ರಶ್ನೆಗಳಿಗೆ ಸರ್ಕಾರ ನೇರವಾಗಿ ಉತ್ತರಿಸಬೇಕು ಎಂದು ಆಗ್ರಹಿಸಿತ್ತಾ, ಕಾನೂನು ಪ್ರಕ್ರಿಯೆಯ ಉಲ್ಲಂಘನೆ ಮತ್ತು ಬಂಧನ ವಿಧಾನಗಳ ಕಾನೂನುಬದ್ಧತೆಯನ್ನು ಬಹಿರಂಗವಾಗಿ ಪ್ರಶ್ನಿಸಿದ್ದಾರೆ.
ಪ್ರಜಾಪ್ರಭುತ್ವದಲ್ಲಿ ಕಾನೂನಿನ ಪ್ರಕ್ರಿಯೆಯ ಉಲ್ಲಂಘನೆಯನ್ನು ಪ್ರಶ್ನಿಸಿದರೆ, ಜನರನ್ನು ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ. ನಿಮ್ಮನ್ನು ವಿದೇಶಿ ಏಜೆಂಟ್ ಎಂದು ಕರೆಯುವುದು ಸೇರಿದಂತೆ ವಿವಿಧ ದಾಳಿಗಳನ್ನು ನೀವು ಎದುರಿಸಬೇಕಾಗುತ್ತದೆ ಎಂದು ಪರೋಕ್ಷವಾಗಿ ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ. ಎರಡು ದಿನದ ಹಿಂದೆ ದೆಹಲಿ ಪೊಲೀಸರ ಕ್ರಮವನ್ನು ಪ್ರಶ್ನಿಸಿದ್ದ ಅಣ್ಣಾಮಲೈ, ಸಿಜೆಪಿಯ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಸಮರ್ಥಿಸಿಕೊಂಡಿದ್ದರು.
ಜಂತರ್ ಮಂತರ್ ಅನ್ನು ಪ್ರತಿಭಟನಾ ಸ್ಥಳವಾಗಿ ಡಿನೋಟಿಫೈ ಮಾಡಿರುವ ಬಗ್ಗೆ, ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ಗಳ ಅಧಿಕಾರಗಳ ಕುರಿತು, ಅಕ್ಟೋಬರ್ 13 ರಂದು ಬಂಧಿಸಲ್ಪಟ್ಟ ಸಿಜೆಪಿ ನಾಯಕರ ಜಾಮೀನು ವಿಚಾರಣೆಯ ನಿರ್ವಹಣೆ ಬಗ್ಗೆ, ಎಂಟು ಜಾಮೀನುದಾರರ ತಿರಸ್ಕಾರದ ಕುರಿತು ಮತ್ತು ನೀಟ್ ಪ್ರತಿಭಟನೆಗಳ ಸಮಯದಲ್ಲಿ ಪೆಲೆಟ್ ಗನ್ಗಳ ಬಳಕೆ ಹಾಗೂ ಪ್ರಮಾಣಿತ ಕಾರ್ಯಾಚರಣೆ ವಿಧಾನಗಳ ಉಲ್ಲಂಘನೆಯ ಬಗ್ಗೆ ಅಣ್ಣಾಮಲೈ ಐದು ಪ್ರಮುಖ ಪ್ರಶ್ನೆಗಳನ್ನು ಕೇಂದ್ರ ಸರ್ಕಾರದ ಮುಂದಿಟ್ಟಿದ್ದಾರೆ.
ಸಿಜೆಪಿಯ ಕೆಲವು ಪ್ರತಿಭಟನಾ ತಂತ್ರಗಳನ್ನು ತಾವು ಒಪ್ಪುವುದಿಲ್ಲ ಮತ್ತು ಅವು ತಪ್ಪುದಾರಿಗೆಳೆಯುವಂತಿವೆ ಎಂದಿರುವ ಸಿಂಗಂ, ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರು ಧ್ವನಿ ಎತ್ತುವ ಹಕ್ಕು ಹೊಂದಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿಯ ರಣತಂತ್ರದ ಬಗ್ಗೆಯೂ ಅನುಮಾನ ವ್ಯಕ್ತಪಡಿಸಿರುವ ಅಣ್ಣಾಮಲೈ, ಬಿಜೆಪಿ ನಿಜವಾಗಿಯೂ ಸಿಜೆಪಿಯನ್ನು ವಿರೋಧಿಸುತ್ತಿದೆಯೇ..? ಅಥವಾ ಅದಕ್ಕೆ ಉಚಿತ ಪ್ರಚಾರವನ್ನು ನೀಡುತ್ತಿದೆಯೇ..? ಆ ಪಕ್ಷವನ್ನು ಪ್ರಮುಖ ರಾಜಕೀಯ ಶಕ್ತಿಯಾಗಿ ಬಿಂಬಿಸುವ ಮೂಲಕ ಬಿಜೆಪಿ ವಿರೋಧ ಪಕ್ಷಗಳ ಮತಗಳನ್ನು ವಿಭಜಿಸಲು ಬಯಸುತ್ತದೆಯೇ..? ಈ ದೃಷ್ಠಿಕೋನದಲ್ಲಿ ನೋಡುವುದಾದರೆ ಸಿಜೆಪಿ ಹಣ ಕೊಟ್ಟರೂ ಇಂತಹ ಉತ್ತಮ ಪ್ರಚಾರ ತಂಡವನ್ನು ಪಡೆಯಲು ಸಾಧ್ಯವಿರಲಿಲ್ಲ ಎಂದು ಗಂಭೀರ ಆರೋಪ ಮಾಡಿದ್ದಾರೆ.
ನಾನು ಕಳೆದ ಜೂನ್ 5 ರಂದು ಬಿಜೆಪಿಯಿಂದ ಹೊರನಡೆದಿದ್ದು, ಸದ್ಯ ಸಿಜೆಪಿಯ ಕೆಲ ಪ್ರತಿಭಟನಾ ತಂತ್ರಗಳನ್ನು ಒಪ್ಪುವುದಿಲ್ಲವಾದರೂ, ಅವರು ಪ್ರಮುಖವೆಂದು ಪರಿಗಣಿಸುವ ವಿಷಯದ ಬಗ್ಗೆ ಪ್ರತಿಭಟಿಸಲು, ವಾದಿಸಲು ಅಥವಾ ಹೋರಾಡಲು ಹಕ್ಕಿದೆಯೇ ಎನ್ನುವುದನ್ನು ಯಾರಾದರೂ ಪ್ರಶ್ನಿಸಿದರೆ, ನಾನು ಖಂಡಿತವಾಗಿಯೂ ಹೌದು ಎಂದೇ ಹೇಳುತ್ತೇನೆ ಎಂದು ಅಣ್ಣಾಮಲೈ ಪೋಸ್ಟ್ನಲ್ಲಿ ಬರೆದುಕೊಂಡಿದ್ದರು.
ಅಣ್ಣಾಮಲೈರ ಈ ಹೇಳಿಕೆಗಳಿಗೆ ತಮಿಳುನಾಡು ಬಿಜೆಪಿ ಪ್ರತಿಕ್ರಿಯೆ ನೀಡಿದ್ದು, ಪಕ್ಷದ ರಾಜ್ಯ ಮುಖ್ಯ ವಕ್ತಾರ ನಾರಾಯಣನ್ ತಿರುಪತಿ ಮಾತನಾಡಿ, ಅಣ್ಣಾಮಲೈ ಅವರು ಬಿಜೆಪಿಯಿಂದ ಹೊರಬಂದ ನಂತರ ಚುನಾವಣಾ ಆಯೋಗದ ವಿಶೇಷ ತೀವ್ರ ಪರಿಷ್ಕರಣೆ ಕುರಿತಾದ ತಮ್ಮ ನಿಲುವನ್ನು ಸಂಪೂರ್ಣವಾಗಿ ಬದಲಾಯಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ತಮಿಳುನಾಡಿನಲ್ಲಿ ದೊಡ್ಡ ಸಂಖ್ಯೆಯ ನಕಲಿ ಮತದಾರರಿದ್ದು, ಅವರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಬೇಕು ಎಂದು ಅಣ್ಣಾಮಲೈ ಈ ಹಿಂದೆ ವಾದಿಸಿದ್ದರು. ಕಳೆದ ಮೇ ತಿಂಗಳಲ್ಲಿ ಕಾಂಗ್ರೆಸ್ ನಾಯಕ ಶಶಿ ತರೂರ್ ಅವರೊಂದಿಗೆ ನಡೆದ ಸಾರ್ವಜನಿಕ ಚರ್ಚೆಯಲ್ಲೂ ಅವರು ಎಸ್ಐಆರ್ ಪ್ರಕ್ರಿಯೆಯನ್ನು ಸಮರ್ಥಿಸಿಕೊಂಡಿದ್ದರು ಎಂಬುದನ್ನು ತಿರುಪತಿ ನೆನಪಿಸಿದ್ದಾರೆ. ಆದರೆ ಇಂದು ಪಕ್ಷ ತೊರೆದ ಬಳಿಕ ಅವರು ಸಿಜೆಪಿ ಮತ್ತು ಕಾಂಗ್ರೆಸ್ ಧ್ವನಿಗೆ ಬೆಂಬಲ ನೀಡುತ್ತಿರುವುದು ಅವರ ದ್ವಿಮುಖ ನೀತಿಯನ್ನು ತೋರಿಸುತ್ತದೆ ಎಂದಿದ್ದಾರೆ.
ಮಾಜಿ ಐಪಿಎಸ್ ಅಧಿಕಾರಿಯಾಗಿರುವ ಅಣ್ಣಾಮಲೈ ಅವರಿಗೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಸವಾಲುಗಳ ಬಗ್ಗೆ ಚೆನ್ನಾಗಿ ತಿಳಿದಿದೆ. ಹೀಗಿದ್ದೂ ಪೊಲೀಸರ ಕ್ರಮವನ್ನು ಪ್ರಶ್ನಿಸುವುದು ಅವರ ಹಿಂದಿನ ಜವಾಬ್ದಾರಿಗೆ ವಿರುದ್ಧವಾಗಿದೆ ಎಂದು ಬಿಜೆಪಿ ವಕ್ತಾರರು ಟೀಕಿಸಿದ್ದಾರೆ. ಅಣ್ಣಾಮಲೈ ಮತ್ತು ಬಿಜೆಪಿ ನಡುವಿನ ಈ ರಾಜಕೀಯ ವಾಕ್ಸಮರವು ಪ್ರಸ್ತುತ ರಾಜ್ಯ ಹಾಗೂ ರಾಷ್ಟ್ರೀಯ ರಾಜಕಾರಣದಲ್ಲಿ ಹೊಸ ಚರ್ಚೆಗೆ ದಾರಿ ಮಾಡಿಕೊಟ್ಟಿದೆ(ಏಜೆನ್ಸೀಸ್).