Rahul-Kharge Letter | ನಿಮ್ಮ ಮೌನ ಒಪ್ಪಲು ಸಾಧ್ಯವಿಲ್ಲ!...ರಾಮಮಂದಿರ ದೇಣಿಗೆ ಕಳವು ಪ್ರಕರಣದ ಬಗ್ಗೆ ಪ್ರಧಾನಿ ಮೋದಿಗೆ ಖರ್ಗೆ-ರಾಹುಲ್ ಪತ್ರ
ನವದೆಹಲಿ: ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನಲ್ಲಿ ನಡೆದಿದೆ ಎನ್ನಲಾದ ಕೋಟ್ಯಂತರ ರೂಪಾಯಿ ದೇಣಿಗೆ ಕಳವು ವಿಷಯಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜಂಟಿ ಪತ್ರ (Rahul-Kharge Letter) ಬರೆದಿದ್ದು, ಟ್ರಸ್ಟ್‌ನ ಹಣಕಾಸು ವ್ಯವಹಾರಗಳ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.
ತಮ್ಮ ಕಷ್ಟದ ಗಳಿಕೆಯನ್ನು ಭಕ್ತಿಯಿಂದ ದಾನ ಮಾಡಿದ ಲಕ್ಷಾಂತರ ಭಕ್ತರು ಈ ಕಳವಿನಿಂದ ತಮಗೆ ದ್ರೋಹವಾಗಿದೆ ಎಂದು ಭಾವಿಸುತ್ತಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಸಂಸತ್ತಿನ ಉಭಯ ಸದನಗಳ ವಿರೋಧ ಪಕ್ಷದ ನಾಯಕರುಗಳಾಗಿರುವ ರಾಹುಲ್ ಮತ್ತು ಖರ್ಗೆ, ಪ್ರಧಾನಿ ಮೋದಿಗೆ ಬರೆದಿರುವ ಪತ್ರದಲ್ಲಿ, ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನಲ್ಲಿ ಸಾವಿರಾರು ಕೋಟಿ ರೂಪಾಯಿಗಳ ಕಳವು ನಡೆದಿರುವ ಬಗ್ಗೆ ನಿಮಗೆ ತಿಳಿದಿದೆ. ಭಕ್ತಿ, ನಂಬಿಕೆ ಮತ್ತು ವಿಶ್ವಾಸದಿಂದ ತಮ್ಮ ಕಷ್ಟದ ಹಣವನ್ನು ದೇಣಿಗೆ ನೀಡಿದ ಲಕ್ಷಾಂತರ ಭಕ್ತರು ಈ ಕಳವಿನಿಂದಾಗಿ ವಂಚನೆಗೆ ಒಳಗಾಗಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.
ಪ್ರಧಾನಿ ಮೌನ ವಹಿಸಿರುವುದು ಒಪ್ಪಲು ಸಾಧ್ಯವಿಲ್ಲ!
ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ತಾವು ಸಂಸತ್ತಿನಲ್ಲಿ ಟ್ರಸ್ಟ್ ರಚನೆಯನ್ನು ಘೋಷಿಸಿದ್ದೀರಿ, ಆದರೆ ಅದರ ಸದಸ್ಯರು ಆರ್‌ಎಸ್‌ಎಸ್, ವಿಎಚ್‌ಪಿ ಮತ್ತು ಅದರ ಅಂಗಸಂಸ್ಥೆಗಳಿಗೆ ಸೇರಿದವರಾಗಿದ್ದಾರೆ ಎಂಬುದು ಸಾರ್ವಜನಿಕರಿಗೆ ತಿಳಿದಿರುವ ವಿಷಯ. ಅದರ ವಿವಾದಿತ ಮಾಜಿ ಪ್ರಧಾನ ಕಾರ್ಯದರ್ಶಿ ಕೂಡ ನಿಮ್ಮ ಆಪ್ತರಾಗಿದ್ದರು ಎಂದು ಪತ್ರದಲ್ಲಿ ಆರೋಪಿಸಲಾಗಿದೆ.
ಇಂತಹ ಗಂಭೀರ ಅಪರಾಧದ ಎದುರು ಪ್ರಧಾನಿ ಮೋದಿ ಮೌನ ವಹಿಸಿರುವುದು ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿರುವ ಉಭಯ ನಾಯಕರು, ತಕ್ಷಣವೇ ಜವಾಬ್ದಾರಿಯನ್ನು ನಿಗದಿಪಡಿಸಿ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ. ನಗದು, ಚಿನ್ನ, ಬೆಳ್ಳಿ ಸೇರಿದಂತೆ ಎಲ್ಲಾ ರೀತಿಯ ಕಾಣಿಕೆಗಳ ನಿರ್ವಹಣೆಯನ್ನು ಒಳಗೊಂಡಂತೆ ಟ್ರಸ್ಟ್‌ನ ಹಣಕಾಸು ವ್ಯವಹಾರಗಳ ಬಗ್ಗೆ ತಕ್ಷಣವೇ ಸ್ವತಂತ್ರ ಮತ್ತು ಸಮಗ್ರ ತನಿಖೆಗೆ ಆದೇಶಿಸಬೇಕು ಎಂದು ಕಾಂಗ್ರೆಸ್ ವರಿಷ್ಠರು ಒತ್ತಾಯಿಸಿದ್ದಾರೆ.
ಟ್ರಸ್ಟ್‌ನ ಖಾತೆಗಳನ್ನು ಸಾರ್ವಜನಿಕಗೊಳಿಸಿ
ಪ್ರತಿಯೊಬ್ಬ ಭಕ್ತನಿಗೂ ತಾವು ನೀಡಿದ ಕಾಣಿಕೆ ಹೇಗೆ ಬಳಕೆಯಾಗಿದೆ ಎಂಬುದು ತಿಳಿಯುವಂತಾಗಲು, ತನಿಖೆಯ ವರದಿ ಮತ್ತು ಟ್ರಸ್ಟ್‌ನ ಸಂಪೂರ್ಣ ಜಮೆ-ಖರ್ಚಿನ ವಿವರಗಳನ್ನು ಸಾರ್ವಜನಿಕಗೊಳಿಸಬೇಕು ಎಂದು ರಾಹುಲ್ ಮತ್ತು ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದ್ದಾರೆ. ಯಾವುದೇ ಸ್ಥಾನ ಅಥವಾ ಪ್ರಭಾವವನ್ನು ಲೆಕ್ಕಿಸದೆ, ಈ ಹಗರಣಕ್ಕೆ ಕಾರಣರಾದ ಎಲ್ಲರನ್ನೂ ಹೊಣೆಗಾರರನ್ನಾಗಿ ಮಾಡಬೇಕು. ನಿಮ್ಮ ಸರ್ಕಾರದ ಮತ್ತು ಟ್ರಸ್ಟ್‌ನ ವಿಶ್ವಾಸಾರ್ಹತೆಯು ನೀವು ಎಷ್ಟು ಪಾರದರ್ಶಕವಾಗಿ ಮತ್ತು ವೇಗವಾಗಿ ಕಾರ್ಯನಿರ್ವಹಿಸುತ್ತೀರಿ ಎಂಬುದರ ಮೇಲೆ ಅವಲಂಬಿತವಾಗಿದೆ. ದೇಶದ ಜನತೆ ಇದನ್ನು ಗಮನಿಸುತ್ತಿದ್ದಾರೆ ಎಂದು ಪತ್ರದಲ್ಲಿ ಬರೆಯಲಾಗಿದೆ.
ರಾಮಮಂದಿರ ದೇಣಿಗೆ ಕಳವು ಪ್ರಕರಣ
ಅಯೋಧ್ಯೆಯ ರಾಮಮಂದಿರ ನಿರ್ಮಾಣ ಮತ್ತು ನಿರ್ವಹಣೆಯ ಜವಾಬ್ದಾರಿ ಹೊತ್ತಿರುವ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ಬಂದಿರುವ ದೇಣಿಗೆಯಲ್ಲಿ ಆರ್ಥಿಕ ಅಕ್ರಮಗಳು ನಡೆದಿವೆ ಎಂಬ ಆರೋಪಗಳ ಸುತ್ತ ಈ ಪ್ರಕರಣ ದಾಖಲಾಗಿದೆ. ಪ್ರಸ್ತುತ ವಿಶೇಷ ತನಿಖಾ ತಂಡವು (SIT) ಈ ಆರೋಪಗಳ ತನಿಖೆ ನಡೆಸುತ್ತಿದ್ದು, ಸುಪ್ರೀಂ ಕೋರ್ಟ್‌ನ ನಿರ್ದೇಶನದಂತೆ ತನ್ನ ವರದಿಯನ್ನು ನ್ಯಾಯಾಲಯದ ಮುಂದೆ ಮಂಡಿಸುವ ನಿರೀಕ್ಷೆಯಿದೆ. ಸದ್ಯಕ್ಕೆ ತನಿಖೆ ಪ್ರಗತಿಯಲ್ಲಿದ್ದು, ಯಾವುದೇ ಅಂತಿಮ ತೀರ್ಮಾನಕ್ಕೆ ಬರಲಾಗಿಲ್ಲ(ಏಜೆನ್ಸೀಸ್).