- ಸೊಳ್ಳೆ ಪರದೆ ಕಟ್ಟಿದ್ದಕ್ಕೆ ವಿದ್ಯಾರ್ಥಿಗಳ ಮಧ್ಯೆ ಕಿತ್ತಾಟ, ಮಾರಾಮಾರಿಗೆ ಕಾರಣ
- ಸೊಳ್ಳೆಪರದೆ ಕಟ್ಟಿದ್ದರಿಂದ ರೂಮಿನಲ್ಲಿರುವ ಕೂಲರ್ ಗಾಳಿ ತನಗೆ ಸಿಗುತ್ತಿಲ್ಲ ಎಂದು ದೂರು
- ನಿನ್ನ ಪಾಲಿನ ಸೊಳ್ಳೆಗಳೆಲ್ಲ ನನ್ನನ್ನು ಕಚ್ಚುತ್ತಿದೆ ಎಂದು ಕ್ಯಾತೆ ತೆಗೆದ ಸ್ಟೂಡೆಂಟ್
- ಕೌನ್ಸಲಿಂಗ್ ನೀಡಲಾಗುತ್ತಿದೆ, ತಪ್ಪಿತಸ್ಥರ ವಿರುದ್ಧ ಕ್ರಮ ಎಂದ ಕಾಲೇಜು ಆಡಳಿತ ಮಂಡಳಿ
AMU Hostel Fight: ಉತ್ತರ ಪ್ರದೇಶದ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯ ಹಾಸ್ಟೆಲ್ ರೂಮೊಂದರಲ್ಲಿ ಸೊಳ್ಳೆ ಪರದೆಯ ವಿಚಾರವಾಗಿ ಶುರುವಾದ ಜಗಳವು ಮಾರಾಮಾರಿಗೆ ಕಾರಣವಾದ ಘಟನೆ ಬೆಳಕಿಗೆ ಬಂದಿದೆ.
ಆಲಿಗಢದ ಎಸ್‌ಎಸ್ ನಾರ್ತ್ ಹಾಲ್ ಹಾಸ್ಟೆಲ್‌ನಲ್ಲಿ ಇಬ್ಬರು ವಿದ್ಯಾರ್ಥಿಗಳ ಒಂದು ಕೋಣೆಯಲ್ಲಿದ್ದರು. ಇಲ್ಲಿ ಒಬ್ಬ ವಿದ್ಯಾರ್ಥಿ ತನ್ನ ಸುರಕ್ಷತೆಗಾಗಿ, ಸೊಳ್ಳೆ ಕಾಟ ತಪ್ಪಿಸಿಕೊಳ್ಳಲು ರಾತ್ರಿ ಸೊಳ್ಳೆ ಪರದೆ ಕಟ್ಟಿಕೊಂಡಿದ್ದ. ಇದನ್ನು ಕಂಡ ಮತ್ತೊಬ್ಬ ಸಿಟ್ಟಾಗಿ ನೀನು ಸೊಳ್ಳೆ ಪರದೆ ಕಟ್ಟಿಕೊಂಡಿದ್ದಕ್ಕೆ ನಿನಗೆ ಕಚ್ಚಬೇಕಾಗಿದ್ದ ಸೊಳ್ಳೆಗಳು ನನ್ನನ್ನು ಕಚ್ಚುತ್ತಿದೆ ಎಂದು ಕ್ಯಾತೆ ತೆಗೆದು ಹಲ್ಲೆ ಮಾಡಿದ ಘಟನೆ ನಡೆದಿದೆ.
ಸೊಳ್ಳೆ ಪರದೆ ಬಳಸುವ ವಿಚಾರಕ್ಕೆ ಶುರುವಾದ ವಾಗ್ವಾದ, ಕೈಕೈ ಮಿಲಾಯಿಸುವ ಮಟ್ಟಕ್ಕೆ ತಲುಪಿದಾಗ ವಿದ್ಯಾರ್ಥಿಗಳು ಸೇರಿ ಜಗಳ ಬಿಡಿಸಿದರು. ನಂತರ ಪ್ರಿನ್ಸಿಪಾಲರು ಇಬ್ಬರ ವಿರುದ್ಧ ಲಿಖಿತ ದೂರುಗಳನ್ನು ದಾಖಲಿಸಿಕೊಂಡಿದ್ದಾರೆ ಎನ್ನಲಾಗಿದೆ.
ಏನಿದು ಘಟನೆ?
ಕಾಶ್ಮೀರದ ವಿದ್ಯಾರ್ಥಿ ಮತ್ತು ಉತ್ತರ ಪ್ರದೇಶದ ಗಾಜಿಯಾಪುರದವನು ಒಂದೇ ಕೋಣೆಯಲ್ಲಿ ವಾಸವಿದ್ದರು. ಕಾಶ್ಮೀರಿ ವಿದ್ಯಾರ್ಥಿ ಬಿಎ ಎರಡನೇ ವರ್ಷ ಹಾಗೂ ಗಾಜಿಯಾಪುರದ ವಿದ್ಯಾರ್ಥಿ ಬಿಎ ಮೂರನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದರು. ಕಾಶ್ಮೀರಿ ವಿದ್ಯಾರ್ಥಿ ನಿತ್ಯ ಸೊಳ್ಳೆಗಳ ಕಾಟ ತಾಳಲಾರದೆ ಪರದೆಯನ್ನು ತನ್ನ ಮಂಚಕ್ಕೆ ಕಟ್ಟಿಕೊಂಡಿದ್ದ. ಇದನ್ನು ಕಂಡ ಯುಪಿ ಸ್ಟೂಡೆಂಟ್ ಸಿಟ್ಟಾದ ನಂತರ ಅವನ ಬಳಿ ಹೋಗಿ ನಿನ್ನಿಂದ ನಿನಗೆ ಕಚ್ಚಬೇಕಾಗಿದ್ದ ಸೊಳ್ಳೆಗಳೆಲ್ಲ ನನ್ನನ್ನು ಕಚ್ಚುತ್ತಿವೆ ಎಂದು ಜಗಳವಾಡಿದ್ದಾನೆ.
"ರೂಮಿನ ಒಂದು ಬದಿಗೆ ಸೊಳ್ಳೆಪರದೆ ಕಟ್ಟಿ ರಕ್ಷಣೆ ಪಡೆದುಕೊಂಡಿರುವುದರಿಂದ, ರೂಮಿನಲ್ಲಿರುವ ಉಳಿದ ಎಲ್ಲಾ ಸೊಳ್ಳೆಗಳು ನನ್ನ ಕಡೆಗೆ ಧಾವಿಸಿ ಬರುತ್ತಿವೆ ಮತ್ತು ನಿನ್ನ ಪಾಲಿನ ಸೊಳ್ಳೆಗಳೂ ಸೇರಿ ನನಗೆ ವಿಪರೀತ ಕಚ್ಚುತ್ತಿವೆ"ಎಂದು ತಗಾದೆ ತೆಗೆದಿದ್ದಾನೆ. ಅಷ್ಟೇ ಅಲ್ಲದೆ, ಸೊಳ್ಳೆಪರದೆ ಕಟ್ಟಿದ ಕಾರಣ ರೂಮಿನಲ್ಲಿ ಅಳವಡಿಸಲಾಗಿರುವ ಕೂಲರ್‌ನ ಗಾಳಿಯು ತನಗೆ ಸರಿಯಾಗಿ ಬರುತ್ತಿಲ್ಲ, ಗಾಳಿ ತಡೆಯಲಾಗುತ್ತಿದೆ ಎಂದು ದೂರಿದ್ದಾನೆ. ಈ ಸಣ್ಣ ಅಸಮಾಧಾನವು ಇಬ್ಬರ ನಡುವೆ ಮೊದಲು ಮಾತಿನ ಚಕಮಕಿಗೆ ಕಾರಣವಾಗಿ, ನಂತರ ಇಬ್ಬರೂ ಹಾಸ್ಟೆಲ್ ರೂಮಿನಲ್ಲೇ ಪರಸ್ಪರ ಹೊಡೆದಾಡಿಕೊಂಡಿದ್ದಾರೆ.ನಂತರ ಇಬ್ಬರೂ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಪ್ರೊಕ್ಟರ್ ಕಚೇರಿಗೆ ಧಾವಿಸಿ ಪರಸ್ಪರರ ವಿರುದ್ಧ ಲಿಖಿತ ದೂರನ್ನು ನೀಡಿದ್ದಾರೆ.
ಪ್ರೊಫೆಸರ್ ಏನಂದ್ರು?
ಈ ಜಗಳದ ಬಗ್ಗೆ ಮಾತನಾಡಿದ ಎಎಂಯು ಪ್ರೊಫೆಸರ್ ನಾವೇದ್ ಅಲಿ ಖಾನ್, ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿಗಳು ಒಡೆದಾಡಿಕೊಳ್ಳುತ್ತಿರುವುದು ನಿಜಕ್ಕೂ ಅಘಾತಕಾರಿ ವಿಚಾರ. ಒಬ್ಬ ವಿದ್ಯಾರ್ಥಿ ಸೊಳ್ಳೆಪರದೆ ಸೊಳ್ಳೆಗಳನ್ನು ತನ್ನತ್ತ ತಿರುಗಿಸುತ್ತಿದೆ ಎಂದರೆ, ಮತ್ತೊಬ್ಬ ಕೂಲರ್ ಗಾಳಿ ತಡೆಯುತ್ತಿದೆ ಎಂದು ದೂರಿದ್ದಾನೆ. ಇಬ್ಬರಿಗೂ ಕೌನ್ಸಲಿಂಗ್ ಆಗ್ತಿದೆ. ಯಾರ ತಪ್ಪಿದೆಯೋ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು, (ಏಜೆನ್ಸೀಸ್).