ಪಾವನಿ ಅವಸ್ಥಿ ಮತ್ತು ಅವರ ತಾಯಿ 
ದೇಶ

ಬಾಯ್​ಫ್ರೆಂಡ್​ ಜತೆಗಿರುವಂತೆ AI ಫೋಟೋ ರಚಿಸಿ ಅಮ್ಮನಿಗೆ ತೋರಿಸಿದ ಮಗಳು: ಮುಂದೇನಾಯ್ತು ನೀವೇ ನೋಡಿ! AI Image

ಪ್ರಮುಖ ಮುಖ್ಯಾಂಶಗಳು

  • ವೇಗವಾಗಿ ಮುಂದುವರಿಯುತ್ತಿರುವ ಈ ಜಗತ್ತನ್ನು ಪ್ರಸ್ತುತ ಕೃತಕ ಬುದ್ಧಿಮತ್ತೆ ಆಳುತ್ತಿದೆ
  • ವಾಸ್ತವವನ್ನೇ ಸುಳ್ಳು ಅಂತ ನಂಬಿಸುವಷ್ಟರಮಟ್ಟಿಗೆ ಆರ್ಟಿಫಿಶಿಯಲ್​ ಇಂಟೆಲಿಜೆನ್ಸ್​ ಬೆಳೆದಿದೆ
  • ಸಾಮಾಜಿಕ ಜಾಲತಾಣವನ್ನು ತೆರೆದರೆ ಸಾಕು ಬರೀ ಎಐ ವಿಡಿಯೋಗಳೇ ತುಂಬಿ ತುಳುಕುತ್ತವೆ
AI Image : ವೇಗವಾಗಿ ಮುಂದುವರಿಯುತ್ತಿರುವ ಈ ಜಗತ್ತನ್ನು ಪ್ರಸ್ತುತ ಕೃತಕ ಬುದ್ಧಿಮತ್ತೆ ಆಳುತ್ತಿದೆ. ವಾಸ್ತವವನ್ನೇ ಸುಳ್ಳು ಅಂತ ನಂಬಿಸುವಷ್ಟರಮಟ್ಟಿಗೆ ಆರ್ಟಿಫಿಶಿಯಲ್​ ಇಂಟೆಲಿಜೆನ್ಸ್​ ಬೆಳೆದಿದೆ. ಡಿಜಿಟಲ್​ ಲೋಕವನ್ನು ಆಳುತ್ತಿರುವ ಎಐ, ಎಷ್ಟು ಒಳ್ಳೆಯದೋ ಅಷ್ಟೇ ಕೆಟ್ಟದ್ದು ಕೂಡ. ಇತ್ತೀಚೆಗೆ, ಎಐ ಅನ್ನು ಅಪಪ್ರಚಾರ ಹಾಗೂ ಅಶ್ಲೀಲತೆಗೆ ಹೆಚ್ಚು ಬಳಸಲಾಗುತ್ತಿದೆ. ಎಐನಿಂದ ರಚಿಸಿದ ವಿಡಿಯೋ ಹಾಗೂ ಫೋಟೋಗಳು ಕ್ಷಣ ಮಾತ್ರದಲ್ಲಿ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಇಂದಿನ ಯುವಕರು ಯಾವ ಮಟ್ಟಿಗೆ AI ಕಂಟೆಂಟ್​ ಬಳಸುತ್ತಿದ್ದಾರೆಂದು ನಿರ್ದಿಷ್ಟವಾಗಿ ಹೇಳಬೇಕಾಗಿಲ್ಲ. ನೀವು ಸಾಮಾಜಿಕ ಜಾಲತಾಣವನ್ನು ತೆರೆದರೆ ಸಾಕು ಬರೀ ಎಐ ವಿಡಿಯೋಗಳೇ ತುಂಬಿ ತುಳುಕುತ್ತವೆ. ವಿಡಿಯೋ ಮತ್ತು ಫೋಟೋಗಳು ಹೇಗಿರುತ್ತವೆ ಅಂದರೆ, ವಾಸ್ತವದ ತಲೆಯ ಮೇಲೆ ಹೊಡೆದಂತೆ ಇರುತ್ತದೆ. ನೋಡಿದವರು ಸುಲಭವಾಗಿ ನಂಬುವಂತೆ ಇರುತ್ತದೆ. ಇದಕ್ಕೆ ಸಾಕ್ಷಿಯಾಗಿ ಇತ್ತೀಚೆಗೆ ಒಂದು ವಿಡಿಯೋ ವೈರಲ್​ ಆಗಿದೆ.
ಉತ್ತರ ಪ್ರದೇಶದ ಪಾವನಿ ಅವಸ್ಥಿ ಎಂಬ ಯುವತಿ, ಎಐ ಮೂಲಕ ಒಂದು ಫೋಟೋವನ್ನು ಕ್ರಿಯೆಟ್​ ಮಾಡಿ ತನ್ನ ತಾಯಿಯೊಂದಿಗೆ ತಮಾಷೆ ಮಾಡುತ್ತಾರೆ. ಆದರೆ, ಆ ಫೋಟೋವನ್ನು ನಿಜವೆಂದು ನಂಬುವ ತಾಯಿ, ತನ್ನ ಮಗಳ ಮೇಲೆ ಗರಂ ಆಗುತ್ತಾರೆ. ಅಷ್ಟಕ್ಕೂ ಆ ಫೋಟೋದಲ್ಲಿ ಏನಿತ್ತು ಅಂದರೆ, ಪಾವನಿ ಅವಸ್ಥಿ, ಯುವಕನ ಜತೆ ನಿಂತು ಕ್ಯಾಮೆರಾಗೆ ಪೋಸ್​ ನೀಡಿರುವಂತೆ ಆ ಫೋಟೋ ಇತ್ತು. ಆ ಫೋಟೋವನ್ನು ಚಾಟ್​ಜಿಪಿಟಿ ಮೂಲಕ ಕ್ರಿಯೇಟ್​ ಮಾಡಲಾಗಿತ್ತು.
ತಾಯಿಗೆ ಫೋಟೋ ತೋರಿಸಿದಾಗ, ಅದರಲ್ಲಿರುವ ವ್ಯಕ್ತಿ ಯಾರು ಎಂದು ಪ್ರಶ್ನೆ ಮಾಡುತ್ತಾರೆ. ಆತ ನನ್ನ ಬಾಯ್​ಫ್ರೆಂಡ್​ ಎಂದು ಮಗಳು ಹೇಳುತ್ತಾಳೆ. ನಿಜವಾಗಿಯೂ ಆತ ನಿನ್ನ ಬಾಯ್​​ಫ್ರೆಂಡಾ? ನಿಮ್ಮ ನಡುವಿನ ಪ್ರೀತಿ ಯಾವಾಗ ಆರಂಭವಾಯಿತು? ಎಂದೆಲ್ಲ ತಾಯಿ ಪ್ರಶ್ನೆಗಳನ್ನು ಕೇಳುತ್ತಾಳೆ. ಇದಕ್ಕೆ ಉತ್ತರ ನೀಡುವ ಪಾವನಿ, ಆತನನ್ನು ಬಹಳ ದಿನಗಳಿಂದ ತಿಳಿದಿದ್ದೇನೆ. ಆತ ಒಳ್ಳೆಯ ಸ್ನೇಹಿತ, ಸರ್ಕಾರಿ ಕೆಲಸದಲ್ಲಿದ್ದಾನೆ ಮತ್ತು ಶ್ರೀಮಂತರು ಕೂಡ ಹೌದು ಎನ್ನುತ್ತಾಳೆ. ಅಲ್ಲದೆ, ಆತ ಕೆಲವೇ ದಿನಗಳಲ್ಲಿ ನಮ್ಮ ಮನೆಗೆ ಬರುತ್ತಾನೆ ಎಂದು ಹೇಳುತ್ತಾಳೆ. ಇದರಿಂದ ಕೋಪಗೊಂಡ ತಾಯಿ, ನಿಮ್ಮ ತಂದೆಗೆ ಈ ವಿಷಯ ತಿಳಿದರೆ, ಅವರು ಸುಮ್ಮನೇ ಬಿಡುವುದಿಲ್ಲ ಎನ್ನುತ್ತಾರೆ. ಇದೆಲ್ಲ ಸರಿ ಹೋಗುವುದಿಲ್ಲ ಎಂದು ಮಗಳನ್ನು ಹಿಗ್ಗಾಮುಗ್ಗಾ ಬೈಯುತ್ತಾಳೆ. ಅಲ್ಲದೆ, ಮಗಳ ಮುಖಕ್ಕೆ ಬಾರಿಸುತ್ತಾಳೆ. ನಂತರ, ಫೋನ್ ಎಸೆಯಲು ಹೊರಟ ದೃಶ್ಯವು ಕಡಿತಗೊಳ್ಳುತ್ತದೆ.
ಇದಿಷ್ಟು ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಕೃತಕ ಬುದ್ಧಿಮತ್ತೆ (AI) ಬಳಸಿ ತನ್ನ ತಾಯಿಗೆ ಹೇಗೆ ತಮಾಷೆ ಮಾಡಿದ್ದೇನೆ ನೋಡಿ ಅಂತಾ ವಿಡಿಯೋವನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಪಾವನಿ ಅಪ್‌ಲೋಡ್ ಮಾಡಿದ್ದಾರೆ. ಈ ವಿಡಿಯೋ ಇನ್‌ಸ್ಟಾಗ್ರಾಮ್‌ನಲ್ಲಿ ಸುಮಾರು 4 ಮಿಲಿಯನ್​ಗೂ ಅಧಿಕ ವೀಕ್ಷಣೆಗಳನ್ನು ಗಳಿಸಿದದು, ವಿಡಿಯೋ ನೋಡಿದವರು ತರಹೇವಾರಿ ಕಾಮೆಂಟ್​ಗಳನ್ನು ಮಾಡುತ್ತಿದ್ದಾರೆ. ಈ ಎಐ ಇಂದ ಮುಂದಿನ ಜಗತ್ತು ಕಷ್ಟ ಅನ್ನೋ ಮಾತುಗಳು ಕೇಳಿಬರುತ್ತಿವೆ.
ಅದೇ ರೀತಿ ಮತ್ತೊಂದು ಘಟನೆಯಲ್ಲಿ, ಮೊಮ್ಮಗನೊಬ್ಬ ತನ್ನ ಅಜ್ಜನ 90ನೇ ಹುಟ್ಟುಹಬ್ಬಕ್ಕಾಗಿ ವಿಶೇಷ ವಿಡಿಯೋ ರಚಿಸಲು ಇದೇ AI ತಂತ್ರಜ್ಞಾನ ಬಳಸಿದನು. ಕುಟುಂಬದ ಹಳೆಯ ಫೋಟೋಗಳನ್ನು ಬಳಸಿ, ಅವುಗಳನ್ನು ಭಾವನಾತ್ಮಕ ನೆನಪುಗಳಾಗಿ ಪರಿವರ್ತಿಸಿ, ತನ್ನ ಅಜ್ಜನ ಜೀವನ ಕಥೆಯನ್ನು ತೋರಿಸಿದನು. ವಿಡಿಯೋ ನೋಡಿದ ನಂತರ ಅಜ್ಜ ತುಂಬಾ ಭಾವುಕರಾಗಿದ್ದರು. ಕುಟುಂಬ ಸದಸ್ಯರು ಸಹ ಕಣ್ಣೀರು ಸುರಿಸಿದರು. ಈ ವಿಡಿಯೋ ನೋಡಿದವರು, AI ಇರುವುದು ಕೇವಲ ನಿಷ್ಪ್ರಯೋಜಕ ವಿಡಿಯೋ ರಚಿಸುವುದಕ್ಕಲ್ಲ, ವಿನೋದ, ಭಾವನೆ ಮತ್ತು ಕುಟುಂಬ ಬಂಧಗಳನ್ನು ಬಲಪಡಿಸುವ ಸಾಧನವಾಗಿಯೂ ಬಳಸಬಹುದು ಎಂದು ಅನೇಕರು ಕಾಮೆಂಟ್ ಮಾಡುತ್ತಿದ್ದಾರೆ, (ಏಜೆನ್ಸೀಸ್​).