ಕೊಯಮತ್ತೂರಿನಲ್ಲಿ ಗೆಳತಿಯ ಮನೆಯಲ್ಲಿ ಚಿನ್ನ ಕದ್ದು ಬಾಯ್‌ಫ್ರೆಂಡ್‌ಗೆ ಬೈಕ್ ಕೊಡಿಸಿದ ಪ್ರಕರಣ
ಕೊಯಂಮತ್ತೂರು: ತನ್ನ ಬಾಯ್‌ಫ್ರೆಂಡ್‌ಗೆ ಐಷಾರಾಮಿ ಬೈಕ್ವೊಂದನ್ನು ಕೊಡಿಸುವ ಸಲುವಾಗಿ ಗೆಳತಿ ಮನೆಯಿಂದ ಚಿನ್ನವನ್ನು ಕಳ್ಳತನ ಮಾಡಿದ ಆರೋಪದ ಹಿನ್ನಲೆ ಯುವತಿಯೊಬ್ಬಳನ್ನು ಬಂಧಿಸಿರುವ ಘಟನೆ ತಮಿಳುನಾಡಿನ ಕೊಯಂಮತ್ತೂರಿ (Coimbatore Gold Theft) ನಲ್ಲಿ ವರದಿಯಾಗಿದೆ.
ಮಾಹಿತಿ ಪ್ರಕಾರ, ಬಂಧಿತ ಆರೋಪಿ ಆರ್. ಜೊಯ್ ಪ್ರಿನ್ಸಿ (19) ಎರಡನೇ ವರ್ಷದ ಬಿ. ಕಾಂ ವಿದ್ಯಾರ್ಥಿಯಾಗಿದ್ದು, ತನ್ನ ಗೆಳತಿ ಮನೆಯಲ್ಲಿ ಚಿನ್ನವನ್ನು ಕದ್ದಿರುವುದಾಗಿ ತಿಳಿದು ಬಂದಿದೆ.
ಆಗಿದ್ದೇನು?
ಕಳ್ಳತನ ನಡೆದಿರುವ ಮನೆ ಮಾಲೀಕ ತಮಿಳುಸೆಲ್ವನ್ ಹಾಗೂ ಈ ಪ್ರಿನ್ಸಿ ತಂದೆ ಇಬ್ಬರು ಗೆಳೆಯರಾಗಿದ್ದಾರೆ. ಹಾಗೆಯೇ ಈ ಪ್ರಿನ್ಸಿ ಮತ್ತು ತಮಿಳುಸೆಲ್ವನ್ ಮಗಳು ಕೂಡ ಗೆಳತಿಯರಾಗಿದ್ದಾರೆ. ಆಗಸ್ಟ್ 16 ರಂದು ತಮಿಳುಸೆಲ್ವನ್ ಮನೆಗೆ ಬಂದಿರುವ ಪ್ರಿನ್ಸಿ, ಸುಮಾರು 9 ಚಿನ್ನದ ಅಭರಣಗಳನ್ನು ಕಳ್ಳತನ ಮಾಡಿದ್ದಾಳೆ. ಮನೆಯಲ್ಲಿದ್ದ ಚಿನ್ನ ಕಾಣದಿದ್ದಾಗ, ತಮಿಳುಸೆಲ್ವನ್ ಪೊಲೀಸರಲ್ಲಿ ದೂರನ್ನು ದಾಖಲಿಸಿದ್ದಾನೆ.
ಬಾಯ್‌ಫ್ರೆಂಡ್‌ಗೆ ಬೈಕ್ ಗಿಫ್ಟ್!
ನಂತರ ಪೊಲೀಸರು ಪ್ರಿನ್ಸಿಯನ್ನು ವಿಚಾರಣೆ ಮಾಡಿದಾಗ, ಚಿನ್ನವನ್ನು ಈ ಪ್ರಿನ್ಸಿಯೇ ಕದ್ದಿರುವುದು ತಿಳಿದು ಬಂದಿದ್ದು, ಕದ್ದ ಚಿನ್ನವನ್ನು ಮಾರಿ ತನ್ನ ಬಾಯ್‌ಫ್ರೆಂಡ್‌ಗೆ ಬೈಕ್ವೊಂದನ್ನು ಗಿಫ್ಟ್ ಮಾಡಿದ್ದಾಗಿ ಒಪ್ಪಿಕೊಂಡಿದ್ದಾಳೆ. ಹಾಗೂ ಈಕೆಯ ಬಾಯ್ಫ್ರೆಂಡ್ ಹೊಸ ಬೈಕ್ ತೆಗೆದುಕೊಂಡಿದ್ದನ್ನು ತನ್ನ ಸೋಷಿಯಲ್ ಮೀಡಿಯಾನಲ್ಲಿ ಹಂಚಿಕೊಂಡಿದ್ದಾಗಿ ಕೂಡ ತಿಳಿದು ಬಂದಿದೆ.
ಬಾಯ್ಫ್ರೆಂಡ್ ಪರಾರಿ; ಬೆನ್ನುಬಿದ್ದ ಪೊಲೀಸ್!
ಚಿನ್ನವನ್ನು ಕಳ್ಳತನ ಮಾಡಿ, ಅಂಗಡಿಯಲ್ಲಿ ಮಾರಾಟ ಮಾಡಿ ಬಾಯ್‌ಫ್ರೆಂಡ್‌ಗೆ ಬೈಕ್ ಕೊಡಿಸಿದ್ದಾಗಿ ಪ್ರಿನ್ಸಿ ಒಪ್ಪಿಕೊಂಡಿದ್ದಾಳೆ. ಆದರೆ ಇಕೆಯಿಂದ ಬೈಕ್ ಪಡೆದಿರುವ ಬಾಯ್ಫ್ರೆಂಡ್ ಜನಗನ್ ಸಿವಾ ಕಣ್ಮರೆಯಾಗಿದ್ದಾಗಿ ತಿಳಿದು ಬಂದಿದೆ. ಸದ್ಯ ಪೊಲೀಸರು ಇತನ ಮೇಲೆ ಕೂಡ ದೂರನ್ನು ದಾಖಲಿಸಿಕೊಂಡಿದ್ದು, ಇವನ ಪತ್ತೇಗಾಗಿ ವಿಶೇಷ ತಂಡವೊಂದನ್ನು ರಚಿಸಿರುವುದಾಗಿ ಪೊಲೀಸ್ ಇಲಾಖೆ ಮಾಹಿತಿ ನೀಡಿದೆ, (ಏಜನ್ಸೀಸ್).