ಲಖನೌ: ವಿರೋಧ ಪಕ್ಷಗಳು ತಮ್ಮ ಚುನಾವಣಾ ಸೋಲುಗಳಿಗೆ ನೆಪಗಳನ್ನು ಹುಡುಕುತ್ತಿವೆ ಎಂದು ಕಿಡಿಕಾರಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್, ಬುಧವಾರ(ನ. 04) ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಹಾಗೂ ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಅವರನ್ನು ಗುರಿಯಾಗಿಸಿಕೊಂಡು, ಇಂತಹ ರಾಜಕುಮಾರರನ್ನು ಯುವಕರು ತಿರಸ್ಕರಿಸಿದ್ದಾರೆ ಎಂದು ಹೇಳಿದ್ದಾರೆ.
ಬಿಜೆಪಿಯ 'ಲೋಕತಂತ್ರ ಬಚಾವೋ, ಅರಾಜಕ್ತ ಹಟಾವೋ' ಅಭಿಯಾನದ ಭಾಗವಾಗಿ ಗೋರಖ್ಪುರದಲ್ಲಿ ನಡೆದ ಪ್ರತಿಭಟನಾ ರ್ಯಾಲಿಯಲ್ಲಿ ಮಾತನಾಡಿರುವ ಅವರು, ರಾಹುಲ್ ಗಾಂಧಿ ಮತ್ತು ಅಖಿಲೇಶ್ ಯಾದವ್ ಅವರನ್ನು ಉತ್ತರ ಪ್ರದೇಶದ ಇಬ್ಬರು ರಾಜಕುಮಾರರು ಎಂದು ಕರೆದರು. ಮತ್ತು ರಾಜ್ಯದ ಮತ್ತು ದೇಶದ ಜನರಿಗೆ ಅವರ ದುಷ್ಕೃತ್ಯಗಳ ಇತಿಹಾಸ ನೆನಪಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಹುಲ್ ಗಾಂಧಿಯನ್ನು ಪಾರ್ಟ್ ಟೈಮ್ ರಾಜಕಾರಣಿ ಎಂದು ಕರೆದ ಅವರು, ಬಿಜೆಪಿ ಕಾರ್ಯಕರ್ತರು ವರ್ಷವಿಡೀ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡಿರುತ್ತಾರೆ. ಆದರೆ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಅವರು ಕೇವಲ ಚುನಾವಣೆಗಳ ಸಮಯದಲ್ಲಿ ಮಾತ್ರ ರಾಜಕೀಯವಾಗಿ ಸಕ್ರಿಯರಾಗಿರುತ್ತಾರೆ ಎಂದು ಟೀಕಿಸಿದ್ದಾರೆ.
ದೆಹಲಿಯ ರಾಮ್ಲೀಲಾ ಮೈದಾನದಲ್ಲಿ ನ. 1ರಂದು ವಿರೋಧ ಪಕ್ಷಗಳು ನಡೆಸಿದ ರ್ಯಾಲಿಯೂ ನಿರೀಕ್ಷಿಸಿದ್ದ ಜನಸಂಖ್ಯೆಯ ಶೇಕಡಾ 10ರಷ್ಟನ್ನು ಕೂಡ ಸೆಳೆಯುವಲ್ಲಿ ವಿಫಲವಾಯಿತು. ಇದಕ್ಕೆ ವ್ಯತಿರಿಕ್ತವಾಗಿ, ಬಿಜೆಪಿ ಮತ್ತು ಎನ್ಡಿಎ ಮಿತ್ರಪಕ್ಷಗಳು ವಿವಿಧ ಜಿಲ್ಲೆ ಹಾಗೂ ಪಟ್ಟಣಗಳಲ್ಲಿ ಬೃಹತ್ ಮೆರವಣಿಗೆಗಳನ್ನು ಆಯೋಜಿಸುತ್ತಿದ್ದು, ಇದು ಮೈತ್ರಿಕೂಟದ ಶಕ್ತಿ ಮತ್ತು ಸಾರ್ವಜನಿಕ ಬೆಂಬಲವನ್ನು ಪ್ರತಿಬಿಂಬಿಸುತ್ತದೆ ಎಂದಿದ್ದಾರೆ.
140 ಕೋಟಿ ಜನರು ಮೋದಿಯವರನ್ನು ತಮ್ಮ ಪ್ರಧಾನಿ ಎಂದು ಪರಿಗಣಿಸುವುದಲ್ಲದೆ, ತಮ್ಮ ಮನೆಗಳು, ಕುಟುಂಬಗಳು ಮತ್ತು ದೇಶವನ್ನು ರಕ್ಷಿಸುವ 'ಚೌಕಿದಾರ' ಎಂದು ಭಾವಿಸುತ್ತಾರೆ. ರಾಹುಲ್ ಗಾಂಧಿಯವರು ಸುಳ್ಳನ್ನು ಹರಡಬಹುದು, ಆದ್ರೆ ಮೋದಿಯವರ ನೇತೃತ್ವದಲ್ಲಿ ಭಾರತ ಬದಲಾಗಿದೆ ಎಂದು ಹೇಳಿದ್ದಾರೆ (ಏಜೆನ್ಸೀಸ್).