ಮೃತ ಯುವಕ ರಾಜ್ ಮಕ್ವಾನಾ 
ದೇಶ

ಖಾಕಿ ಏಟಿಗೆ ಹೆದರಿ ಪ್ರಾಣಬಿಟ್ಟ ಯುವಕ: ಇಂದೋರ್‌ನಲ್ಲಿ ನಡೆದ ಈ ದುರಂತಕ್ಕೆ ಹೊಣೆ ಯಾರು? ಎಂದ ನೆಟ್ಟಿಗರು | Indore

ಪ್ರಮುಖ ಮುಖ್ಯಾಂಶಗಳು

  • ಇಂದೋರ್‌ನ ತಪತಿ ಕಾಂಪ್ಲೆಕ್ಸ್‌ನಲ್ಲಿ 23 ವರ್ಷದ ರಾಜ್ ಮಕ್ವಾನಾ
  • ಪೊಲೀಸ್ ಏಟಿಗೆ ಹೆದರಿ ಐದನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ
  • ಪೊಲೀಸರ ವಿರುದ್ಧ ನೆಟ್ಟಿಗರು ಗರಂ
ಇಂದೋರ್: ಮಧ್ಯಪ್ರದೇಶ ರಾಜ್ಯದ ಇಂದೋರ್‌ (Indore) ನ ತಪತಿ ಕಾಂಪ್ಲೆಕ್ಸ್‌ನ ಐದನೇ ಮಹಡಿಯಿಂದ ಜಿಗಿದು ರಾಜ್ ಮಕ್ವಾನಾ (23) ಎಂಬ ಯುವಕ ಪ್ರಾಣ ಕಳೆದುಕೊಂಡಿರುವ ಘಟನೆ ಈಗ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಂಚಲನವನ್ನು ಸೃಷ್ಟಿಸಿದೆ.
ಉಸಿರಾಟದ ತೊಂದರೆಯಿಂದ ನಿದ್ರೆ ಬರದ ಕಾರಣ, ಸ್ವಲ್ಪ ತಾಜಾ ಗಾಳಿ ಸೇವಿಸಿದರೆ ಗುಣವಾದೀತು ಎಂದು ಆತ ಮನೆಯಿಂದ ಹೊರ ಬಂದಿದ್ದೇ ಆತನ ಪಾಲಿಗೆ ಮೃತ್ಯುಕೂಪವಾಗಿದೆ. ಮಾನಸಿಕ ಒತ್ತಡಕ್ಕೆ ಚಿಕಿತ್ಸೆ ಪಡೆಯುತ್ತಿದ್ದ, ಸೌಮ್ಯ ಸ್ವಭಾವದ ರಾಜ್, ಕೇವಲ ಒಂದು ಕಪಾಳಮೋಕ್ಷಕ್ಕೆ ಹೆದರಿ ತನ್ನ ಪ್ರಾಣವನ್ನೇ ಕಳೆದುಕೊಂಡ ಕರುಣಾಜನಕ ಕಥೆ ಈಗ ಇಡೀ ನಗರವನ್ನು ಬೆಚ್ಚಿಬೀಳಿಸಿದೆ.

ತಾಜಾ ಗಾಳಿಗಾಗಿ ಬಂದವನಿಗೆ ಸಿಕ್ಕಿದ್ದು ಪೊಲೀಸ್ ಏಟು!

ಕಳೆದ ಕೆಲವು ತಿಂಗಳಿಂದ ಅನಾರೋಗ್ಯದ ಕಾರಣ ಮನೆಯಿಂದಲೇ ಹೊರಬರದ ರಾಜ್, ಗುರುವಾರ (ಮಾ.5) ಬೆಳಗಿನ ಜಾವ ಅಸ್ವಸ್ಥತೆ ಅನುಭವಿಸಿ ಅಪಾರ್ಟ್‌ಮೆಂಟ್ ಆವರಣಕ್ಕೆ ಬಂದಿದ್ದ. ಅಲ್ಲಿನ ಭದ್ರತಾ ಸಿಬ್ಬಂದಿ ಈತನನ್ನು ತಡೆದು ಪ್ರಶ್ನಿಸಿದಾಗ ಮಾತಿನ ಚಕಮಕಿ ನಡೆದಿದೆ. ಕೂಡಲೇ ಗಾರ್ಡ್ ಪೊಲೀಸರಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸ್ ಅಧಿಕಾರಿಗಳು ರಾಜ್‌ನನ್ನು ವಿಚಾರಣೆ ನಡೆಸಲು ಆರಂಭಿಸಿದರು.
ಅತ್ತ ಮಗ ಕಾಣದಿದ್ದಾಗ ಆತಂಕಗೊಂಡ ತಂದೆ-ತಾಯಿ ಕೆಳಗೆ ಓಡಿ ಬಂದಿದ್ದಾರೆ. ನನ್ನ ತಮ್ಮ ಮಾನಸಿಕವಾಗಿ ಅಸ್ವಸ್ಥನಿದ್ದಾನೆ, ಆತನಿಗೆ ಉಸಿರಾಟದ ತೊಂದರೆ ಇದೆ, ದಯವಿಟ್ಟು ಬಿಟ್ಟುಬಿಡಿ ಎಂದು ರಾಜ್‌ನ ಸಹೋದರಿ ನಿಕಿತಾ ಪೊಲೀಸರ ಕಾಲು ಹಿಡಿಯದಷ್ಟೇ ಬಾಕಿ ಇತ್ತು. ಆದರೆ, ಪರಿಸ್ಥಿತಿ ತಿಳಿಗೊಳ್ಳುವ ಬದಲು ವಿಕೋಪಕ್ಕೆ ಹೋಯಿತು.

ಕ್ಷಮಿಸಿ ಎಂದರೂ ಬಿಡದ ಅಧಿಕಾರಿ

ನಿಕಿತಾ ಕಣ್ಣೀರು ಹಾಕುತ್ತಾ ಘಟನೆಯನ್ನು ನೆನಪಿಸಿಕೊಂಡಿದ್ದು, ನನ್ನ ತಮ್ಮ ಪೊಲೀಸರ ಮುಂದೆ ಕೈಮುಗಿದು ಕ್ಷಮೆ ಕೇಳಿದ. ಆದರೂ ಒಬ್ಬ ಅಧಿಕಾರಿ ಆತನ ಕೆನ್ನೆಗೆ ಬಲವಾಗಿ ಬಾರಿಸಿದರು. ಆ ಏಟು ರಾಜ್‌ನನ್ನು ಅದೆಷ್ಟು ಭಯಭೀತಗೊಳಿಸಿತೆಂದರೆ, ಆತ ನಡುಗುತ್ತಾ ಮನೆಗೆ ಓಡಿ ಬಂದ. ಪೊಲೀಸರು ನನ್ನನ್ನು ಕರೆದುಕೊಂಡು ಹೋಗುತ್ತಾರೆ, ಜೈಲಿಗೆ ಹಾಕುತ್ತಾರೆ ಎಂದು ಕಿರುಚುತ್ತಾ ಅಡಗಿಕೊಳ್ಳಲು ಯತ್ನಿಸಿದ. ನಾವು ಸಮಾಧಾನ ಮಾಡುವಷ್ಟರಲ್ಲಿ ಐದನೇ ಮಹಡಿಯಿಂದ ಕೆಳಕ್ಕೆ ಜಿಗಿದೇ ಬಿಟ್ಟ ಎಂದರು.
ರಕ್ತದ ಮಡುವಿನಲ್ಲಿ ಬಿದ್ದ ರಾಜ್‌ನನ್ನು ಆಸ್ಪತ್ರೆಗೆ ಕೊಂಡೊಯ್ಯುವಷ್ಟರಲ್ಲಿ ಆತನ ಪ್ರಾಣಪಕ್ಷಿ ಹಾರಿಹೋಗಿತ್ತು. ಅಡುಗೆ ಕೆಲಸ ಮಾಡುವ ತಂದೆ ಮನೋಜ್ ಮಕ್ವಾನಾ ಮತ್ತು ಗೃಹಿಣಿಯಾಗಿರುವ ತಾಯಿ, ಮಗನ ಚಿಕಿತ್ಸೆಗಾಗಿ ಪಡುತ್ತಿದ್ದ ಕಷ್ಟವೆಲ್ಲಾ ಕಣ್ಣೆದುರೇ ಬೂದಿಯಾಯಿತು.

ಪೊಲೀಸರ ವಾದವೇ ಬೇರೆ

ಆದರೆ, ಈ ಘಟನೆಯ ಬಗ್ಗೆ ಪೊಲೀಸರು ಬೇರೆಯದೇ ಕಥೆ ಹೇಳುತ್ತಿದ್ದಾರೆ. ಹೆಚ್ಚುವರಿ ಉಪ ಆಯುಕ್ತ ರಾಜೇಶ್ ದಂಡೋಟಿಯಾ ಅವರ ಪ್ರಕಾರ, ರಾಜ್ ಗೊಂದಲ ಸೃಷ್ಟಿಸುತ್ತಿದ್ದಾನೆ ಎಂಬ ದೂರು ಬಂದ ಹಿನ್ನೆಲೆಯಲ್ಲಿ ಪೊಲೀಸರು ಅಲ್ಲಿಗೆ ಹೋಗಿದ್ದರು. ಆತ ಎರಡು ವರ್ಷಗಳಿಂದ ಮಾನಸಿಕ ಚಿಕಿತ್ಸೆಯಲ್ಲಿದ್ದ ಎಂದು ಕುಟುಂಬವೇ ಹೇಳಿದೆ ಎಂದು ಅವರು ಸಮರ್ಥಿಸಿಕೊಳ್ಳುತ್ತಿದ್ದಾರೆ. ಆದರೆ, ಆ ಕಪಾಳಮೋಕ್ಷದ ಬಗ್ಗೆ ಮಾತ್ರ ಪೊಲೀಸರು ಮೌನ ವಹಿಸಿದ್ದಾರೆ. ಆದರೆ ಈ ಕುರಿತು ಪ್ರಕರಣ ದಾಖಲಿಸಿ ಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾಗಿ ತಿಳಿಸಿದ್ದಾರೆ.

ಗೊಂದಲದ ಪ್ರಶ್ನೆಗಳು

ಒಬ್ಬ ಮಾನಸಿಕ ಅಸ್ವಸ್ಥ ಯುವಕ ಕ್ಷಮೆ ಕೇಳಿದ ಮೇಲೂ ಆತನ ಮೇಲೆ ಕೈ ಮಾಡಬೇಕಿತ್ತೇ? ಪೊಲೀಸರು ಸಂವೇದನಾಶೀಲತೆಯಿಂದ ವರ್ತಿಸಿದ್ದರೆ ಇಂದು ಒಬ್ಬ ಯುವಕ ಬದುಕಿರುತ್ತಿರಲಿಲ್ಲವೇ? ಕಾನೂನು ರಕ್ಷಣೆ ನೀಡಬೇಕಾದವರೇ ಯಮನಂತೆ ಕಂಡಾಗ ಅಸಹಾಯಕರು ಎಲ್ಲಿಗೆ ಹೋಗಬೇಕು? ಎಂಬ ಪ್ರಶ್ನೆಗಳು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬರುತ್ತಿವೆ,(ಏಜನ್ಸೀಸ್​).