ಮುಂಬೈ: ಸಾಮಾಜಿಕ ಜಾಲತಾಣಗಳಲ್ಲಿ ಸದ್ಯ ವಿಡಿಯೋವೊಂದು ಕಾಡ್ಗಿಚ್ಚಿನಂತೆ ಹರಡುತ್ತಿದ್ದು, ನೋಡುಗರಲ್ಲಿ ತೀವ್ರ ಆಕ್ರೋಶ ಮತ್ತು ಚರ್ಚೆಗೆ ಕಾರಣವಾಗಿದೆ. ಚಲಿಸುತ್ತಿರುವ ಬಸ್ನಲ್ಲಿ ತನ್ನ ಪಕ್ಕದಲ್ಲಿ ಕುಳಿತಿದ್ದ ವೃದ್ಧ ವ್ಯಕ್ತಿಯೊಬ್ಬರ ಮೇಲೆ ಯುವತಿಯೊಬ್ಬಳು ಉದ್ದೇಶಪೂರ್ವಕವಾಗಿ ಸುಳ್ಳು ಕಿರುಕುಳದ ಆರೋಪ ಹೊರಿಸಲು ಯತ್ನಿಸುತ್ತಿರುವಂತೆ ಕಾಣುವ ದೃಶ್ಯವಿದು. ಈ ವಿಡಿಯೋ ಕಂಡ ನೆಟ್ಟಿಗರು ಯುವತಿಯ ವರ್ತನೆಯ ವಿರುದ್ಧ ಕಿಡಿಕಾರಿದ್ದು, ಅಮಾಯಕ ವೃದ್ಧನನ್ನು ಸುಳ್ಳು ಕೇಸ್ನಲ್ಲಿ ಸಿಲುಕಿಸುವ ಸಂಚು ನಡೆದಿದೆ ಎಂದು ಆಕ್ರೋಶ ಹೊರಹಾಕಿದ್ದರು. ಆದರೆ, ಇಡೀ ಇಂಟರ್ನೆಟ್ನಲ್ಲಿ ಸಂಚಲನ ಮೂಡಿಸಿದ ಈ ವೈರಲ್ ವಿಡಿಯೋ ಹಿಂದಿನ ಅಸಲಿ ಕಹಾನಿಯೇ ಬೇರೆ! ಇದು ನಿಜ ಜೀವನದ ಘಟನೆಯಲ್ಲ, ಬದಲಾಗಿ ಮುಂಬರುವ ಮರಾಠಿ ಸಿನಿಮಾ 'ಜನಕ್' (Janak) ಚಿತ್ರದ ಪ್ರಚಾರದ ದೃಶ್ಯ ಎಂಬ ಅಚ್ಚರಿಯ ಸತ್ಯಾಂಶ ಈಗ ಬಯಲಾಗಿದೆ.
ಕೆಂಪು ಬಣ್ಣದ ಉಡುಪು ಧರಿಸಿರುವ ಯುವತಿಯೊಬ್ಬಳು ಬಸ್ನಲ್ಲಿ ತನ್ನ ಮೊಬೈಲ್ನಲ್ಲಿ ವಿಡಿಯೋ ಮಾಡಿಕೊಳ್ಳುತ್ತಿರುವುದು ದೃಶ್ಯದಲ್ಲಿದೆ. ಆಕೆಯ ಪಕ್ಕದಲ್ಲೇ ವಯಸ್ಸಾದ ವ್ಯಕ್ತಿಯೊಬ್ಬರು ನಿಂತಿರುತ್ತಾರೆ. ಈ ವೇಳೆ ಯುವತಿ ಪದೇಪದೆ ಅವರ ಹತ್ತಿರಕ್ಕೆ ಹೋಗುತ್ತಾ, ಅವರ ಕೈ ತನ್ನ ದೇಹಕ್ಕೆ ತಾಗುವಂತೆ ಮಾಡುವ ಪ್ರಯತ್ನ ನಡೆಸುತ್ತಿರುವಂತೆ ಕಾಣುತ್ತದೆ. ವೃದ್ಧ ವ್ಯಕ್ತಿಗೆ ಈಕೆಯ ಉದ್ದೇಶದ ಅರಿವಿಲ್ಲದಿರುವುದು ವಿಡಿಯೋದಲ್ಲಿ ಕಂಡುಬರುತ್ತದೆ. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಹಲವರು ಯುವತಿಯ ವಿರುದ್ಧ ಕಿಡಿಕಾರಿದ್ದಾರೆ. ವೃದ್ಧ ವ್ಯಕ್ತಿಯ ವಯಸ್ಸನ್ನೂ ಲೆಕ್ಕಿಸದೆ ಇಂತಹ ಕೃತ್ಯಕ್ಕೆ ಮುಂದಾಗಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾರ್ಯಕರ್ತೆ ದೀಪಿಕಾ ಭಾರದ್ವಾಜ್ ಕೂಡ ಈ ವಿಡಿಯೋವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡು ಪ್ರತಿಕ್ರಿಯಿಸಿದ್ದರು. ಕೇರಳದ ಇನ್ಫ್ಲುಯೆನ್ಸರ್ ಶಿಂಜಿತಾ ಮುಸ್ತಫಾ ಪ್ರಕರಣವನ್ನು ಉಲ್ಲೇಖಿಸಿ ಯುವತಿಯ ವರ್ತನೆಯನ್ನು ಟೀಕಿಸಿದ್ದರು. ವೃದ್ಧ ವ್ಯಕ್ತಿಯ ಕೈ ಸ್ವಲ್ಪ ತಾಗಿದರೂ ಕಿರುಕುಳದ ಆರೋಪ ಮಾಡುವ ಉದ್ದೇಶದಿಂದ ಯುವತಿ ಬೇಕೆಂದೇ ಅವರ ಹತ್ತಿರ ನಿಂತಿರುವಂತೆ ಕಾಣುತ್ತಿದೆ. ಕಡಿಮೆ ವೀಕ್ಷಣೆಗಳಿಗಾಗಿ ಇಂತಹ ಪ್ರಯತ್ನ ಮಾಡುತ್ತಿರುವುದು ಖಂಡನೀಯ ಎಂಬರ್ಥದಲ್ಲಿ ಅವರು ಪೋಸ್ಟ್ ಮಾಡಿದ್ದರು. ಈ ಪೋಸ್ಟ್ ಬಳಿಕ ಚರ್ಚೆ ಮತ್ತಷ್ಟು ತೀವ್ರಗೊಂಡಿತ್ತು. ಆದರೆ, ಕೆಲವೇ ಸಮಯದಲ್ಲಿ ನೆಟ್ಟಿಗರು ವಿಡಿಯೋ ನೈಜ ಘಟನೆಯದ್ದಲ್ಲ, ಮರಾಠಿ ಸಿನಿಮಾ ಜನಕ್ ಚಿತ್ರದ ದೃಶ್ಯ ಎಂದು ಸ್ಪಷ್ಟಪಡಿಸಿದ್ದಾರೆ. ಚಿತ್ರದ ಟ್ರೇಲರ್ ಅನ್ನೂ ಹಂಚಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಪ್ರತಿಯೊಂದು ವಿಡಿಯೋವನ್ನೂ ಸತ್ಯವೆಂದು ನಂಬಬಾರದು ಎಂಬ ಎಚ್ಚರಿಕೆಯನ್ನು ಈ ಸಿನಿಮಾ ನೀಡುತ್ತದೆ. ತಪ್ಪು ಮಾಹಿತಿಯುಳ್ಳ ವಿಡಿಯೋಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿನ ಏಕಪಕ್ಷೀಯ ತೀರ್ಪುಗಳು ವ್ಯಕ್ತಿಯ ಬದುಕಿನ ಮೇಲೆ ಎಂತಹ ಪರಿಣಾಮ ಬೀರಬಹುದು ಎಂಬುದನ್ನು ಕಥೆಯ ಮೂಲಕ ತೋರಿಸಲಾಗಿದೆ. ವಿಡಿಯೋದಲ್ಲಿರುವ ಕಲಾವಿದರನ್ನು ಅನುಷ್ಕಾ ಪಿಂಪುಟ್ಕರ್ ಮತ್ತು ಅವಿನಾಶ್ ನಾರ್ಕರ್ ಎಂದು ಗುರುತಿಸಲಾಗಿದೆ. ಸಿನಿಮಾದ ದೃಶ್ಯವೊಂದು ನೈಜ ಘಟನೆಯಂತೆ ವೈರಲ್ ಆಗಿರುವುದು ಈ ಚರ್ಚೆಗೆ ಮತ್ತಷ್ಟು ಕಾರಣವಾಗಿದೆ.
ಈ ವಿಡಿಯೋ ವೈರಲ್ ಆಗಲು ಕೇರಳದ ಯು. ದೀಪಕ್ ಪ್ರಕರಣವೂ ಪ್ರಮುಖ ಕಾರಣವಾಗಿದೆ. ಲೈಂಗಿಕ ಕಿರುಕುಳದ ಆರೋಪದ ವಿಡಿಯೋ ವೈರಲ್ ಆದ ಬಳಿಕ ದೀಪಕ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಂಜಿತಾ ಮುಸ್ತಫಾ ಅವರನ್ನು ಜನವರಿ 21ರಂದು ವಡಕರದಲ್ಲಿರುವ ಸಂಬಂಧಿಕರ ಮನೆಯಿಂದ ಪೊಲೀಸರು ಬಂಧಿಸಿದ್ದರು. ದೀಪಕ್ ಕುಟುಂಬದವರು, ಸಾಮಾಜಿಕ ಜಾಲತಾಣಗಳಲ್ಲಿ ನಡೆದ ಅವಮಾನ ಮತ್ತು ವ್ಯಕ್ತಿತ್ವಕ್ಕೆ ಧಕ್ಕೆ ತರುವ ಆರೋಪಗಳು ಆತನಿಗೆ ತೀವ್ರ ಮಾನಸಿಕ ಒತ್ತಡ ಉಂಟುಮಾಡಿದ್ದವು ಎಂದು ಆರೋಪಿಸಿದ್ದರು. ಹೀಗಾಗಿ, ಜನಕ್ ಚಿತ್ರದ ದೃಶ್ಯ ನೈಜ ಘಟನೆಯೆಂದು ತಪ್ಪಾಗಿ ಹರಿದಾಡಿರುವುದು ಮತ್ತೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋಗಳನ್ನು ಪರಿಶೀಲಿಸದೆ ಹಂಚಿಕೊಳ್ಳುವ ಅಪಾಯವನ್ನು ಮುನ್ನೆಲೆಗೆ ತಂದಿದೆ.