ಅಂದು ನಾನು ಹೇಳಿದ್ದೆಲ್ಲ ತಪ್ಪು...ಭಾರತೀಯ ಸೇನೆಯ ಮುಂದೆ ಮಂಡಿಯೂರಿದ ನಾನು ಜೆನ್​ಜೀ ಎಂದು ಕೂಗಾಡಿದ್ದ ಯುವತಿ! Gen Z  
ದೇಶ

ಅಂದು ನಾನು ಹೇಳಿದ್ದೆಲ್ಲ ತಪ್ಪು...ಭಾರತೀಯ ಸೇನೆಯ ಮುಂದೆ ಮಂಡಿಯೂರಿದ ನಾನು ಜೆನ್​ಜೀ ಎಂದು ಕೂಗಾಡಿದ್ದ ಯುವತಿ! Gen Z

ಪ್ರಮುಖ ಮುಖ್ಯಾಂಶಗಳು

  • ಲಡಾಕ್‌ನಲ್ಲಿ ಭದ್ರತಾ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿ ವೈರಲ್ ಆಗಿದ್ದ ಯುವತಿ ಭಾರತೀಯ ಸೇನೆ ಹಾಗೂ ಪೊಲೀಸರ ಬಳಿ ಕ್ಷಮೆಯಾಚನೆ
  • ಗಂಟೆಗಟ್ಟಲೆ ರಸ್ತೆಯಲ್ಲಿ ಸಿಲುಕಿದ್ದರಿಂದ ಉಂಟಾದ ಅಸಮಾಧಾನ ಹಾಗೂ ನಿರಾಶೆಯಿಂದ ಆ ರೀತಿ ವರ್ತಿಸಬೇಕಾಯಿತು ಎಂದು ಸ್ಪಷ್ಟನೆ
  • ಸಶಸ್ತ್ರ ಪಡೆಗಳಿಗೆ ಅವಮಾನ ಮಾಡುವ ಅಥವಾ ಪ್ರಚಾರ ಪಡೆಯುವ ಯಾವುದೇ ಉದ್ದೇಶ ತಮಗಿರಲಿಲ್ಲ ಎಂದು ಯುವತಿ ಸ್ಪಷ್ಟನೆ
  • ಯುವತಿಯ ಕ್ಷಮೆಯಾಚನೆಯೊಂದಿಗೆ ಲಡಾಕ್ ರಸ್ತೆ ತಡೆ ವಿವಾದಕ್ಕೆ ಅಧಿಕೃತವಾಗಿ ತೆರೆಬಿದ್ದಿದೆ
ನವದೆಹಲಿ: ಲಡಾಕ್‌ನಲ್ಲಿ ರಸ್ತೆ ತಡೆ ವೇಳೆ ಭದ್ರತಾ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ 25 ವರ್ಷದ ಯುವತಿ ( Gen Z ), ಭಾರತೀಯ ಸೇನೆ ( Indian Army ), ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಕ್ ಪೊಲೀಸರ ಬಳಿ ಕ್ಷಮೆಯಾಚಿಸಿದ್ದಾಳೆ. ಯಾವುದೇ ಕಾರಣ ತಿಳಿಯದೇ ಗಂಟೆಗಟ್ಟಲೆ ರಸ್ತೆಯಲ್ಲಿ ಸಿಲುಕಿಕೊಂಡಿದ್ದರಿಂದ ತುಂಬಾ ಅಸಮಾಧಾನದಿಂದ ಹಾಗೂ ನಿರಾಶೆಯಿಂದ ತಾನು ಆ ರೀತಿ ವರ್ತಿಸಬೇಕಾಯಿತು ಎಂದು ಯುವತಿ ಸ್ಪಷ್ಟಪಡಿಸಿದ್ದಾಳೆ.
ವಿಡಿಯೋ ವೈರಲ್ ಆದ ಬಳಿಕ ಯುವತಿಯು ತನ್ನ ಹೇಳಿಕೆಗಳ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದು, ಸಶಸ್ತ್ರ ಪಡೆಗಳಿಗೆ ಅವಮಾನ ಮಾಡುವ ಉದ್ದೇಶವಾಗಲಿ ಅಥವಾ ಈ ಘಟನೆಯ ಮೂಲಕ ಪ್ರಚಾರ ಪಡೆಯುವ ಯೋಚನೆಯಾಗಲಿ ತಮಗಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನಾನು ಭಾರತೀಯ ಸೇನೆಯನ್ನು ಅಪಾರವಾಗಿ ಗೌರವಿಸುತ್ತೇನೆ. ನಾನು ಆಡಿದ ಮಾತುಗಳಿಂದ ಅವರಿಗೆ ಬೇಸರವಾಗಬಹುದು ಎಂದು ನಾನು ಕನಸಿನಲ್ಲೂ ಊಹಿಸಿರಲಿಲ್ಲ. ಅಂದು ನಾವು ಲಡಾಕ್‌ನಿಂದ ದೆಹಲಿಗೆ ಪ್ರಯಾಣಿಸುತ್ತಿದ್ದೆವು. ಅಲ್ಲಿ ವಿಐಪಿ ಸಂಚಾರವಿರುತ್ತದೆ ಎಂಬುದು ನಮಗೆ ತಿಳಿದಿರಲಿಲ್ಲ. ನಾವು ಬೆಳಗ್ಗೆ ಮೂರರಿಂದ ನಾಲ್ಕು ಗಂಟೆಗಳ ಕಾಲ ಕಾಯ್ದೆವು ಮತ್ತು ಇನ್ನಷ್ಟು ಸಮಯ ಎಷ್ಟು ತಡವಾಗಬಹುದು ಎಂದು ಸೈನಿಕರನ್ನು ಕೇಳಿದಾಗ, ಅವರು ಮತ್ತೊಂದು ಗಂಟೆ ಎಂದು ಹೇಳಿದರು. ಇದರಿಂದ ಭಾರಿ ನಿರಾಶೆಗೊಂಡೆವು ಮತ್ತು ಅಸಮಾಧಾನದಿಂದ ಅನುಚಿತವಾಗಿ ವರ್ತಿಸಿದೆವು ಎಂದು ಯುವತಿ ಎನ್​ಡಿವಿಗೆ ತಿಳಿಸಿದ್ದಾಳೆ.
ವಿಡಿಯೋದಲ್ಲಿ ನಾನು ಬಳಸಿದ ಪದಗಳು ಸೂಕ್ತವಾಗಿರಲಿಲ್ಲ ಎಂಬುದನ್ನು ಆ ಯುವತಿ ಒಪ್ಪಿಕೊಂಡಿದ್ದು, ಆಕ್ರೋಶದಲ್ಲಿ ಆಡಿದ ಮಾತುಗಳು ಯಾವುದೂ ಸರಿಯಾಗಿರಲಿಲ್ಲ ಮತ್ತು ಅದು ತಪ್ಪು ಎಂದು ಸ್ಪಷ್ಟಪಡಿಸಿದ್ದಾಳೆ. ವೈರಲ್ ಆದ ವಿಡಿಯೋದಿಂದ ತಮಗೆ ತೀವ್ರ ಮಾನಸಿಕ ನೋವು ಉಂಟಾಗಿದ್ದು, ಇಷ್ಟು ದೊಡ್ಡ ಮಟ್ಟದಲ್ಲಿ ವೈರಲ್ ಆಗುತ್ತದೆ ಎಂದು ನನಗೆ ತಿಳಿದಿರಲಿಲ್ಲ ಅಂತಾ ಆ ಯುವತಿ ಹೇಳಿದ್ದಾಳೆ.
ದೇಶದ ಜನತೆ, ಭಾರತೀಯ ಸೇನೆ, ಜಮ್ಮು ಮತ್ತು ಕಾಶ್ಮೀರ ಪೊಲೀಸ್, ಲಡಾಕ್ ಪೊಲೀಸ್ ಹಾಗೂ ವಿಶೇಷವಾಗಿ ಒಮರ್ ಅಬ್ದುಲ್ಲಾ ಅವರ ಬಳಿ ಮತ್ತೊಮ್ಮೆ ಕ್ಷಮೆ ಕೋರಿರುವ ಯುವತಿ, ತನ್ನಿಂದಾಗಿ ಅನೇಕರಿಗೆ ನೋವಾಗಿರುವುದಕ್ಕೆ ತೀವ್ರ ಪಶ್ಚಾತಾಪವಿದೆ ಎಂದು ತಿಳಿಸಿದ್ದಾರೆ. ವೈರಲ್ ಆದ ತುಣುಕಿನಲ್ಲಿ ಘಟನೆಗೆ ಮುನ್ನ ನಡೆದ ಸಂಪೂರ್ಣ ಪರಿಸ್ಥಿತಿ ಸರಿಯಾಗಿ ಬಿಂಬಿತವಾಗಿಲ್ಲ ಎಂದು ಯುವರಿ ಸ್ಪಷ್ಟಪಡಿಸಿದ್ದಾಳೆ.

ರಸ್ತೆಯಲ್ಲಿ ಸುಮಾರು ಆರು ಗಂಟೆಗಳ ಕಾಲ ಕಾಯುವಂತಾಗಿದ್ದರಿಂದ ಬೇಸತ್ತು ಮುಂದೇನು ನಡೆಯುತ್ತಿದೆ ಎಂದು ನೋಡಲು ಹೋದಾಗ ತಾನು ಪರಿಸ್ಥಿತಿಯ ನಡುವೆ ಸಿಲುಕಿಕೊಂಡೆ ಎಂದು ವಿವರಿಸಿದ್ದಾರೆ. ತಾನು ರೋಗಿಯಾಗಿದ್ದು, ವಾಶ್‌ರೂಮ್ ಬಳಸಲೂ ಆಗದೆ, ವಿಐಪಿ ಸಂಚಾರದಿಂದಾಗಿ ತೀವ್ರ ತೊಂದರೆ ಹಾಗೂ ನಿರಾಶೆ ಅನುಭವಿಸಿದ್ದರಿಂದ ಆ ರೀತಿ ಪ್ರಶ್ನಿಸಬೇಕಾಯಿತು ಎಂದು ತಿಳಿಸಿದ್ದಾರೆ.

ಏನಿದು ವಿವಾದ?

ವಿಐಪಿ ಸಂಚಾರ ಇರುವುದು ಗೊತ್ತಾಗದೇ ಯುವತಿ ಮಂತ್ರಿಗಳು ಅಲ್ಲಿಂದ ಹೇಗೆ ತೆರಳಿದರು ಎಂದು ಪ್ರಶ್ನಿಸುತ್ತಾ, ತಾವು ಜೆನ್​ಜೀ ಪೀಳಿಗೆಯವರಾಗಿದ್ದು ಈ ರೀತಿಯ ಅಸಂಬದ್ಧತೆಯನ್ನು ಸಹಿಸುವುದಿಲ್ಲ ಎಂದು ವಿಡಿಯೋ ಮಾಡಿ ಯುವತಿ ಆಕ್ರೋಶ ಹೊರಹಾಕಿದ್ದಳು. ಟ್ರಾವೆಲ್ ಮಾಡಲು ಹಣ ಕೊಟ್ಟು ಬಂದು ಇಂತಹ ಕಷ್ಟಗಳನ್ನು ನಾವು ಅನುಭವಿಸಬೇಕೇ ಎಂದು ಪ್ರಶ್ನಿಸಿದ್ದಳು. ಇಷ್ಟೊಂದು ಪ್ರವಾಸಿಗರನ್ನು ಈ ರೀತಿ ನಿಲ್ಲಿಸಿಕೊಂಡು, ಮಂತ್ರಿಗಳು ಸೇರಿದಂತೆ ಕೆಲವರಿಗೆ ಮಾತ್ರ ಮುಂದೆ ಹೋಗಲು ಅವಕಾಶ ನೀಡಿದ್ದೇಕೆ ಎಂದು ಆ ಯುವತಿ ಭದ್ರತಾ ಸಿಬ್ಬಂದಿಯನ್ನು ಪ್ರಶ್ನಿಸಿದ್ದಳು. ಈ ವೇಳೆ ಇತರೆ ಪ್ರವಾಸಿಗರು ಸಹ ಆಕೆಗೆ ಬೆಂಬಲ ವ್ಯಕ್ತಪಡಿಸಿದ್ದು ವಿಡಿಯೋದಲ್ಲಿ ದಾಖಲಾಗಿತ್ತು.
ಜುಲೈ 26 ರಂದು ಕಾರ್ಗಿಲ್ ವಿಜಯ್ ದಿವಸ್ ಸಂದರ್ಭದಲ್ಲಿ ಭದ್ರತಾ ವ್ಯವಸ್ಥೆಗಾಗಿ ರಸ್ತೆಯನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದ್ದ ವೇಳೆ ಈ ವಿಡಿಯೋ ಸೆರೆಹಿಡಿಯಲಾಗಿದೆ ಎಂದು ಲಡಾಕ್ ಪೊಲೀಸರು ತಿಳಿಸಿದ್ದಾರೆ. ಡ್ರಾಸ್‌ನ ಮಿನಿಮರ್ಗ್ ಚೆಕ್ ಪೋಸ್ಟ್ ಬಳಿ ಮಿನಿಮರ್ಗ್-ಜೋಜಿ ಲಾ-ಸೋನಮಾರ್ಗ್ ರಸ್ತೆಯಲ್ಲಿ ಸಂಚಾರವನ್ನು ತಡೆಹಿಡಿಯಲಾಗಿದ್ದ ಸ್ಥಳದಲ್ಲಿ ಈ ಘಟನೆ ಸಂಭವಿಸಿತ್ತು. ವಿಡಿಯೋ ವೈರಲ್​ ಆಗಿ, ಯುವತಿಯ ನಡೆಯ ವಿರುದ್ಧ ಸಾಕಷ್ಟು ಟೀಕೆಗಳು ವ್ಯಕ್ತವಾಗಿತ್ತು. ಅಂತಿಮವಾಗಿ ಆ ಯುವತಿ ಕ್ಷಮೆಯಾಚಿಸಿದ್ದು, ವಿವಾದಕ್ಕೆ ತೆರೆಎಳೆದಿದ್ದಾಳೆ, (ಏಜೆನ್ಸೀಸ್​).