ಹೈದರಾಬಾದ್: ಮನೆಯಲ್ಲಿ ಬೆಕ್ಕನ್ನು ಸಾಕುವ ವಿಚಾರಕ್ಕೆ ಸಂಬಂಧಿಸಿದಂತೆ ಕುಟುಂಬಸ್ಥರೊಂದಿಗೆ ನಡೆದ ಸರಣಿ ಜಗಳದಿಂದ ಬೇಸತ್ತ 23 ವರ್ಷದ ಯುವ ವೈದ್ಯೆಯೊಬ್ಬರು (Doctor) ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ತೆಲಂಗಾಣದ ಹೈದರಾಬಾದ್‌ನ ಅಲ್ವಾಲ್‌ನಲ್ಲಿ ಸಂಭವಿಸಿದೆ.
ಮೃತ ವೈದ್ಯೆಯನ್ನು ಟಿ. ಪ್ರಿನ್ಸಿ ಅಲಿಯಾಸ್ ಶ್ರೇಷ್ಠ (23) ಎಂದು ಗುರುತಿಸಲಾಗಿದೆ. ಇವರು ಇತ್ತೀಚೆಗಷ್ಟೇ ವೈದ್ಯಕೀಯ ಪದವಿ (MBBS) ಮುಗಿಸಿ, ಸ್ನಾತಕೋತ್ತರ (PG) ಪ್ರವೇಶ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದರು. ಪ್ರಿನ್ಸಿ ತನ್ನ ತಾಯಿ ಕುಸುಮಲತಾ ಮತ್ತು ಅಜ್ಜಿಯೊಂದಿಗೆ ವಾಸವಾಗಿದ್ದರು. ಕೆಲವು ವಾರಗಳ ಹಿಂದೆ ಪ್ರಿನ್ಸಿ ಆಸೆಯಿಂದ ಬೆಕ್ಕೊಂದನ್ನು ಮನೆಗೆ ತಂದಿದ್ದರು. ಆದರೆ, ಬೆಕ್ಕು ಬಂದಾಗಿನಿಂದ ಪ್ರಿನ್ಸಿಗೆ ಕೆಮ್ಮು ಮತ್ತು ಶೀತದ ಸಮಸ್ಯೆ ಕಾಣಿಸಿಕೊಂಡಿತ್ತು.
ಕುಟುಂಬದ ಆಕ್ಷೇಪ
ಮಗಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ ತಾಯಿ ಮತ್ತು ಅಜ್ಜಿ, ಬೆಕ್ಕನ್ನು ಮನೆಯಲ್ಲಿ ಇಟ್ಟುಕೊಳ್ಳಲು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಇದರಿಂದಾಗಿ ಮನೆಯಲ್ಲಿ ಪ್ರತಿದಿನ ಜಗಳ ನಡೆಯುತ್ತಿತ್ತು. ಬೆಕ್ಕನ್ನು ಬಿಟ್ಟುಕೊಡಲು ಪ್ರಿನ್ಸಿ ಒಪ್ಪದ ಕಾರಣ ಮಾನಸಿಕವಾಗಿ ನೊಂದಿದ್ದರು ಎನ್ನಲಾಗಿದೆ.
ಒಂಟಿಯಾಗಿದ್ದಾಗ ನಡೆದ ದುರಂತ
ಶುಕ್ರವಾರ ಸಂಜೆ ತಾಯಿ ಮತ್ತು ಅಜ್ಜಿ ಕೆಲಸದ ನಿಮಿತ್ತ ಹೊರಗಡೆ ಹೋಗಿದ್ದಾಗ ಪ್ರಿನ್ಸಿ ಮನೆಯಲ್ಲಿ ಒಬ್ಬರೇ ಇದ್ದರು. ಈ ವೇಳೆ ಅವರು ತಮ್ಮ ಕೋಣೆಯ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕುಟುಂಬಸ್ಥರು ಮನೆಗೆ ಮರಳಿದಾಗ ಈ ಘೋರ ದೃಶ್ಯ ಕಂಡುಬಂದಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಮೃತದೇಹವನ್ನು ಗಾಂಧಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.
ಅಲ್ವಾಲ್ ಪೊಲೀಸರು ಈ ಕುರಿತು 'ಅನುಮಾನಾಸ್ಪದ ಸಾವು' ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. "ಆರಂಭಿಕ ತನಿಖೆಯಲ್ಲಿ ಕೌಟುಂಬಿಕ ಕಲಹವೇ ಕಾರಣ ಎಂದು ತಿಳಿದುಬಂದಿದೆ, ತನಿಖೆ ಮುಂದುವರಿದಿದೆ" ಎಂದು ಸಬ್ ಇನ್ಸ್‌ಪೆಕ್ಟರ್ ದೇವೇಂದ್ರ ತಿಳಿಸಿದ್ದಾರೆ,(ಏಜೆನ್ಸೀಸ್).