ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ
ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ(Mamata Banerjee) ಶನಿವಾರ(ಜು. 04) ತಮ್ಮ ಪಕ್ಷದ ಬಂಡಾಯ ನಾಯಕರಿಗೆ ಸವಾಲು ಹಾಕಿದ್ದು, ಪಕ್ಷವನ್ನು ವಶಪಡಿಸಿಕೊಳ್ಳಬೇಕಾದರೆ ನೀವು ನನ್ನನ್ನು ಕೊಲ್ಲಬೇಕು ಎಂದು ಗುಡುಗಿದ್ದಾರೆ.
ಈ ಕುರಿತು ವಿಡಿಯೋ ಮೂಲಕ ಮಾತನಾಡಿರುವ ಅವರು, ಬಂಡಾಯ ನಾಯಕರನ್ನು ದೇಶದ್ರೋಹಿಗಳು ಎಂದು ಕರೆದಿದ್ದು, ಮೂಲ ಪಕ್ಷದ ಚಿಹ್ನೆಯು ತನಗೆ ನಿಷ್ಠರಾಗಿರುವ ಬಣದೊಂದಿಗೆ ಉಳಿಯುತ್ತದೆ. ಪಕ್ಷದ ಚಿಹ್ನೆ ಎಲ್ಲಿಗೂ ಹೋಗುವುದಿಲ್ಲ. ನೀವು ನನ್ನನ್ನು ತಡೆಯಲು ಬಯಸಿದರೆ, ನೀವು ನನ್ನನ್ನು ಕೊಲ್ಲಬೇಕು ಎಂದು ಖಡಕ್ ಆಗಿಯೇ ಹೇಳಿದ್ದಾರೆ.
ಇದೇ ವೇಳೆ ತನ್ನೊಂದಿಗೆ ದೃಢವಾಗಿ ನಿಂತಿರುವ ಪಕ್ಷದ ಸದಸ್ಯರಿಗೆ ಧನ್ಯವಾದ ಹೇಳಿರುವ ಮಮತಾ ಬ್ಯಾನರ್ಜಿ, ಪಕ್ಷದೊಂದಿಗೆ ಉಳಿದಿರುವ ಪಕ್ಷದ ಸದಸ್ಯರಿಗೆ ನಾನು ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ಕಳೆದ ಕೆಲವು ದಿನಗಳಿಂದ, ನನ್ನ ಸಹೋದ್ಯೋಗಿಗಳು ಮತ್ತು ಪಕ್ಷದ ವಕ್ತಾರರು ಸಾರ್ವಜನಿಕ ಹೇಳಿಕೆಗಳನ್ನು ನೀಡುತ್ತಿದ್ದಾರೆ, ಆದರೆ ನಾನು ಮೌನವಾಗಿದ್ದೇನೆ. ಕೆಲವೊಮ್ಮೆ ಮೌನವು ಪದಗಳಿಗಿಂತ ಹೆಚ್ಚಿನದನ್ನು ಹೇಳುತ್ತದೆ ಎಂದಿದ್ದಾರೆ.
ಪಕ್ಷದ ರಾಜ್ಯಾಧ್ಯಕ್ಷೆ ಚಂದ್ರಿಮಾ ಭಟ್ಟಾಚಾರ್ಯ ರಾಜೀನಾಮೆ ಕುರಿತು ಪ್ರತಿಕ್ರಿಯಿಸಿದ ಅವರು, ಚಂದ್ರಿಮಾ ಭಟ್ಟಾಚಾರ್ಯ ಇಂದು ರಾಜೀನಾಮೆ ನೀಡಿದ್ದಾರೆ. ಅವರ ಮಗ ಹಿಂದೆ ನಮ್ಮ ವಿರೋಧಿ ಬಣದೊಂದಿಗೆ ಕೈಜೋಡಿಸಿದ್ದರಿಂದ ಅವರು ರಾಜೀನಾಮೆ ನೀಡುವುದಾಗಿ ವಾಸ್ತವ ಪರಿಸ್ಥಿತಿಯ ಬಗ್ಗೆ ನನಗೆ ಈಗಾಗಲೇ ತಿಳಿಸಿದ್ದರು ಎಂದು ಹೇಳಿದ್ದಾರೆ.
ಪಕ್ಷದ ಚಿಹ್ನೆಯನ್ನು ನಾನು ನೀಡಿದ್ದೇನೆ. 2026ರ ಚುನಾವಣೆಗೆ ನಿಮ್ಮ ನಾಮಪತ್ರಕ್ಕೆ ನಾನು ಸಹಿ ಹಾಕಿದ್ದೆ. ಚುನಾವಣೆಯ ಎರಡು ತಿಂಗಳೊಳಗೆ ನೀವು ಹೇಗೆ ದೇಶದ್ರೋಹಿಗಳಾದಿರಿ? ಅದಕ್ಕೊಂದು ಮಿತಿ ಇರಬೇಕು. ಆ ದೇಶದ್ರೋಹಿಗಳು ಬಿಜೆಪಿಯ ಇಚ್ಛೆಯಂತೆ ವರ್ತಿಸುತ್ತಿದ್ದಾರೆ. ನಾನು ಅವರಿಗೆ ನೇರವಾಗಿ ಬಿಜೆಪಿಗೆ ಸೇರಲು ಹೇಳುತ್ತೇನೆ. ಟಿಎಂಸಿಯ ಸಿದ್ಧಾಂತ ಬಿಜೆಪಿ ವಿರೋಧಿ. ನೆನಪಿಡಿ, ನಾನು ಇನ್ನೂ ಜೀವಂತವಾಗಿದ್ದೇನೆ ಎಂದು ಬಂಡಾಯ ಶಾಸಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಾನು ಪಕ್ಷ ತೊರೆಯುತ್ತಿರುವವರನ್ನು ದೂಷಿಸುವುದಿಲ್ಲ. ಅವರು ಒತ್ತಡದಲ್ಲಿದ್ದಾರೆಂದು ನನಗೆ ತಿಳಿದಿದೆ. ಆದರೆ ನಾನು ಅಥವಾ ನನ್ನ ಪಕ್ಷ ಬಿಜೆಪಿಯ ಮುಂದೆ ತಲೆಬಾಗುವುದಿಲ್ಲ. ತಮ್ಮ ನಿವಾಸದಿಂದ ಕಾರ್ಯನಿರ್ವಹಿಸುತ್ತಿರುವ ತೃಣಮೂಲ ಕಾಂಗ್ರೆಸ್ ಕಚೇರಿ ಇನ್ನು ಮುಂದೆ ಪಕ್ಷದ ಪ್ರಧಾನ ಕಚೇರಿಯಾಗಿ ಕಾರ್ಯನಿರ್ವಹಿಸಲಿದೆ. ಮದನ್ ಮಿತ್ರ ಮತ್ತು ಕುನಾಲ್ ಘೋಷ್ ಅವರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿಗಳಾಗಿ ನೇಮಕ ಮಾಡಿರುವುದಾಗಿ ಇದೇ ವೇಳೆ ಘೋಷಿಸಿದ್ದಾರೆ (ಏಜೆನ್ಸೀಸ್).
ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಅಧಿಕಾರ ಕಳೆದುಕೊಂಡ ಬಳಿಕ ತೃಣಮೂಲ ಕಾಂಗ್ರೆಸ್ನಲ್ಲಿ ಬಂಡಾಯ ಸೃಷ್ಟಿಯಾಗಿದ್ದು, 80 ಶಾಸಕರು ಪಕ್ಷ ತೊರೆದು ಋತಬ್ರತ ಬ್ಯಾನರ್ಜಿ ನೇತೃತ್ವದಲ್ಲಿ ಪ್ರತ್ಯೇಕ ಗುಂಪನ್ನು ರಚಿಸಿಕೊಂಡಿದ್ದಾರೆ. ಅದೇ ರೀತಿ ಲೋಕಸಭೆ 20 ಸಂಸದರು ಸಹ ಎನ್ಸಿಪಿಐ ಜೊತೆ ವಿಲೀನಗೊಂಡು ಎನ್‌ಡಿಎಗೆ ಬೆಂಬಲ ಘೋಷಿಸಿದ್ದಾರೆ (ಏಜೆನ್ಸೀಸ್).