Supreme Court rejects DMK plea
ನವದೆಹಲಿ: ಕರೂರ್ ತುಳಿತದ ಪ್ರಕರಣದ ಸಂತ್ರಸ್ತರ ಕುಟುಂಬಗಳನ್ನು ಭೇಟಿ ಮಾಡದಂತೆ ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಮತ್ತು ತಮಿಳಗ ವೆಟ್ರಿ ಕಳಗಂ ಪಕ್ಷದ ಇತರ ನಾಯಕರಿಗೆ ನಿರ್ಬಂಧ ಹೇರಬೇಕೆಂದು ಕೋರಿ ದ್ರಾವಿಡ ಮುನ್ನೇತ್ರ ಕಳಗಂ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಒಳಪಡಿಸಲು ಸುಪ್ರೀಂ ಕೋರ್ಟ್ ಕಠಿಣ ಪದಗಳಲ್ಲಿ ನಿರಾಕರಿಸಿದೆ. ಈ ನಾಯಕರ ಭೇಟಿಯು ಪ್ರಕರಣದ ಸಾಕ್ಷಿಗಳ ಮೇಲೆ ಪ್ರಭಾವ ಬೀರಬಹುದು ಎಂಬ ಡಿಎಂಕೆ ವಾದಕ್ಕೆ ನ್ಯಾಯಾಲಯವು ತೀವ್ರ ತರಾಟೆಗೆ ತೆಗೆದುಕೊಂಡಿದೆ.
ನ್ಯಾಯಮೂರ್ತಿ ಕೆ.ವಿ. ವಿಶ್ವನಾಥನ್ ಮತ್ತು ನ್ಯಾಯಮೂರ್ತಿ ಅಲೋಕ್ ಆರಾಧೆ ಅವರಿದ್ದ ಪೀಠವು ಡಿಎಂಕೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿ, ಡಿಎಂಕೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿತು.
ನಾವು ನಿಯಂತ್ರಿಸೋದು ಹೇಗೆ?
ರಾಜ್ಯದ ಮುಖ್ಯಮಂತ್ರಿ ಗ್ರಾಮಕ್ಕೆ ಭೇಟಿ ನೀಡುತ್ತಾರೆ ಎಂದರೆ ಅದನ್ನು ತಡೆಯೋದು ಹೇಗೆ? ತುಳಿತಕ್ಕೆ ಒಳಗಾದ ಸಂತ್ರಸ್ತರ ಕುಟುಂಬಗಳನ್ನು ಭೇಟಿ ಮಾಡುವುದು ಸಾಕ್ಷಿಗಳ ಮೇಲೆ ಪ್ರಭಾವ ಬೀರಿದಂತೆ ಹೇಗೆ ಆಗುತ್ತದೆ?. ನೀವು ಹೇಳೋಕೆ ಹೊರಟಿರುವುದಾದರೂ ಏನೂ ಮುಖ್ಯಮಂತ್ರಿಯೊಬ್ಬರು ಏನು ಮಾಡಬೇಕೆಂದು ಸುಪ್ರೀಂ ಕೋರ್ಟ್ ನಿರ್ದೇಶಿಸಬೇಕೆಂದು ನೀವು ಬಯಸುತ್ತೀರಾ?" ಎಂದು ಪೀಠವು ಡಿಎಂಕೆ ಪರ ವಕೀಲರನ್ನು ಪ್ರಶ್ನಿಸಿತು.
ಅರ್ಜಿ ಹಿಂಪಡೆದ ಡಿಎಂಕೆ
ಒಂದು ವೇಳೆ ಅರ್ಜಿಯನ್ನು ಮುಂದುವರೆಸಲು ಒತ್ತಾಯಿಸಿದರೆ ಅರ್ಜಿ ವಜಾಗೊಳಿಸುವುದಾಗಿ ಎಚ್ಚರಿಕೆ ಕೊಟ್ಟಿತು. ನ್ಯಾಯಾಲಯದ ಈ ಕಠಿಣ ಅವಲೋಕನಗಳ ನಂತರ, ಡಿಎಂಕೆ ಅರ್ಜಿಯನ್ನು ಹಿಂಪಡೆಯಲು ಒಪ್ಪಿಕೊಂಡಿತು. ಇದರಿಂದಾಗಿ ಅರ್ಜಿಯನ್ನು ಹಿಂಪಡೆಯಲಾಗಿದೆ ಎಂದು ಘೋಷಿಸಿ ವಜಾಗೊಳಿಸಲಾಯಿತು. ಮುಂಚಿತವಾಗಿ, ಸೋಮವಾರದಂದು ಸುಪ್ರೀಂ ಕೋರ್ಟ್ ಈ ಅರ್ಜಿಯ ತುರ್ತು ವಿಚಾರಣೆಗೆ ಒಪ್ಪಿಗೆ ನೀಡಿತ್ತು ಎಂಬುದು ಗಮನಾರ್ಹ.
ಡಿಎಂಕೆ ಅರ್ಜಿಯಲ್ಲೇನಿತ್ತು?
ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಮತ್ತು ಸಚಿವ ಆಧವ್ ಅರ್ಜುನ ಸೇರಿದಂತೆ ತಮಿಳುನಾಡು ಸಚಿವರು ಹಾಗೂ ಟಿವಿಕೆ ನಾಯಕರು ಸಾರ್ವಜನಿಕವಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದು ಕರೂರ್ ತುಳಿತದ ಪ್ರಕರಣದ ಪ್ರಮುಖ ಸಾಕ್ಷಿಗಳ ಮೇಲೆ ಪ್ರಭಾವ ಬೀರಬಹುದು ಮತ್ತು ರಾಜಕೀಯ ವಿರೋಧಿಗಳ ವಿರುದ್ಧ ಸುಳ್ಳು ಆರೋಪಗಳನ್ನು ಹೊರಿಸಲು ಕಾರಣವಾಗಬಹುದು ಎಂದು ಡಿಎಂಕೆ ತನ್ನ ಅರ್ಜಿಯಲ್ಲಿ ಆರೋಪಿಸಿತ್ತು.
ಕರೂರು ಕಾಲ್ತುಳಿತ
ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಸಿ. ಜೋಸೆಫ್ ವಿಜಯ್ ಅವರು ತಮ್ಮ ಮೊದಲ ಅಧಿಕೃತ ಜಿಲ್ಲಾ ಪ್ರವಾಸಕ್ಕಾಗಿ ಕರೂರ್ ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಸೆಪ್ಟೆಂಬರ್ 27 ರಂದು ನಡೆದ ಕರೂರ್ ತುಳಿತದ ದುರಂತದಲ್ಲಿ 41 ಜನರು ಪ್ರಾಣ ಕಳೆದುಕೊಂಡಿದ್ದರು. ಈ ಭೀಕರ ದುರಂತದಲ್ಲಿ ಮಡಿದವರ ಕುಟುಂಬಗಳನ್ನು ಭೇಟಿ ಮಾಡಲು ಅವರು ಯೋಜಿಸಿದ್ದು, ಈ ಕ್ರಮವು ರಾಜಕೀಯವಾಗಿ ಅತ್ಯಂತ ಸಾಂಕೇತಿಕ ಹಾಗೂ ಮಹತ್ವದ ಹೆಜ್ಜೆಯಾಗಿ ಹೊರಹೊಮ್ಮಿದೆ, (ಏಜೆನ್ಸೀಸ್).