ಮುಖ್ಯಮಂತ್ರಿಗಳ ಎದುರು ಈ ರೀತಿನಾ ಡ್ರೆಸ್ ಮಾಡೋದು? ಯುವ ನಟಿಯ ನಡೆಗೆ ಆಕ್ರೋಶ! Aishwarya Chandran
- ಮಲಯಾಳಂ ಚಿತ್ರರಂಗದಲ್ಲಿ ಗಣ್ಯರ ಸಮ್ಮುಖದಲ್ಲಿ ಧರಿಸುವ ಉಡುಪಿನ ಆಯ್ಕೆ ಕುರಿತು ಹಿರಿಯ ನಟಿ ತೇಸ್ನಿ ಖಾನ್ ತೀವ್ರ ಅಸಮಾಧಾನ
- ಮುಖ್ಯಮಂತ್ರಿಗಳ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನವನಟಿ ಐಶ್ವರ್ಯ ಚಂದ್ರನ್ ಅವರ ವಸ್ತ್ರವಿನ್ಯಾಸವನ್ನು ಬಹಿರಂಗವಾಗಿ ಟೀಕಿಸಿದ ತೇಸ್ನಿ ಖಾನ್
- ಸಾರ್ವಜನಿಕ ಸಮಾರಂಭಗಳಲ್ಲಿ ಯುವ ನಟಿಯರು ಭಾಗವಹಿಸುವಾಗ ಸ್ವಲ್ಪ ಸಂಯಮದಿಂದ ಹಾಗೂ ಡೀಸೆಂಟ್ ಆಗಿ ಬಟ್ಟೆ ಧರಿಸಬೇಕೆಂದು ಸಲಹೆ
- ವೇದಿಕೆಯಲ್ಲಿ ಮುಖ್ಯಮಂತ್ರಿಗಳ ಜೊತೆ ಫೋಟೋಗೆ ಪೋಸ್ ನೀಡಿದ ನಟಿಯ ಉಡುಪಿನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಿಸಿಬಿಸಿ ಚರ್ಚೆ
ತಿರುವನಂತಪುರಂ: ಸಾರ್ವಜನಿಕ ಸಮಾರಂಭಗಳು ಮತ್ತು ಗಣ್ಯರ ಭೇಟಿಯ ವೇಳೆ ಉಡುಪಿನ ಆಯ್ಕೆ ಹೇಗಿರಬೇಕು ಎಂಬ ಬಗ್ಗೆ ಮಲಯಾಳಂ ಚಿತ್ರರಂಗದಲ್ಲಿ ಹೊಸ ಚರ್ಚೆಯೊಂದು ಮುನ್ನೆಲೆಗೆ ಬಂದಿದೆ. ಮುಖ್ಯಮಂತ್ರಿಗಳು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಯವ ನಟಿಯೊಬ್ಬರ ( Aishwarya Chandran ) ವಸ್ತ್ರವಿನ್ಯಾಸವನ್ನು ಹಿರಿಯ ನಟಿ ತೇಸ್ನಿ ಖಾನ್ ಬಹಿರಂಗವಾಗಿ ಟೀಕಿಸಿದ್ದು, ಸದ್ಯ ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಕೊಚ್ಚಿಯಲ್ಲಿ ನಡೆದ ಖಾಸಗಿ ಸ್ವರ್ಣ ಮಳಿಗೆಯ ಉದ್ಘಾಟನಾ ಸಮಾರಂಭದಲ್ಲಿ ರಾಜಕೀಯ ನಾಯಕರು ಹಾಗೂ ಗಣ್ಯರು ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಜೋಜು ಜಾರ್ಜ್ ನಿರ್ದೇಶನದ ಹೊಸ ಸಿನಿಮಾ 'ಪರಿಪಾಢಿ' ಮೂಲಕ ನಾಯಕಿಯಾಗಿ ಪದಾರ್ಪಣೆ ಮಾಡುತ್ತಿರುವ ಇನ್ಫ್ಲುಯೆನ್ಸರ್ ಕಮ್ ಉದ್ಯಮಿಯೂ ಆದ ನಟಿ ಐಶ್ವರ್ಯ ಚಂದ್ರನ್ ಕೂಡ ಉಪಸ್ಥಿತರಿದ್ದರು.
ಕಾರ್ಯಕ್ರಮದ ವೇಳೆ ಐಶ್ವರ್ಯ ಚಂದ್ರನ್ ಅವರು ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರೊಂದಿಗೆ ವೇದಿಕೆಯಲ್ಲಿ ಫೋಟೋ ತೆಗೆಸಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ವೈರಲ್ ವಿಡಿಯೋವನ್ನು ವೀಕ್ಷಿಸಿದ ಹಿರಿಯ ನಟಿ ತೇಸ್ನಿ ಖಾನ್, ಐಶ್ವರ್ಯ ಅವರ ಉಡುಪಿನ ಕುರಿತು ನೇರವಾದ ಹಾಗೂ ಅಸಮಾಧಾನದ ಕಾಮೆಂಟ್ ಮಾಡಿದ್ದಾರೆ.
ಮಕ್ಕಳ ಸ್ವಾತಂತ್ರ್ಯವನ್ನು ಗೌರವಿಸುವುದಾಗಿ ಹೇಳಿರುವ ತೇಸ್ನಿ ಖಾನ್, ಇದು ನನಗೆ ಆಗಾಗ್ಗೆ ಅನಿಸುವ ವಿಚಾರ. ಇದು ತಪ್ಪು ಅಥವಾ ಸರಿ ಎಂಬುದು ನನಗೆ ತಿಳಿಯುವುದಿಲ್ಲ. ಇಂದಿನ ಪೀಳಿಗೆ ಮಕ್ಕಳು ಹೇಗೆ ಬೇಕಾದರೂ ತಿರುಗಾಡಬಹುದು, ಅವರಿಗೆ ಆ ಹಕ್ಕಿದೆ. ಆದರೆ ಮುಖ್ಯಮಂತ್ರಿಯಂತಹ ಗಣ್ಯರು ಹಾಗೂ ಉತ್ತಮ ಗುಣಮಟ್ಟದ ಸಭೆಗಳು ನಡೆಯುವ ಜಾಗಕ್ಕೆ ಬರುವಾಗ ಸ್ವಲ್ಪ ಸಂಯಮದಿಂದ ಮತ್ತು ಡೀಸೆಂಟ್ ಆಗಿ ಉಡುಪು ಧರಿಸಿದರೆ ಒಳ್ಳೆಯದು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹಿರಿಯ ನಟಿಯ ಈ ಕಾಮೆಂಟ್‌ಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಅನೇಕರು ತೇಸ್ನಿ ಖಾನ್ ಮಾತಿಗೆ ಸಹಮತ ವ್ಯಕ್ತಪಡಿಸಿದ್ದಾರೆ. ನಟಿ ಐಶ್ವರ್ಯ ಚಂದ್ರನ್ ಹಾಗೂ ತೇಸ್ನಿ ಖಾನ್ ನಡುವಿನ ಈ ವಿವಾದಾತ್ಮಕ ಚರ್ಚೆಯು ಸದ್ಯ ಸಿನಿರಂಗದ ವಲಯದಲ್ಲಿ ಮತ್ತು ನೆಟ್ಟಿಗರ ಮಧ್ಯೆ ಬಿಸಿಬಿಸಿಯಾದ ಚರ್ಚೆಗೆ ಕಾರಣವಾಗಿದೆ, (ಏಜೆನ್ಸೀಸ್).