ನೀಟ್ ಮರುಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದ್ದಕ್ಕೆ ವಿದ್ಯಾರ್ಥಿನಿ ಸಾವಿಗೆ ಶರಣು: ಕಣ್ಣೀರು ತರಿಸುತ್ತೆ ಆಕೆಯ ಕೊನೇ ಮಾತು! NEET Aspirant
- ನೀಟ್ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದ್ದಕ್ಕೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ
- ನೀಟ್ ಫಲಿತಾಂಶದ ಒತ್ತಡ ತಾಳಲಾರದೆ ಡೆತ್ ನೋಟ್ ಬರೆದಿಟ್ಟು ವಿದ್ಯಾರ್ಥಿನಿ ಪ್ರಾಣತ್ಯಾಗ
- ಪೋಷಕರ ಕನಸು ನನಸು ಮಾಡಲು ಸಾಧ್ಯವಾಗಲಿಲ್ಲವೆಂದು ಮನನೊಂದ ಅಂಕಿತಾ ಆತ್ಮಹತ್ಯೆಗೆ ಶರಣು
- ನೀಟ್‌ನಲ್ಲಿ ಕಡಿಮೆ ಅಂಕ ಪಡೆದಿದ್ದಕ್ಕೆ ಬೇಸರಗೊಂಡು ದುರಂತ ಅಂತ್ಯ ಕಂಡ ಉದಯೋನ್ಮುಖ ವಿದ್ಯಾರ್ಥಿನಿ
ಮುಂಬೈ: ನೀಟ್ ಮರುಪರೀಕ್ಷೆಯಲ್ಲಿ ಕಡಿಮೆ ಅಂಕಗಳು ಬಂದಿದ್ದಕ್ಕೆ ಮನನೊಂದು ವಿದ್ಯಾರ್ಥಿನಿಯೊಬ್ಬಳು ( NEET Aspirant ) ಸಾವಿಗೆ ಶರಣಾದ ಆಘಾತಕಾರಿ ಘಟನೆ ಮಹಾರಾಷ್ಟ್ರದ ಅಹಲ್ಯಾನಗರದಲ್ಲಿ ನಡೆದಿದೆ. ತಂದೆ-ತಾಯಿ ಮತ್ತು ಅಣ್ಣ ತನ್ನ ಮೇಲಿಟ್ಟಿದ್ದ ನಂಬಿಕೆ ಹಾಗೂ ಪ್ರೀತಿಯನ್ನು ಪೂರೈಸಲು ಸಾಧ್ಯವಾಗಲಿಲ್ಲ ಎಂಬ ನೋವಿನಿಂದಲೇ ಯುವತಿ ಬದುಕಿಗೇ ಗುಡ್‌ಬೈ ಹೇಳಿದ್ದಾಳೆ.
ಅಹಲ್ಯಾನಗರ ಜಿಲ್ಲೆಯ ಜಲಾಲ್ಪುರ ಗ್ರಾಮದ ನಿವಾಸಿ ಅಂಕಿತಾ ಸಾಂಗ್ಲೆ ಅಕಾಲಿಕವಾಗಿ ಪ್ರಾಣ ಕಳೆದುಕೊಂಡ ದುರ್ದೈವಿ. ಎಂಬಿಬಿಎಸ್ ಅಥವಾ ವೈದ್ಯಕೀಯ ಶಿಕ್ಷಣ ಪಡೆದು ಸಾಧನೆ ಮಾಡಬೇಕೆಂಬ ಕನಸು ಹೊತ್ತಿದ್ದ ಅಂಕಿತಾ, ಕಳೆದ ಶನಿವಾರ ಸಂಜೆ ಸುಮಾರು 4.30ರ ಸುಮಾರಿಗೆ ತನ್ನ ಸ್ವಗೃಹದ ಕೊಠಡಿಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆದ ರಾಷ್ಟ್ರೀಯ ಅರ್ಹತಾ ಹಾಗೂ ಪ್ರವೇಶ ಪರೀಕ್ಷೆಯಲ್ಲಿ (NEET) ಅಂಕಿತಾ ಕೇವಲ 166 ಅಂಕಗಳನ್ನು ಗಳಿಸಿದ್ದಳು. ಫಲಿತಾಂಶ ಬಂದಾಗಿನಿಂದಲೂ ತೀವ್ರ ಮಾನಸಿಕ ಒತ್ತಡದಲ್ಲಿದ್ದ ಆಕೆ, ತನ್ನ ಕುಟುಂಬದವರ ಆಕಾಂಕ್ಷೆಗಳಿಗೆ ತಕ್ಕಂತೆ ಸಾಧನೆ ಮಾಡಲು ಸಾಧ್ಯವಾಗಲಿಲ್ಲವಲ್ಲ ಎಂಬ ನೋವಿನಲ್ಲೇ ಈ ತೀವ್ರ ನಿರ್ಧಾರ ಕೈಗೊಂಡಿದ್ದಾಳೆ ಎಂದು ಆಕೆಯ ಕುಟುಂಬಸ್ಥರು ಕಣ್ಣೀರು ಹಾಕುತ್ತಾ ತಿಳಿಸಿದ್ದಾರೆ.
ಆತ್ಮಹತ್ಯೆಗೂ ಮುನ್ನ ಅಂಕಿತಾ ಮರಾಠಿ ಭಾಷೆಯಲ್ಲಿ ಬರೆದಿಟ್ಟಿರುವ ಡೆತ್‌ನೋಟ್ ಪತ್ತೆಯಾಗಿದ್ದು, ಪ್ರತಿಯೊಬ್ಬರ ಹೃದಯ ಕಲಕುವಂತಿದೆ. ನೀವು ನನ್ನನ್ನು ಅಪಾರವಾಗಿ ಪ್ರೀತಿಸಿದ್ದೀರಿ, ಆದರೆ ನಿಮ್ಮ ಒಂದೇ ಒಂದು ಆಸೆಯನ್ನೂ ಈಡೇರಿಸಲು ನನ್ನಿಂದ ಸಾಧ್ಯವಾಗಲಿಲ್ಲ. ಅಮ್ಮಾ, ನೀನು ಪ್ರತಿಯೊಂದು ಕಷ್ಟದಲ್ಲೂ ನನಗೆ ಸ್ನೇಹಿತೆಯಂತೆ ಬೆಂಬಲವಾಗಿ ನಿಂತೆ. ದಾದಾ (ಅಣ್ಣ), ನೀನಂತೂ ಅಮ್ಮ-ಅಪ್ಪನಿಗಿಂತ ಹೆಚ್ಚಾಗಿ ನನ್ನನ್ನು ಪ್ರೀತಿಸಿದೆ. ನನ್ನ ಈ ನಿರ್ಧಾರಕ್ಕೆ ನೀವು ಯಾರೂ ಕಾರಣರಲ್ಲ ಎಂದು ಬರೆದಿದ್ದಾಳೆ.
ನಾನು ನೀಟ್ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಾಗ ನನಗಾಗಿ ನೀವು ಪ್ರತಿಯೊಂದನ್ನೂ ತ್ಯಾಗ ಮಾಡಿದ್ದೀರಿ. ಆದರೆ, ನಾನು ಪರೀಕ್ಷೆಯಲ್ಲಿ ವಿಫಲಳಾಗಿ ನಿಮ್ಮ ಕನಸುಗಳನ್ನು ನನಸು ಮಾಡಲು ಸಾಧ್ಯವಾಗಲಿಲ್ಲ ಎಂದು ನೊಂದಿದ್ದ ಅಂಕಿತಾ, ತನ್ನ ಡೆತ್‌ನೋಟ್ ಕೊನೆಯಲ್ಲಿ, ಅಣ್ಣಾ, ದಯವಿಟ್ಟು ಅಮ್ಮ ಮತ್ತು ಅಪ್ಪನನ್ನು ಚೆನ್ನಾಗಿ ನೋಡಿಕೋ, ಅವರಿಗೆ ಯಾವುದಕ್ಕೂ ಕೊರತೆಯಾಗದಂತೆ ಕಾಪಾಡು ಎಂದು ಬೇಡಿಕೊಂಡಿದ್ದಾಳೆ.
ಸದ್ಯ ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ, (ಏಜೆನ್ಸೀಸ್).