ಬೃಹತ್ ಕುಟುಂಬ  
ದೇಶ

35 ಕೋಳಿ, 90 ಕೆಜಿ ಅನ್ನ! ವಿಶ್ವದ ಅತಿದೊಡ್ಡ​ ಕುಟುಂಬದ ರೇಷನ್​ ಪಟ್ಟಿ ಕೇಳಿದ್ರೆ ನೀವು ಬೆರಗಾಗೋದು ಖಚಿತ

ಪ್ರಮುಖ ಮುಖ್ಯಾಂಶಗಳು

  • ಮನೆಯ ಮೇಟಿಗೆ 39 ಪತ್ನಿಯರು, 94 ಮಕ್ಕಳು
  • 200 ಮಂದಿ ಒಂದೇ ಸೂರಿನಡಿ ಬದುಕುತ್ತಿರುವುದು ರೋಚಕ
  • ಜಗಳವಿಲ್ಲ, ಒಡಕು, ಮನಸ್ತಾಪ ಇಲ್ಲವೇ ಇಲ್ಲ
  • ವಿಶ್ವದ ಅತಿದೊಡ್ಡ ಕುಟುಂಬ ಎಂಬ ದಾಖಲೆ
Giant Family: ಇತ್ತೀಚಿನ ದಿನಗಳಲ್ಲಿ, ಗಂಡ, ಹೆಂಡತಿ ಮತ್ತು ಇಬ್ಬರು ಮಕ್ಕಳಿರುವ ಕುಟುಂಬ ಬದುಕುವುದು ಅತ್ಯಂತ ಕಷ್ಟಕರವಾಗಿದೆ. ಅದರಲ್ಲೂ ಇಂದಿನ ಬೆಲೆ ಏರಿಕೆ ನೋಡಿದರೆ, ಕುಟುಂಬದ ನಾಲ್ವರು ಸದಸ್ಯರು ಜೀವನ ಸಾಗಿಸುವುದು ನಿಜಕ್ಕೂ ಕಷ್ಟಸಾಧ್ಯವೇ. ಹೀಗಿರುವಾಗ, ಇಲ್ಲೊಂದು ಫ್ಯಾಮಿಲಿಗೆ ದಿನಕ್ಕೆ 35ಕ್ಕೂ ಅಧಿಕ ಕೋಳಿ ಮಾಂಸ ಮತ್ತು 90 ಕೆಜಿ ಅಕ್ಕಿಯ ಅಗತ್ಯವಿದೆ ಎಂಬ ಸಂಗತಿ ಕೇಳಿ ನೆಟ್ಟಿಗರು ಒಂದು ನಿಮಿಷ ಬೆರಗಾಗಿದ್ದಾರೆ.
ಕೆಲವರಂತು ಇದು ನಮ್ಮಿಂದ ಮಾತ್ರ ಸಾಧ್ಯವೇ ಇಲ್ಲ ಎಂದಿದ್ದಾರೆ. ಈ ಹಿಂದೆಯೆಲ್ಲ ಕೂಡು ಕುಟುಂಬಗಳು ಹಳ್ಳಿ-ಪಟ್ಟಣಗಳಲ್ಲಿದ್ದವು. ಒಂದೇ ಮನೆಯಲ್ಲಿ 20ಕ್ಕೂ ಹೆಚ್ಚು ಮಂದಿ ವಾಸ ಮಾಡುವುದಲ್ಲದೇ, ಜೀವನವನ್ನು ಖುಷಿ, ನೆಮ್ಮದಿಯಿಂದ ಬದುಕಿದ ಹಲವು ನಿದರ್ಶನಗಳಿವೆ.  ಆದರೆ, ಇಂದಿನ ಕಾಲಘಟ್ಟದಲ್ಲಿ ಅವಿಭಕ್ತ ಕುಟುಂಬಗಳು ತೀರ ವಿರಳ. ಆದರೆ, ಭಾರತದ ಒಂದು ದೂರದ ಹಳ್ಳಿಯಲ್ಲಿ, ವಿಚಿತ್ರ ಮತ್ತು ಅಸಾಮಾನ್ಯ ಮಹಾ ಸಾಮ್ರಾಜ್ಯಯೊಂದು ಇರುವುದು ನಿಜಕ್ಕೂ ಅಚ್ಚರಿ ಉಂಟುಮಾಡುತ್ತದೆ.
ಒಂದು ಕುಟುಂಬ, ಒಂದೇ ಛಾವಣಿ. ಆದರೆ, ಸದಸ್ಯರ ಸಂಖ್ಯೆಯನ್ನು ಕೇಳಿದರೆ ನಿಮ್ಮ ಕಣ್ಣುಗಳು ಇದ್ಯಾವುದನ್ನು ಆರಂಭದಲ್ಲಿ ನಂಬುವುದೇ ಇಲ್ಲ. ಒಂದಲ್ಲ, ಎರಡಲ್ಲ ಸ್ವಾಮಿ! ಒಟ್ಟು 200 ಸದಸ್ಯರು ಒಂದೇ ಮನೆಯಲ್ಲಿ ಒಟ್ಟಿಗೆ ವಾಸಿಸುತ್ತಿದ್ದಾರೆ. ವಿಶ್ವದ ಅತಿದೊಡ್ಡ ಕುಟುಂಬ ಎಂಬ ವಿಶ್ವ ಗಿನ್ನಿಸ್​​ ದಾಖಲೆಯನ್ನು ಈ ಕುಟುಂಬ ಸೃಷ್ಟಿಸಿದೆ. ಜನರ ಹುಬ್ಬೇರಿಸುವ ಸಂಗತಿ ಬಹಳ ಹಿಂದೆಯೇ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡಿದೆ. 

ಮನೆಯ ಮೇಟಿಗೆ 39 ಪತ್ನಿಯರು, 94 ಮಕ್ಕಳು

ಇದು ಭಾರತದ ಈಶಾನ್ಯ ರಾಜ್ಯವಾದ ಮಿಜೋರಾಂನಲ್ಲಿರುವ ಬಕ್ತಾಂಗ್ ಎಂಬ ಗ್ರಾಮ. ಇಲ್ಲಿ ವಾಸ ಮಾಡುತ್ತಿರುವ ವ್ಯಕ್ತಿ ಜಿಯೋನಾ ಚಾನಾ ಈ ಬೃಹತ್​ ಕುಟುಂಬದ ಒಡೆಯ. ಮಿಜೋರಾಂನಲ್ಲಿ ಬಹುಪತ್ನಿತ್ವವನ್ನು ರೂಢಿಸಿಕೊಂಡಿರುವ ವಿಶೇಷ ಬುಡಕಟ್ಟಿನ ಪ್ರಮುಖ ವ್ಯಕ್ತಿಯಾಗಿದ್ದಾರೆ. ಜಿಯೋನಾ ಚಾನಾಗೆ ಒಟ್ಟು 39 ಹೆಂಡತಿಯರು, 94 ಮಕ್ಕಳು ಮತ್ತು 33 ಮೊಮ್ಮಕ್ಕಳಿದ್ದಾರೆ. ದುರದೃಷ್ಟವಶಾತ್, ಜಿಯೋನಾ 2021ರಲ್ಲಿ 76ನೇ ವಯಸ್ಸಿನಲ್ಲಿ ನಿಧನರಾದರು. ಆದರೂ ಸಹ ಈ ದೈತ್ಯ ಕುಟುಂಬದ ವ್ಯವಸ್ಥೆ ಇಂದಿಗೂ ಹಾಗೆಯೇ ಮುಂದುವರೆದಿದೆ ಮತ್ತು ಅದೇ ಶಿಸ್ತಿನಿಂದ ಸಾಗುತ್ತಿರುವುದು ಗಮನಾರ್ಹ.

ಈ 200 ಜನರ ವಾಸ ಎಲ್ಲಿ?

ಅಷ್ಟಕ್ಕೂ ಈ 200ಕ್ಕೂ ಹೆಚ್ಚು ಮಂದಿ ವಾಸವಿರುವುದು ಯಾವುದೇ ಹೋಟೆಲ್ ಅಥವಾ ವಿಲ್ಲಾದಲ್ಲಿ ಅಲ್ಲ! ಅವರೆಲ್ಲರೂ ನ್ಯೂ ​​ಜನರೇಷನ್ ಹೌಸ್ (ಚುವಾನ್ ಥಾರ್ ರನ್) ಎಂಬ ಒಂದೇ ಬೃಹತ್ ಕಟ್ಟಡದಲ್ಲಿ ವಾಸಿಸುತ್ತಿದ್ದಾರೆ. ಇದು ನಾಲ್ಕು ಅಂತಸ್ತಿನ ದೊಡ್ಡ ಕಟ್ಟಡವಾಗಿದೆ. ಇದರಲ್ಲಿ 100 ರೂಮ್​ಗಳಿವೆ. ಜಿಯೋನಾ ಚಾನಾ ಅವರ ಎಲ್ಲಾ ಪತ್ನಿಯರು ಒಂದು ದೊಡ್ಡ ಮಲಗುವ ಕೊಠಡಿಯನ್ನು ಹಂಚಿಕೊಳ್ಳುತ್ತಾರೆ. ಮಕ್ಕಳು ಮತ್ತು ಸೊಸೆಯಂದಿರಿಗೆ ಪ್ರತ್ಯೇಕ ರೂಮ್​ಗಳಿವೆ. ಇದು ತನ್ನದೇ ಆದ ಶಾಲೆ, ಆಟದ ಮೈದಾನ, ಕೃಷಿ ಹೊಲಗಳು ಸಹ ಈ ಫ್ಯಾಮಿಲಿಗಿದೆ. 

ಒಂದು ದಿನಕ್ಕೆ 30ರಿಂದ 35 ಕೋಳಿಗಳು

ಈ ಮನೆಯಲ್ಲಿ, ಪ್ರತಿನಿತ್ಯದ ಅಡುಗೆ ಒಂದು ದೊಡ್ಡ ಸಮಾರಂಭ ಅಥವಾ ಮದುವೆಗೆ ಮಾಡಿದಂತೆ. ಕುಟುಂಬಕ್ಕೆ ಒಂದು ತಿಂಗಳ ರೇಷನ್​ ಕೇವಲ ಒಂದು ದಿನಕ್ಕೆ ಬೇಕಿದೆ. ಇವರ ಅಡುಗೆ ಮನೆಗಳನ್ನು ನೋಡಿದರೆ ಇಷ್ಟು ದೊಡ್ಡದೇ ಎನ್ನುವಂತಿದೆ. ವರದಿಗಳ ಪ್ರಕಾರ, ಈ ಕುಟುಂಬವು ಪ್ರತಿನಿತ್ಯ 45ರಿಂದ 90 ಕೆಜಿ ಅಕ್ಕಿಯನ್ನು ಬಳಸುತ್ತಾರೆ. ಜೊತೆಗೆ 40 ಕೆಜಿ ಆಲೂಗಡ್ಡೆ, 25 ಕೆಜಿ ತರಕಾರಿಗಳು ಮತ್ತು 20 ಕೆಜಿ ಇತರೆ ಧಾನ್ಯಗಳನ್ನು ಬೇಯಿಸುತ್ತಾರೆ. ಇನ್ನು ಮಾಂಸಾಹಾರಿ ಭಕ್ಷ್ಯಗಳ ವಿಷಯಕ್ಕೆ ಬಂದರೆ, ಒಂದು ಊಟಕ್ಕೆ 30ರಿಂದ 35 ಕೋಳಿಗಳು (ಅಂದರೆ ಸುಮಾರು 60 ಕೆಜಿ ಮಾಂಸ) ಕುಟುಂಬದ ಹೊಟ್ಟೆ ತುಂಬಿಸಲು ಬೇಕಿದೆ.

'ಬಿಲೀವ್ ಇಟ್ ಆರ್ ನಾಟ್'

ಈ ಬೃಹತ್​ ಕುಟುಂಬವು ಅಂತಾರಾಷ್ಟ್ರೀಯ ಮಾಧ್ಯಮಗಳು, ಗಿನ್ನಿಸ್​ ದಾಖಲೆಗಳ ಪುಟಗಳನ್ನು ಸೇರಿದೆ. ಈ ಕುಟುಂಬದ ಕಥೆಯನ್ನು 'ರಿಪ್ಲೀಸ್ ಬಿಲೀವ್ ಇಟ್ ಆರ್ ನಾಟ್' ಎಂಬ ವಿಶ್ವಪ್ರಸಿದ್ಧ ಪುಸ್ತಕದಲ್ಲಿಯೂ ಪ್ರಕಟಿಸಲಾಗಿದೆ. ವಿಚಿತ್ರ ಕುಟುಂಬ, ಅವರ ಅಡುಗೆಮನೆ ಮತ್ತು ಅವರು ಸಹಬಾಳ್ವೆ ವಿಧಾನವನ್ನು ನೋಡಲು ಪ್ರಪಂಚದಾದ್ಯಂತದ ಸಾಕ್ಷ್ಯಚಿತ್ರ ನಿರ್ದೇಶಕರು ಮತ್ತು ಪ್ರವಾಸಿಗರು ಮಿಜೋರಾಂನ ಈ ಬಕ್ತಾಂಗ್ ಹಳ್ಳಿಗೆ ಆಗಮಿಸಿದ್ದಾರೆ,(ಏಜೆನ್ಸೀಸ್).