ಪುಣೆ: ಮಹಾರಾಷ್ಟ್ರದ ಸ್ಥಳೀಯ ಚುನಾವಣೆಗಳು ಆರಂಭವಾಗಿದ್ದು, ಮಾಲೆಗಾಂವ್ನಲ್ಲಿ ಡಿಸಿಎಂ ಅಜಿತ್ ಪವಾರ್(DCM Ajit Pawar), ಮತದಾರರಿಗೆ ನಿಮ್ಮ ಬಳಿ ಮತಗಳಿವೆ, ನನ್ನ ಬಳಿ ಹಣ ಇದೆ. ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಆಯ್ಕೆ ಮಾಡದೇ ತಿರಸ್ಕರಿಸಿದ್ರೆ, ನಾನು ನಿಮ್ಮನ್ನು ತಿರಸ್ಕರಿಸುತ್ತೇನೆ ಎಂದು ಎಚ್ಚರಿಕೆ ನೀಡಿ ವಿವಾದವನ್ನು ಹುಟ್ಟು ಹಾಕಿದ್ದಾರೆ.
ಶುಕ್ರವಾರ(ನ. 21) ಬಾರಾಮತಿ ತಹಸಿಲ್‌ನ ಮಾಲೆಗಾಂವ್ ನಗರ ಪಂಚಾಯತ್ ಚುನಾವಣೆಗೆ ಪ್ರಚಾರ ನಡೆಸುವಾಗ ಮಾತನಾಡಿರುವ ಅವರು, ನೀವು ಎಲ್ಲಾ 18 NCP ಅಭ್ಯರ್ಥಿಗಳನ್ನು ಆಯ್ಕೆ ಮಾಡಿದರೆ ಹಣದ ಕೊರತೆಯಾಗದಂತೆ ನಾನು ನೋಡಿಕೊಳ್ತೇನೆ. ನಾನು ಭರವಸೆ ನೀಡಿದ್ದನ್ನು ನೀಡಲು ಬದ್ಧನಾಗಿದ್ದೇನೆ. ಆದರೆ ನೀವು ತಿರಸ್ಕರಿಸಿದರೆ, ನಾನು ಸಹ ತಿರಸ್ಕರಿಸುತ್ತೇನೆ. ನಿಮ್ಮ ಬಳಿ ಮತಗಳಿವೆ, ನನ್ನ ಬಳಿಯೂ ಹಣವಿದೆ ಎಂದು ಹೇಳಿದ್ದಾರೆ.
ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಮುಖ್ಯಸ್ಥರಾಗಿರುವ ಅಜಿತ್ ಪವಾರ್, ಬಿಜೆಪಿ-ಎನ್‌ಸಿಪಿ-ಶಿವಸೇನೆ ಸರ್ಕಾರದಲ್ಲಿ ಡಿಸಿಎಂ ಆಗಿದ್ದು, ಪ್ರಮುಖವಾಗಿ ಹಣಕಾಸು ಖಾತೆಯನ್ನು ಹೊಂದಿದ್ದಾರೆ.
ಅಜಿತ್ ಪವಾರ್ ಹೇಳಿಕೆಗೆ ವಿಪಕ್ಷಗಳಿಂದ ಟೀಕೆ
ಅಜಿತ್ ಪವಾರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಶಿವಸೇನೆ (ಯುಬಿಟಿ) ನಾಯಕ ಅಂಬಾದಾಸ್ ದಾನ್ವೆ, ಅವರು ತಮ್ಮ ಹೇಳಿಕೆಗಳಿಂದ ಮತದಾರರನ್ನು ಬೆದರಿಸುತ್ತಿದ್ದಾರೆ ಎಂದು ಆರೋಪಿಸಿದ್ದು, ಜನಸಾಮಾನ್ಯರು ಪಾವತಿಸುವ ತೆರಿಗೆಯಿಂದ ಹಣವನ್ನು ನೀಡಲಾಗುತ್ತದೆಯೇ ಹೊರತು ಅಜಿತ್ ಪವಾರ್ ಅವರ ಮನೆಯಿಂದ ಅಲ್ಲ. ಪವಾರ್ ಅವರಂತಹ ನಾಯಕರು ಮತದಾರರಿಗೆ ಬೆದರಿಕೆ ಹಾಕುತ್ತಿದ್ದರೆ, ಚುನಾವಣಾ ಆಯೋಗ ಏನು ಮಾಡುತ್ತಿದೆ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ (ಏಜೆನ್ಸೀಸ್).